Advertisement

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

03:54 PM Apr 28, 2024 | Team Udayavani |

ಮನುಷ್ಯನ ದೇಹವನ್ನು ಎರಡು ಭಾಗ ಮಾಡುವುದಾದರೆ, ಸಹಜವಾಗಿ ಅದು ರುಂಡ ಮತ್ತು ಮುಂಡ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಕುತ್ತಿಗೆ ಎನ್ನುವುದು ರುಂಡಕ್ಕೆ ಸೇರಿದೆಯೋ ಅಥವಾ ಮುಂಡಕ್ಕೆ ಸೇರಿದೆಯೋ ಎಂದು ಈಗಲೂ ಗೊಂದಲವೇ. ಇದೊಂದು ರೀತಿ ನದಿಗೆ ಕಟ್ಟಿದ ಸೇತುವೆಯಂತೆ, ಯಾವ ದಡಕ್ಕೆ ಅದು ಸ್ವಂತ ಎಂದು ಹೇಳಲಾರೆವು ನೋಡಿ; ಹಾಗೆ! ಚಿತ್ರ ಬಿಡಿಸಿದಾಗ ಅದು ರುಂಡವಾಗಲೀ, ಮುಂಡವಾಗಲೀ ಎರಡರಲ್ಲೂ ಕುತ್ತಿಗೆಯ ಭಾಗ ಸ್ವಲ್ಪವಾದರೂ ಸೇರಿಕೊಂಡೇ ಇರುತ್ತದೆ. ಬಹುಶಃ ಕುತ್ತಿಗೆ ಇಲ್ಲದೆ ಮುಂಡಕ್ಕೆ ಸೀದಾ ರುಂಡ ಅಂಟಿಕೊಂಡುಬಿಟ್ಟಿದ್ದರೆ, ನೇರವಾಗಿ ನೋಡುವುದನ್ನು ಬಿಟ್ಟರೆ ಅಕ್ಕ ಪಕ್ಕ, ಮೇಲೆ- ಕೆಳಗೆ ನೋಡಲು ಕೇವಲ ಕಣ್ಣುಗಳ ದೃಷ್ಟಿಗೆ ಎಟಕುವಷ್ಟು ಮಾತ್ರ ಲಭ್ಯವಾಗುತ್ತಿತ್ತು. ಸಂಪೂರ್ಣವಾಗಿ ಏನೇ ನೋಡಬೇಕೆಂದಿದ್ದರೂ ಇಡೀ ದೇಹದ ಸಮೇತ ತಿರುಗಬೇಕಾಗಿತ್ತು, ಅದರಲ್ಲೂ ಆಕಾಶ ನೋಡಬೇಕಿದ್ದರೆ ಅಂಗಾತ ಮಲಗಬೇಕಿತ್ತು ಅಷ್ಟೇ. ಹಾಗಾಗಿ ರುಂಡ ಮುಂಡದ ನಡುವಿನ ಸ್ಪ್ರಿಂಗ್‌ ಎಂದು ಕುತ್ತಿಗೆಯನ್ನು ವ್ಯಾಖ್ಯಾನಿಸಬಹುದು. ಅದನ್ನು ಆಗಾಗ ಮೇಲೆ ಕೆಳಗೆ ಆಡಿಸುತ್ತ ವ್ಯಾಯಾಮ ಮಾಡಿಸುತ್ತಲೋ ಅಥವಾ ಅಕ್ಕ ಪಕ್ಕಕ್ಕೆ ತಿರುಗಿಸಿ ಲಟಲಟ ಎನ್ನಿಸುತ್ತಲೋ ಇದ್ದರೆ ಚಟುವಟಿಕೆಯಿಂದ ಇರುತ್ತದೆ. ಇಲ್ಲದಿದ್ದರೆ ಯಾವ ಕಡೆಗೆ ತಿರುಗಿ, ಹೇಗೆಲ್ಲ ಜಾಮ್‌ ಆಗುತ್ತದೆಯೋ ತಿಳಿಯುವುದೇ ಇಲ್ಲ.

