ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧವಾದ ಶಿವನ ದೇವಾಲಯ. ಸಮುದ್ರ ತೀರದಲ್ಲಿ ಎದ್ದು ಕಾಣುವ ದೇಗುಲದ ಗೋಪುರ. ದೂರದ ಊರಿನಿಂದ ಭಕ್ತರು ಬಂದು ಕೈ ಮುಗಿದು ಇಷ್ಟಾರ್ಥಗಳನ್ನು ಭಿನ್ನವಡಿಸಿಕೊಂಡು, ಇನ್ನೇನು ಮಹಾದೇವನ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದೀವಿ ಎಂದರೆ, ಸಕಲ ಸೌಭಾಗ್ಯಗಳು ಕಾಲಡಿ ಬಂದು ಬೀಳುತ್ತವೆ ಎಂದೆಣಿಸಿ ಗುಡಿಯಿಂದ ಹೊರ ನಡೆದು, ಸಮುದ್ರ ತೀರಕ್ಕೆ ಬಂದು ಅಲೆಗಳ ಸದ್ದು, ನೀರೊಳಗೆ ಆಟವಾಡುವ ಯುವಕ-ಯುವತಿಯರ, ಮಕ್ಕಳ ಸದ್ದಿನೊಳಗೆ ಮುಳುಗಿ ಹೋಗುತ್ತಿದ್ದರು.
“ಲೋ… ಮೋಹನ ಬಾರೋ.. ಬಾರೋ…’ ಎಂಬ ಗೆಳೆಯರ ಧ್ವನಿ ಕೇಳಿದರೂ ಕೇಳಿಸದಂತೆ ಗೋಪುರದ ಹೊರ ಬಾಗಿಲಿನಲ್ಲಿಯೇ ನಿಂತುಕೊಂಡಿದ್ದ ಮೋಹನ. ಗೆಳೆಯನನ್ನು ಒಳ ಕರೆಯುತ್ತಿದ್ದ ಗೆಳೆಯರೆಲ್ಲ ಗುಂಪಿನ ಸೆಳೆತದೊಂದಿಗೆ ಗುಡಿಯ ಒಳ ಸರಿದರು.
ದೇವರ ಬಗ್ಗೆ ಅಂತಹ ಭಕ್ತಿಯೇನೂ ಇಲ್ಲದಿದ್ದರೂ ಗೆಳೆಯರೊಂದಿಗೆ ದೇಗುಲಗಳಿದ್ದ ಊರಿಗೆ, ಅದರಲ್ಲೂ ಪ್ರಸಿದ್ಧವೆನಿಸಿದ, ಪ್ರೇಕ್ಷಣೀಯ ತೀರ್ಥಸ್ಥಳಗಳಿಗೆ ಹೋಗುವುದೆಂದರೆ ಅವನಿಗೊಂಥರ ಖುಷಿಯ ಸಂಗತಿ. ಮೋಹನ ಚಿಕ್ಕವನಿದ್ದಾಗ ಅಪ್ಪ-ಅಮ್ಮನ ಜೊತೆ ವರ್ಷಕ್ಕೆ ಒಂದೆರಡು ಬಾರಿ ಧರ್ಮಸ್ಥಳ, ಸುಬ್ರಮಣ್ಯಕ್ಕೆ ಹೋಗುತ್ತಿದ್ದ. ಆಗಲೂ ಅಷ್ಟೇ, ಆ ಎಳೆಯ ಮನಸ್ಸಿಗೆ ಭಕ್ತಿ ಎಂದರೆ ಏನು ಎಂದು ಅರಿವಾಗಿರಲಿಲ್ಲ. ಅಪ್ಪ-ಅಮ್ಮ ಮಾಡುತ್ತಿದ್ದಂತೆ ಯಾಂತ್ರಿಕವಾಗಿ ಕೈ ಮುಗಿಯುತ್ತಾ, ಕೆನ್ನೆ ತಟ್ಟಿಕೊಳ್ಳುತ್ತಾ, ಆರತಿ ಮುಟ್ಟಿದ ಕೈಯನ್ನು ತಲೆಗೆ ಒತ್ತಿಕೊಳ್ಳುತ್ತಾ, ಕೊನೆಗೆ ತೀರ್ಥ ಕುಡಿದ ಕೈಯನ್ನು ಚಡ್ಡಿಗೆ ಒರೆಸಿಕೊಳ್ಳುತ್ತಿದ್ದ. ಆ ಕೊನೆಯ ಕ್ರಿಯೆಗೆ ಅಮ್ಮನಿಂದ ಫಟೀರ್… ಎಂದು ಬೀಳುವ ಬೆನ್ನ ಮೇಲಿನ ಏಟು ಪ್ರತಿ ಬಾರಿಯೂ ಪ್ರತಿಕ್ರಿಯೆಯಾಗಿ ಮೂಡಿ ಬರುತ್ತಿತ್ತು.
ಮನೆಯಲ್ಲಿ ಇಟ್ಟಿದ್ದ ಒಂದೆರಡು ಫೋಟೋಗಳ ಮುಂದೆ ಎರಡು ಚಿಕ್ಕ ದೀಪಗಳಿಗೆ ಬೆಳಕನ್ನು ಹಚ್ಚಿ, ಎರಡು ಊದುಬತ್ತಿ ಬೆಳಗಿದರೆ ಮೋಹನನ ಭಕ್ತಿ ಪ್ರದರ್ಶನ ಮುಗಿದಂತೆ. ಅದರಾಚೆಗೆ ಗೆಳೆಯರ, ಬಂಧುಗಳ ಮನೆಯಲ್ಲಿ ವ್ರತ, ಪೂಜೆ ಇತ್ಯಾದಿಗಳ ಹೇಳಿಕೆ ಬಂದರೆ ಪ್ರಸಾದ ವಿತರಣೆಯ ಸಮಯಕ್ಕೆ ಸರಿಯಾಗಿ ಅಥವಾ ಊಟದ ಪಂಕ್ತಿ ಕುಳಿತುಕೊಳ್ಳುವ ಹೊತ್ತಿಗೋ ಸರಿಯಾಗಿ ಪ್ರತ್ಯಕ್ಷನಾಗಿ ಉದರಸೇವೆ ಮುಗಿಸಿಕೊಳ್ಳುತ್ತಿದ್ದ.
