Advertisement

Hani Gavana: ಹನಿ ಸಾಗರ ಯಾವತ್ತೂ ಚಿಕ್ಕದೇ ಚೆಂದ!

01:04 PM Oct 08, 2023 | Team Udayavani |

ಚಳಿ-ಜ್ವರ

Advertisement

ಚಳಿ ಬಂದು

ವೈದ್ಯರ

ಬಳಿಹೋದೆ.

ಅವರ ಫೀಸು ಕೇಳಿ

Advertisement

ಜ್ವರ ಬಂತು!!

ಬಿತ್ತನೆ

ಕಾಳು ಬಿತ್ತುತ್ತೇನೆ

ಭೂತಾಯಿಯೊಡಲಿಗೆ…

ಮೊಳಕೆಯೊಡೆಯದಿದ್ದರೂ

ಸರಿಯೇ..

ಅದೇ ತುತ್ತು ಮುಂದೊಮ್ಮೆ

ಅಲ್ಲೇ ಹೂಳುವ

ನನ್ನೊಡಲಿಗೆ!

ಅಯಸ್ಕಾಂತದ ಗುಣಗಳು

ಕಾರಿಡಾರಿನಲ್ಲಿ ಬಂದ

ಹೈ ಹೀಲ್ಡ್ ಚಪ್ಪಲಿಯ ಶಬ್ದದತ್ತ

ಇಡೀ ತರಗತಿಯ ಕಣ್ಣುಗಳು!

ಆಗ ಮೇಷ್ಟ್ರು

ಮಾಡುತ್ತಿದ್ದ ಪಾಠ

ಅಯಸ್ಕಾಂತದ ಗುಣಗಳು!

ಪ್ರಯತ್ನ

ಪುಟ್ಟ ಹಣತೆ ನೀನು

ಜಗವನ್ನೆಲ್ಲ ಬೆಳಗುವ

ಹುಂಬತನವೇಕೆಂದು

ತಲೆಯೆತ್ತಿದೆ; ಮೇಲೆ

ಲಕ್ಷಾಂತರ ನಕ್ಷತ್ರಗಳು

ನಗುತ್ತಿದ್ದವು!

ಬೊಂಬೆ

ಅಮ್ಮ

ಗಾಯ ಮಾಡಿಕೊಂಡ ಅಣ್ಣನನ್ನು

ಆಸ್ಪತ್ರೆಗೆ ಕರೆದೊಯ್ಯುವಾಗ

ಮಗು ಅಚ್ಚರಿಯಲ್ಲಿ ನೋಡುತ್ತಿತ್ತು

ಆ ಮಗುವಿನ ಕೈಯಿಲ್ಲದೆ ಬೊಂಬೆ

ಕಸದ ಬುಟ್ಟಿಯಲ್ಲಿ ಮಲಗಿತ್ತು!

ಕನ್ನಡಿ

ಕನ್ನಡಿಯ ನೋಡಿ

ಕಲಿಯಬೇಕು ನೋಡಾ!

ಸತ್ಯವನೇ

ತೋರುವುದು

ಎದುರಿದ್ದರೂ ಕುರುಡ!

-ಎಲ್. ಎಂ. ಸಂತೋಷ್‌ ಕುಮಾರ್‌

*******************************************************

ಮಾತು-ಮೌನ!

ಮಾತೇ ಬೇಕಿಲ್ಲ, ಭಾವ ತಿಳಿಯಲು!

ಮೌನವೇ ಸಾಕಲ್ಲ, ಮನವ ಅರಿಯಲು!

ಮಾತು ಮುತ್ತಾಗಲು, ಮೌನ ಜೊತೆಯಾಗಬೇಕು!

ಮೌನ ಅರ್ಥವಾಗಲು, ಮಾತಿಗೆ ಮಿತಿ ಇರಬೇಕು!

ಬದುಕೆಂಬ ಸಂತೆ!

ಬದುಕೆಂಬ ಸಂತೆಯಲಿ ಬಗೆ ಬಗೆಯ ಅಂಗಡಿ!

ಸತ್ಯ, ಪ್ರಾಮಾಣಿಕತೆಯ ಬೆಲೆ ಸ್ವಲ್ಪ ದುಬಾರಿ!