Advertisement

ನಾಲ್ಕೈದು ಇಂಚು ಉದ್ದದ ಗಂಟಲು ಎಷ್ಟೆಲ್ಲಾ ಕೆಲಸ ಮಾಡುತ್ತದೆ ನೋಡಿ. ಇದರೊಳಗಿನ ಧ್ವನಿಪೆಟ್ಟಿಗೆಯ ಸಹಾಯದಿಂದ ಹೊರಡುವ ಮಾತುಗಳು ಜಗತ್ತನ್ನು ಆಳಲೂಬಹುದು, ಹಾಳು  ಮಾಡಲೂಬಹುದು. ಇನ್ನು ಬಾಯಿಯಂತೂ ತನ್ನ ಚಪಲ ತೀರಿಸಿಕೊಳ್ಳಲು ಏನೇನೆಲ್ಲಾ ಅಗಿದು ಅಗಿದು ಗಂಟಲಿಗೆ ನೂಕಿ ಹಗುರಾಗಿಬಿಡುತ್ತದೆ. ಥೈರಾಯ್ಡ್ ಎನ್ನುವ ಚಿಟ್ಟೆಯಾಕಾರದ ಗ್ರಂಥಿಯೊಂದು ಈ ಗಂಟಲಲ್ಲೇ ರಾಜನಂತೆ ಕುಳಿತು ಇಡೀ ದೇಹದ ಅಂಗಾಂಗಗಳ ಮೇಲೆ ರಾಜ್ಯಭಾರ ಮಾಡುತ್ತಿರುತ್ತದೆ. ಕೆಮ್ಮಾದರೂ, ಕಫ‌ ಕಟ್ಟಿದರೂ ಎಲ್ಲ ಆಪತ್ತುಗಳೂ ಕುತ್ತಿಗೆಗೇ. ಹಾಗೆಯೇ ಎಷ್ಟೋ ಸಲ ಸಂತೋಷ ಅಥವಾ ದುಃಖದ ಸನ್ನಿವೇಶಗಳಲ್ಲಿ ಗಂಟಲಿನ ನರಗಳು ಉಬ್ಬಿ ಮಾತನಾಡಲು ತಡಕಾಡುವ ಸ್ಥಿತಿ ಬಹುಶಃ ಎಲ್ಲರ ಅನುಭವಕ್ಕೂ ಬಂದಿರುತ್ತದೆ.

ಕುತ್ತಿಗೆ ಎಂಬ ಹ್ಯಾಂಗಿಂಗ್‌ ಹುಕ್‌:

ಮನುಷ್ಯರಲ್ಲಿ ಕುತ್ತಿಗೆ ಉದ್ದವಿದ್ದರೆ ಜಿರಾಫೆಯ ಕುತ್ತಿಗೆಗೆ ಹೋಲಿಸುವುದು, ಗಿಡ್ಡವಿದ್ದರೆ ಮುಂಡಕ್ಕೆ ಅಂಟಿಕೊಂಡಿದೆ ಎಂದು ಜರಿಯುವುದು ಸಾಮಾನ್ಯ. ಕುತ್ತಿಗೆಯನ್ನು ಹ್ಯಾಂಗಿಂಗ್‌ ಹುಕ್‌ ಆಗಿ ಬಳಸಿಕೊಳ್ಳುವುದೇ ಹೆಚ್ಚು. ಹಳೆಯ ಕಾಲದಲ್ಲಿ ಮನೆಗಳಲ್ಲಿ ಅಲ್ಲಲ್ಲಿ ಗೋಡೆಗೆ ಗೂಟ ಹೊಡೆದು ಛತ್ರಿ, ಬೆಲ್ಟಾ, ಅಂಗಿ ಎಲ್ಲವನ್ನೂ ಅದಕ್ಕೇ ನೇತುಹಾಕುವಂತೆ  ಶಾಲು, ಶಲ್ಯ, ವೇಲು, ಟವೆಲ್ಲು, ಹಾರ, ಐಡಿ ಕಾರ್ಡು, ಟೈ, ಸ್ಕಾಫ್ಟು, ಹೊಲಿಗೆ ಟೇಪು, ರುದ್ರಾಕ್ಷಿ ಮಾಲೆ ಎಲ್ಲವೂ ಕುತ್ತಿಗೆಗೇ ಮೂಲ. ವಿಶೇಷ ಸಂದರ್ಭಗಳಲ್ಲಿ ಹೆಣ್ಣುಮಕ್ಕಳು ಧರಿಸುವ ವಿಧವಿಧ ಕಂಠಾಭರಣಗಳ ಭಾರಕ್ಕೆ ಕುತ್ತಿಗೆ ಮೆತ್ತಗಾಗದಿದ್ದರೆ ಪುಣ್ಯ. ಅದರಲ್ಲೂ ತಾಳಿ ಎಂಬುದು ಸಾಂಪ್ರದಾಯಿಕವಾಗಿ ಕುತ್ತಿಗೆಯನ್ನು ಅಲಂಕರಿಸುವ ಒಡವೆ. ಅದನ್ನು ಕಟ್ಟಿದ ನಂತರ ಹೆಂಡತಿಯಾಗಿ ಕುತ್ತಿಗೆಗೆ ಗಂಟು ಬೀಳುತ್ತಾಳೆ ಎಂದು ಹಾಸ್ಯಮಾಡುವುದೂ ಇದೆ.