ಅಪ್ಪ-ಅಮ್ಮ ಕೈಲಾಸವಾಸಿಗಳಾಗಿ ಆರು ವರ್ಷ ಕಳೆದು, ಒಂಟಿ ಬದುಕು ಬದುಕುತ್ತಿದ್ದೇನೆ ಎಂಬ ಬೇಸರ ಕೊಂಚವೂ ತನ್ನ ಬಳಿಯೂ ಸುಳಿಯದಂತೆ ಬದುಕು ಕಟ್ಟಿಕೊಂಡು ಬಂಧುಗಳ, ಗೆಳೆಯರ ಗುಂಪಿನಲ್ಲಿ ಗೌರವದ ಸ್ಥಾನ ಪಡೆದುಕೊಂಡಿದ್ದ.
ದೇವರ ದರ್ಶನ ಮುಗಿಸಿ ಹೊರ ಬಂದಾಗ ಗೆಳೆಯರ ಜೊತೆಗೂಡಿ ಭೋಜನ ಮಂದಿರದ ಕಡೆ ಹೆಜ್ಜೆ ಹಾಕುತ್ತ ಗುಡಿಯ ಬಾಗಿಲಿನಲ್ಲಿ ನೋಡಿ ಬಂದ
ಮುಖಗಳನ್ನು ನೆನಪಿಸಿಕೊಂಡನು. “ಅಲ್ಲ ಕಣಯ್ನಾ.. ಮೋಹನ ಅಷ್ಟು ದೂರದಿಂದ, ನೂರಾರು ಕಿಲೋಮೀಟರ್ ಪ್ರಯಾಣ ಮಾಡಿ ದೇಗುಲದ ಬಳಿ ಬಂದು, ದೇವರ ದರ್ಶನ ಮಾಡದೆ ಹೊರಗೆ ಉಳಿದುಬಿಟ್ಟೆಯಲ್ಲಾ. ಸರಿಯೇನಯ್ನಾ ನೀ ಮಾಡಿದ್ದು..?’ ಎಂದು ಕೃಷ್ಣಮೂರ್ತಿ ಸ್ವಲ್ಪ ಬೇಸರದಿಂದಲೇ ಮಾತುಗಳನ್ನು ಹೊರಹಾಕಿದ.
ಎದುರಿಗಿದ್ದ ವಿಶಾಲ ಸಮುದ್ರವನ್ನು, ಒಂದರ ಬೆನ್ನಿಗೊಂದರಂತೆ ಎದ್ದೆದ್ದು ಬರುತ್ತಿದ್ದ ಅಲೆಗಳನ್ನು ನೋಡುತ್ತಾ, ತಣ್ಣಗೆ ಬೀಸುತ್ತಿದ್ದ ಗಾಳಿಗೆ ಸುಳಿದಾಡುತ್ತಿದ್ದ ತನ್ನ ಕೂದಲುಗಳನ್ನು ಸರಿಪಡಿಸಿಕೊಳ್ಳುತ್ತಾ, “ಮೂರ್ತಿ, ನಾನೂ ದೇವರ ದರ್ಶನ ಮಾಡಿ ಕಾಣಿಕೆ ಹಾಕಿದೆ’ ಎಂದ. ಮೋಹನನ ಮಾತಿಗೆ ಬೆರಗಾದ ಮೂರ್ತಿ, ಅವನನ್ನೇ ಪ್ರಶ್ನಾರ್ಥಕ ಚಿಹ್ನೆಯಿಂದ ನೋಡಿದ. ಮೋಹನ ಕೂಡಲೇ ಮೂರ್ತಿಯ ಕೈ ಹಿಡಿದು ಗೋಪುರದ ಕಡೆಗೆ ನಡೆಯಲಾರಂಭಿಸಿದ. ಉಳಿದ ಗೆಳೆಯರು ಅವರನ್ನೇ ಅನುಸರಿಸಿದ್ದರು. ಗುಡಿಯ ಮುಂದೆ ಸಾಲಾಗಿ ಕುಳಿತಿದ್ದವರನ್ನು ತೋರುತ್ತಾ, “ಮೂರ್ತಿ, ವಿವೇಕಾನಂದರು ಹೇಳಿರುವ “ದರಿದ್ರ ದೇವೋಭವ’ ಮಾತು ನಿನಗೆ ನೆನಪಿದೆ ಅಲ್ಲವೇ ?’ ಎಂದು ಕೇಳಿದನು.
ಕಳೆದ ವರ್ಷ ಮೋಹನ ವರ್ಷವಿಡೀ ವಿವೇಕಾನಂದರ ಕುರಿತು ಅಧ್ಯಯನ ಮಾಡಿ ಊರೂರುಗಳಲ್ಲಿ ಉಪನ್ಯಾಸ ನೀಡಿದ ಕ್ಷಣಗಳನ್ನು ಗೆಳೆಯರು ನೆನಪಿಸಿಕೊಂಡರು.
-ಶ್ರೀನಿವಾಸ ಪಾ. ನಾಯ್ಡು