ಬೆಣ್ಣೆ, ಸುಣ್ಣವಿದ್ದರೆ ರಿಯಾಯಿತಿ ತರಹೇವಾರಿ!

ಅಂತಃಸಾಕ್ಷಿಗೆ ಮಾತ್ರ ವ್ಯಾಪಾರ ಕುದುರದು ಸರಿ!

ಬಾಡಿಗೆಗಿಲ್ಲ ಮಳಿಗೆ!

ಬಾಡಿಗೆಗಿಲ್ಲ ಹೃದಯದ ಮಳಿಗೆ

ಸ್ವಂತ ಮಾಡಿಕೊಳ್ಳುವಿಯಾದರೆ ನೋಡು!

ಇಣುಕಿ ನೋಡಿ ಕಸ ಹಾಕುವಂತಿಲ್ಲ,

ಸ್ವತ್ಛವಿದ್ದು ವಾಸಿಸುವೆಯಾದರೆ ಬಂದುಬಿಡು!

ಬದುಕಿನ ಪಾಠ!

ಮೌಲ್ಯಗಳ ಪಾಣಿಪೀಠ, ಒಳಿತಿನೊಂದಿಗಿರುವ ಹಠ,

ಇಷ್ಟಿದ್ದರೆ ಗೆಲುವು ದಿಟ, ಇದು, ಬದುಕು ಕಲಿಸಿದ ಪಾಠ

-ಸುಮಾ ಸೂರ್ಯ

****************************************************

ಕಾಯುತ್ತಿದ್ದೇನೆ..!

ಅದೇಕೆ ಮಾತಾಡದೆ

ಮೌನವಾಗುಳಿವೆ ಒಮ್ಮೊಮ್ಮೆ

ಎಂದು ಪ್ರಶ್ನಿಸುತ್ತದೆ ಲೋಕ

ಮಾತಿಗೆ ಮುಂಚೆ ಉಕ್ಕಿದ

ಕಂಬನಿಯ ಕುಡಿದ ಕೆನ್ನೆಗೆ

ಪ್ರಶ್ನೆ ರವಾನಿಸಿ

ಉತ್ತರಕ್ಕೆ ಕಾಯುತ್ತಿದ್ದೇನೆ.

ಚಾಣಾಕ್ಷ

ದೂರವಿದ್ದರೆ

ಸಂಬಂಧವೂ ದೂರವಂತೆ

ನಿಜವೇ ಇರಬಹುದು

ನೀನೊಂದು ಅಪವಾದ

ಕನಸು ಮನಸಿನ

ನಿಷೇಧಿತ ಪ್ರದೇಶಕ್ಕೂ

ಅಕ್ರಮವಾಗಿ ಲಗ್ಗೆಯಿಡುವ

ಚಾಣಾಕ್ಷ ಅಪರಾಧಿ..

ಉದ್ದೇಶ

ಖುಷಿಯೋ ನೋವೋ

ಕೋಪವೋ ಏನೋ ನೆಪ..

ಭಾವಗಳು ನಿನ್ನ

ತಲುಪಲಷ್ಟೇ ನನ್ನೆಲ್ಲ ಪ್ರಲಾಪ..

ವೀರಸೈನಿಕ

ಹಾಲಿನ ಹುಡುಗ:

ಬದುಕಿನ

ಮುಂಜಾನೆಯ

ಯುದ್ಧ ಗೆದ್ದ

ವೀರಸೈನಿಕ

ಮೊಗ್ಗು

ಮಂಜಿನ ಹೊದಿಕೆಯೊಳಗೆ

ಬೆಚ್ಚಗೆ ಮಲಗಿದ

ಸ್ನಿಗ್ಧ ಸುಂದರಿ

ಕಣ್ತೆರೆಯದ ಸೋಮಾರಿ..