ಪ್ರಾಣಿಗಳು ಬೇಟೆಯಾಡುವಾಗ, ಮನುಷ್ಯನು ಪ್ರಾಣಿಗಳನ್ನು ಅಥವಾ ಮತ್ತೂಬ್ಬ ಮನುಷ್ಯನನ್ನು ಕೊಲ್ಲಲು, ಬಹುಬೇಗ ಕೈಹಾಕುವುದು ಕುತ್ತಿಗೆಗೇ. ಯುದ್ಧ ಖೈದಿಗಳಿಗೆ ತಲೆ ಕತ್ತರಿಸುವ ಶಿಕ್ಷೆಯಂತೂ ಸಾಮಾನ್ಯವೇ. ಆದರೆ ತಲೆಯನ್ನು ಕತ್ತರಿಸುವುದಕ್ಕೆ, ಮೊದಲು ಹೊಡೆತ ಬೀಳುವುದು ಮಾತ್ರ ಕುತ್ತಿಗೆಗೇ ನೋಡಿ. ತನ್ನ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಪ್ರಾಣಿಗಳಿಗೂ ಕೂಡ ಬೆಲ್ಟಾ, ಗಂಟೆ, ಚೈನು ಅಂತೆಲ್ಲಾ ಕಟ್ಟುವ ಮನುಷ್ಯ, ಅವುಗಳ ಕುತ್ತಿಗೆಯನ್ನೂ ಫ್ರೀ ಬಿಡಲಾರ.

Advertisement

 ಕುತ್ತಿಗೆಯೇ ಬಲಿಪಶು

ವಾಸ್ತವ ಹೀಗಿದ್ದರೂ, ಅದ್ಯಾಕೋ ಏನೋ ಕುತ್ತಿಗೆ ಒಂದು ರೀತಿ ನಿರ್ಲಕ್ಷಿತ ಅಂಗ ಎನ್ನಬಹುದು. ಅದೇನು ದೇಹದಲ್ಲಿನ ಅತ್ಯಂತ ಎಳೆಯ ಅಂಗ ಎಂದು ಅದರ ಮೇಲೆ ಎಲ್ಲರ ಕಣ್ಣೋ ಏನೋ ಗೊತ್ತಿಲ್ಲ. ಗಣೇಶನ ತಲೆಯನ್ನು ಶಿವ ಕತ್ತರಿಸಿದ್ದು, ಮತ್ತೆ ಆ ಕುತ್ತಿಗೆಗೆ ಆನೆಯ ಕತ್ತರಿಸಿದ ರುಂಡ ತಂದು ಜೋಡಿಸಿದ್ದು, ಪರಶುರಾಮ ತನ್ನ ತಾಯಿ ರೇಣುಕೆಯ ಶಿರಚ್ಛೇಧನ ಮಾಡಿದ್ದು, ಯುದ್ಧದಲ್ಲಿ ಸೆರೆ ಸಿಕ್ಕವರ ರುಂಡ ಚೆಂಡಾಡುತ್ತಿದ್ದುದು ಎಲ್ಲವೂ ಕುತ್ತಿಗೆಗೇ ಮೂಲ. ಶಿವನು ವಿಷ ಕುಡಿದಾಗ ಅದು ದೇಹಕ್ಕೆ ಸೇರದಂತೆ ಪಾರ್ವತಿ ಗಟ್ಟಿಯಾಗಿ ಕುತ್ತಿಗೆಯನ್ನು ಹಿಡಿದು, ಅದು ನೀಲಿಬಣ್ಣ ತಾಳಿ ನೀಲಕಂಠೇಶ್ವರ ಅಥವಾ ನಂಜುಂಡೇಶ್ವರ ಎಂಬ ಹೆಸರಿನಿಂದ ಗುರುತಿಸಿಕೊಳ್ಳು­ವಂತಾಯಿತು. ಶಿವನೂ ಸಹ ಬೆಲ್ಟ್ ತರಹ ಹಾವನ್ನು ಕತ್ತಿಗೆ ಸುತ್ತಿಕೊಂಡಿದ್ದಾನೆ ನೋಡಿ. ವಿಷ್ಣುವಿನ ಸುದರ್ಶನ ಚಕ್ರವೂ ಕತ್ತರಿಸಲು ಸದಾ ಹುಡುಕುವುದು ಕುತ್ತಿಗೆಯನ್ನೇ. ಯಮಪಾಶವೂ ಸಹ ಕುತ್ತಿಗೆಗೇ ಬರುವ ಕುತ್ತು.

