Advertisement

ಮನೆ ಮನೆಗೆ ಗಂಗೆ; 576 ಕೋಟಿರೂ. ವೆಚ್ಚದ ಕಾಮಗಾರಿ: ಸಚಿವ ಸುನಿಲ್‌

04:48 PM Jan 26, 2023 | Team Udayavani |

ಮಂಗಳೂರು: ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆ ಮನೆಗೆ ಗಂಗೆ ಎಂಬ ಧ್ಯೇಯೋದ್ದೇಶದೊಂದಿಗೆ ಜಿಲ್ಲೆಯಲ್ಲಿ 3 ಹಂತಗಳಲ್ಲಿ ಒಟ್ಟು 576 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದ್ದಾರೆ.

Advertisement

ನೆಹರೂ ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣಗೈದು ಅವರು ಸಂದೇಶ ನೀಡಿ, ಜಿಲ್ಲೆಗೆ 1040 ಕೋಟಿ ರೂ. ವೆಚ್ಚದಲ್ಲಿ 7 ಹೊಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರಕಾರ ಯೋಜನೆ ರೂಪಿಸಿದೆ ಎಂದರು.

ಗುಣಮಟ್ಟದ ಶಿಕ್ಷಣವನ್ನು ನೀಡುವ ದೃಷ್ಟಿಯಿಂದ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ವಿವೇಕ ಶಾಲೆಗಳ ಯೋಜನೆಯಡಿ 275 ಕೊಠಡಿಗಳಿಗೆ 39.32 ಕೋಟಿ ರೂ. ಅನುದಾನವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ. ಶಾಲೆಗಳ ದುರಸ್ತಿಗಾಗಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ತಲಾ 50 ಲಕ್ಷ ರೂ.ನಂತೆ 4 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ ಹಾಗೂ ಪ್ರಾಕೃತಿಕ ವಿಕೋಪ ಪರಿಹಾರ ಅನುದಾನದಡಿ 289 ಪ್ರಾಥಮಿಕ ಶಾಲೆಗಳ ದುರಸ್ತಿಗಾಗಿ 5.54 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ದೃಷ್ಟಿಯಿಂದ 8 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಸುಮಾರು 33,000 ಫಲಾನುಭವಿಗಳು 65.63 ಕೋಟಿ ರೂ. ಮೊತ್ತದ ವೈದ್ಯಕೀಯ ವೆಚ್ಚವನ್ನು ಬಳಸಿದ್ದಾರೆ ಎಂದರು.

ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯ ಹೆಚ್ಚಿಸಲು ಸಂಪರ್ಕ ಸೇತುವೆ ನಿರ್ಮಿಸಲು ಗ್ರಾಮಬಂಧು ಸೇತುವೆ ಯೋಜನೆಯಡಿ 33.65 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೀಮ್ಡ್ ಫಾರಸ್ಟ್‌ಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಸಮಸ್ಯೆಯನ್ನು ಬಗೆಹರಿಸಲು ಪುನರ್ರಚಿತ ತಜ್ಞರ ಸಮಿತಿಯ ವರದಿ ಪ್ರಕಾರ ಜಿಲ್ಲೆಯಲ್ಲಿ 34850 ಹೆಕ್ಟೇರ್‌ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್‌ ಪಟ್ಟಿಯಿಂದ ಕೈಬಿಡಲು ಕ್ರಮವಹಿಸಲಾಗುತ್ತಿದೆ.

ಗ್ರಾಮ ಒನ್‌ ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 286 ಗ್ರಾಮ ಒನ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈವರೆಗೂ ವಿವಿಧ ಇಲಾಖೆಗಳಿಂದ ಒಟ್ಟು 2,80,788 ಅರ್ಜಿಗಳನ್ನು ಸ್ವೀಕರಿಸಿ ನಾಗರಿಕರಿಗೆ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

Advertisement

ಗಮನ ಸೆಳೆದ ವಿಂಟೇಜ್‌ ಕಾರು, ಬೈಕುಗಳು
ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ವಿಂಟೇಜ್‌ ಕಾರು ಮತ್ತು ಬೈಕುಗಳ ಪ್ರದರ್ಶನವು ಸೇರಿದ್ದವರನ್ನು ಆಕರ್ಷಿಸಿತು.

ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ವೇದವ್ಯಾಸ್‌ ಕಾಮತ್‌, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಮಂಗಳೂರು ಮೇಯರ್‌ ಜಯಾನಂದ ಅಂಚನ್‌, ಉಪ ಮೇಯರ್‌ ಪೂರ್ಣಿಮಾ, ಮೂಡಾ ಅಧ್ಯಕ್ಷ ರವಿಶಂಕರ್‌ ಮಿಜಾರು, ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌., ಪಶ್ಚಿಮ ವಲಯ ಐಜಿಪಿ ಡಾ| ಚಂದ್ರಗುಪ್ತ, ಮಂಗಳೂರು ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಷ್‌ ಸೋನಾವಣೆ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್‌, ಮಂಗಳೂರು ಮಹಾನಗರದ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ಕಸಪಾ ಜಿಲ್ಲಾಧ್ಯಕ್ಷ ಡಾ| ಶ್ರೀನಾಥ್‌, ಮಾಜಿ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬಂದಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ದ.ಕ. ಜಿಲ್ಲೆ ರಾಷ್ಟ್ರೀಯತೆಯ ಪ್ರಯೋಗ ಶಾಲೆ
ಭಾಷೆ, ರಾಷ್ಟ್ರೀಯತೆಯ ಮೂಲಕ ಈ ಜಿಲ್ಲೆಯನ್ನು ಕಟ್ಟುವ ಕೆಲಸವನ್ನು ಹಿರಿಯರು ಮಾಡುತ್ತಾ ಬಂದಿದ್ದು, ಜಿಲ್ಲೆ ರಾಷ್ಟ್ರೀಯತೆಯ ಪ್ರಯೋಗ ಶಾಲೆ ಎಂದರೂ ತಪ್ಪಾಗದು. ಯುವಕರು, ಜನಸಾಮಾನ್ಯರಲ್ಲಿ ರಾಷ್ಟ್ರೀಯತೆ, ಭಾರತೀಯತೆಯ ಭಾವನೆಯನ್ನು ಬೆಳೆಸುವ ಕಾರ್ಯವನ್ನು ಹಂತ ಹಂತವಾಗಿ ಆಡಳಿತ ಮತ್ತು ಸರಕಾರೇತರ ಸಂಸ್ಥೆಗಳ ಮೂಲಕ ಆಗಿದೆ. ಜಾತಿಗಿಂತ ದೇಶ ಮೇಲು ಎಂಬುದನ್ನು ಉಳಿದ ಜಿಲ್ಲೆಗಿಂತ ದ.ಕ. ಜಿಲ್ಲೆಯ ಜನ ಭಾವನಾತ್ಮಕವಾಗಿ ಒಪ್ಪಿಕೊಂಡಿದ್ದಾರೆ. ಸಂವಿಧಾನವನ್ನು ಗೌರವಿಸುವ ಅದನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯವನ್ನು 76ವರ್ಷಗಳ ಅವಧಿಯಲ್ಲಿ ಸಂವಿಧಾನದ ಎಲ್ಲಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ಈ ದೇಶದ ಆಡಳಿತ ವ್ಯವಸ್ಥೆ ಮಾಡಿದೆ. ಇದನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಸರಕಾರಿ ವ್ಯವಸ್ಥೆ ಜೊತೆಗೆ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಸರಕಾರಕ್ಕೆ ಉಚಿತಗಳ ಮೇಲೆ ನಂಬಿಕೆ ಇಲ್ಲ. ಖಚಿತತೆಯ ಮೇಲೆ ಮಾತ್ರ ನಂಬಿಕೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next