-ಅಮೃತಾ ಮೆಹೆಂದಳೆ

****************************************************************

ಅಮ್ಮ-ಮಗ

ನೈಸ್‌ ಮಾರ್ಬಲ್‌ ಖರೀದಿಸುತ್ತಿದ್ದ ಮಗ

ಅಮ್ಮನ ಒಡೆದ ಕಾಲು ನೋಡಿ

ಒರಟು ಕಲ್ಲು ತಂದು

ಹೊಸ ಮನೆಗೆ ಹಾಕಿಸಿದ

ಸ್ಪಷ್ಟತೆ

ಅಮ್ಮನ ಕಣ್ಣಿಗೆ

ಪೊರೆ ಬಂದಿದೆಯಂತೆ

ಮಕ್ಕಳೀಗ ಮೊದಲಿಗಿಂತ

ಸ್ಪಷ್ಟವಾಗಿ ಕಾಣುತ್ತಿದ್ದಾರೆ

ಸಾವಿನ ಸದ್ದು…

ಎಲೆಕ್ಟ್ರಿಕ್‌ ಬ್ಯಾಟಿನಲಿ

ಸಿಕ್ಕು ಸಾಯುವ ಸೊಳ್ಳೆಯ ಸಾವಿಗೆ

ಅದೆಷ್ಟು ಸದ್ದು.!!

ಒಂದೇ ಆತ್ಮ, ಹಲವು ಚಟಪಟ

ವಿಪರ್ಯಾಸ

ಬೆಂಕಿ ಪೊಟ್ಟಣದ ಎದೆಯೊಳಗೆ

ಎಷ್ಟೊಂದು ಸಾವುಗಳಿವೆ

ಹೊರಗೆ ಮಾತ್ರ

ಅಳಿಲಿನ ಚಿತ್ರ ಅಂಟಿಸಲಾಗಿದೆ!

-ಸೋಮು ಕುದರಿಹಾಳ

********************************************************************** 

ವಾಸ್ತವ

ಪಾತ್ರದಾಗ ನಾವ್‌

ಮೈ ಮರತ್ವಪಾ ಅಂದ್ರ

ನಾಟಕ ಛಲೋ ಆಗ್ತದ;

ಪಾತ್ರ ಬಿಟ್‌ ಆಜೂ- ಬಾಜೂಕ್‌

ನಡದ್ವಪಾ ಅಂದ್ರ

ಒಳಗಿನ್‌ ಕತಿ ಬಿದ್‌ ಹೋಗ್ತದ!

ಗೌರವ

ದುಃಖ ಕಟ್ಟೆಯೊಡೆದರೆ

ಕಣ್ಣ ಕಾಲುವೆಯದು

ಕೈಗೆ ಸಿಕ್ಕದು

ಮಾತಿನ ಭರದಿ

ನಾಲಗೆ

ಹರಿಯಬಿಟ್ಟರೆ

ಗೌರವ ದಕ್ಕದು!

ಕೃತಜ್ಞತೆ

ನಿಂತ ಮರ

ಹಣ್ಣು ತುಂಬಿ

ನೆಲಕೆ ಬಾಗಿತು

ನೀನಿತ್ತ ಅನ್ನ-ನೀರಿಗೆ

ಇದೋ ಶರಣೆಂದಿತು!

-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

**************************************************************

ಸೂಚನೆ

ಬನ ಅಂದಿತು

ಬಾಗಿಲಿಗೆ

ಬರಬೇಡ ಕಾಡಿಗೆ

ಹೊಲ ಅಂದಿತು

ನೇಗಿಲಿಗೆ

‘ಬರ’ ಬೇಡ ನಾಡಿಗೆ

ವ್ಯತ್ಯಾಸ

ದೊಡ್ಡದಿದ್ದರೂ ದಾಸವಾಳ

ಬೀರುವುದಿಲ್ಲ ಪರಿಮಳ

ಚಿಕ್ಕದಾದರೂ ಮಲ್ಲಿಗೆ

ಕಂಪು ಸೂಸುವುದು ಮೆಲ್ಲಗೆ.

ಹಣತೆ

ಹಣತೆಯ ಘನತೆಯನು

ಅರಿತಿದ್ದರೂ ಹಣತೆ

ಸುಡುವವರೆಗೂ ಬದಲಿಸದು

ತನ್ನ ನಡತೆ!