ಕುತ್ತಿಗೆಯನ್ನೇ ಹಿಡೀತಾರೆ!:

ಮಗು ಹುಟ್ಟುತ್ತಿದ್ದಂತೆ ಬೆಳೆಯುವ ಸಂಕೇತವಾಗಿ ಮೊದಲು ಕೇಳುವುದು “ಕುತ್ತಿಗೆ ನಿಂತಿದೆಯಾ’ ಎಂದೇ. ನೇಣು ಹಾಕುವುದು, ಹಾಕಿಕೊಳ್ಳುವುದು ಎರಡರಲ್ಲಿಯೂ ಬಲಿಪಶು ಕುತ್ತಿಗೆಯೇ. ಅದೇ ರೀತಿ ಮನುಷ್ಯನ ಉಸಿರು ನಿಂತಿದ್ದನ್ನು ಸಾಂಕೇತಿಕವಾಗಿ- “ಗೋಣು ಚೆಲ್ಲಿದ, ಕತ್ತು ವಾಲಿಸಿದ’ ಎಂದು ಹೇಳುವುದುಂಟು. ಇನ್ನು ಯಾರಿಗಾದರೂ ಕೊಲ್ಲುತ್ತೇನೆಂದು ಆವಾಜು ಹಾಕುವಾಗ ಕುತ್ತಿಗೆಯ ಕೆಳಗೆ ಎರಡು ಕೈಗಳನ್ನು ಮುಷ್ಟಿ ಮಾಡಿ ವಿರುದ್ಧ ದಿಕ್ಕಿಗೆ ಎಳೆದಂತೆ ಮಾಡಿ ಗೋಣು ವಾಲಿಸುವುದು, ಅಥವಾ ತೋರು ಬೆರಳನ್ನು ಕುತ್ತಿಗೆಯ ಒಂದು ಕಡೆಯಿಂದ ಮತ್ತೂಂದು ಕಡೆಗೆ ಚಂದ್ರಾಕಾರವಾಗಿ ಎಳೆದು ಸಾಂಕೇತಿಕವಾಗಿ ಹೇಳುವುದೂ ಇದೆ. ಎರಡೂ ಅಂಗೈಯನ್ನು ಕುತ್ತಿಗೆಯ ಹತ್ತಿರ ತೆಗೆದುಕೊಂಡು ಹೋಗಿ ಹಿಸುಕುವಂತೆ ನಟಿಸುವುದು, ಒಟ್ಟಿನಲ್ಲಿ ಕುತ್ತು ಮೊದಲು ಬರುವುದು ಕುತ್ತಿಗೆಗೇ. ಹೆಂಗಸರು ರವಿಕೆ ಹೊಲೆಸುವಾಗ ಕುತ್ತಿಗೆಯ ಪ್ರಾಬಲ್ಯ ಅರಿವಾಗುತ್ತದೆ. ಫ್ರಂಟ್‌ ನೆಕ್ಕು, ಬ್ಯಾಕ್‌ ನೆಕ್ಕುಗಳಲ್ಲಿ ಅದೆಷ್ಟು ರೀತಿಯ ವಿನ್ಯಾಸಗಳಿವೆಯೋ ಎಣಿಸಲು ಬಾರದು.

ಕತ್ತಿನ ಬಗ್ಗೆ ಇದೆಲ್ಲ ಏನೇ ರಗಳೆ ಇದ್ದರೂ ಪ್ರೇಮದಿಂದ ಒಬ್ಬರಿಗೊಬ್ಬರು ಕುತ್ತಿಗೆ ಬಳಸಿ ಹಾಕುವ ತೋಳಿನ ಹಾರ, ಮಕ್ಕಳು ಪ್ರೀತಿಯಿಂದ ಕುತ್ತಿಗೆಗೆ ಜೋತು ಬೀಳುವುದು, ಕೂಸುಮರಿ ಮಾಡುವಾಗ ಕುತ್ತಿಗೆಯನ್ನು ತಬ್ಬಿ ಹಿಡಿಯುವುದು, ಇವೆಲ್ಲದಕ್ಕೂ ಕುತ್ತಿಗೆ ಒಲವಿನ, ಮಮತೆಯ ಸಂಕೇತವಾಗಿಯೂ ನಿಲ್ಲುವುದನ್ನು ಅಲ್ಲಗಳೆಯುವಂತಿಲ್ಲ.

-ನಳಿನಿ ಟಿ. ಭೀಮಪ್ಪ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next