ಪ್ರಾಣಸಂಕಟ

ರೆಕ್ಕೆಯ ತೆಕ್ಕೆಯಿಂದ

ಚುಂಚವೆತ್ತಿದ ಮರಿಹಕ್ಕಿಗೆ

ಕೇಳಿಸಿದ್ದು ಕೋವಿಯ ಸದ್ದು

ಹೊರಗೆ ಇಣುಕಿದಾಗ

ಕಂಡದ್ದು ಗೂಡಿನ ಸುತ್ತ ಹದ್ದು

ಅವರವರ

ಭಾವಕ್ಕೆ…

ಕೂಡುವವರಿಗೆ

ಅಮಾವಾಸ್ಯೆಯಲ್ಲೂ

ಬೆಳದಿಂಗಳು.

ಕಾಡುವವರಿಗೆ

ಮೃಷ್ಟಾನ್ನವೂ

ತಂಗಳು!

-ದಿನೇಶ್‌ ಹೊಳ್ಳ

 

***************************************************

ಪಾಲು

ತಲೆ ಮೇಲಿದ್ದರೂ

ನಮಸ್ಕರಿಸುವುದು ಕೆಳಗಿರೋ ಕಾಲಿಗೆ;

ನಾವು ಎಷ್ಟೇ ಬಡಿದಾಡಿದರೂ

ಸಿಗಬೇಕಾದ್ದಷ್ಟೇ ಸಿಗೋದು ನಮ್ಮ ಪಾಲಿಗೆ!

ಹೊಂದಾಣಿಕೆ

ನಾಕು ದಿನ ಮಾತ್ರ ಆಮೇಲೆ

ಎಲ್ಲಾ ಸರಿ ಹೋಗುತ್ತೆ

ಹೊಂದಾಣಿಕೆ ಇದ್ರೆ ಹೂವೇನು

ಮುಳ್ಳೂ ಇಷ್ಟವಾಗುತ್ತೆ!

ಶಾಲಾ ಅಂಗಳದಲ್ಲಿ

ಮುದ್ದೆ ತಿಂದು ಬೆಳೆದ ನಾನು

ಅನ್ನ ಕಾಣುತ್ತಿದ್ದದ್ದು ಬರೀ ಹಬ್ಬಗಳಲ್ಲಿ

ತಿನ್ನಲಾರದೆ ಅನ್ನ

ಚೆಲ್ಲೋ ಮಕ್ಕಳನ್ನು ಕಂಡಾಗ

ಕಣ್ಣೀರಾಗುತ್ತೇನೆ ನಮ್ಮ ಶಾಲಾ ಅಂಗಳದಲ್ಲಿ!

ಕಷ್ಟದ ಕೆಲಸ

ಪ್ರೀತಿಸ್ತಾನೇ ಹೋಗೋದು

ಎಷ್ಟು ಕಷ್ಟ ಅಂತ ಮನುಷ್ಯ

ದ್ವೇಷಿಸೋದ್‌ ಕಲಿತ!

ಅಭ್ಯಾಸ ಬಲ!

ಜೀವನದುದ್ದಕ್ಕೂ

ಕಲ್ಲುಗಳನ್ನೇ ಪಡೆದ ನಾನು

ಹಣ್ಣು ಸಿಕ್ಕಾಗಲೂ

ಕಲ್ಲೊಂದು ಎಸೆದಿದ್ದೇನೆ!

ಚಿಂತೆ

ಮಚ್ಚಿನ ಕತ್ತಿಗೆ

ಕತ್ತು

ಕೊಟ್ಟ ಕೋಳಿ

ಸಾರಾಗಿ ಬೇಯುವಾಗ

ಹಿತ್ತಲಲ್ಲಿ ತಾನಿಟ್ಟ ಮೊಟ್ಟೆ

ಯಜಮಾನಿಗೆ ಸಿಕ್ತೋ ಇಲ್ವೋ

ಎಂದು ಯೋಚಿಸುತ್ತಿತ್ತು!

-ಸಂತೆಬೆನ್ನೂರು ಫೈಜ್ನ ಟ್ರಾಜ್‌

Advertisement

Udayavani is now on Telegram. Click here to join our channel and stay updated with the latest news.

Next