Advertisement

ಸುಮಧುರ ವೇಣು ಸುನಾದ

10:36 AM Oct 24, 2019 | mahesh |

 

Advertisement

ಸಂಗೀತ ಶಿಕ್ಷಕಿ ವಾಣಿ ಕಬೆಕ್ಕೋಡು ಹಾಗೂ ಶಾಮ್‌ ಪ್ರಸಾದ್‌ ಕಬೆಕ್ಕೋಡು ಅವರು ಮುನ್ನಡೆಸುತ್ತಿರುವ ಬದಿಯಡ್ಕದ ಸುನಾದ ಸಂಗೀತ ಶಾಲೆಯ ಈ ಬಾರಿಯ ಸಂಗೀತೋತ್ಸವವು ವಿ| ಮೈಸೂರು ಚಂದನ್‌ ಕುಮಾರ್‌ ಅವರ ವೇಣುವಾದನದ ಮಧುರ ಕಛೇರಿಯ ಮೂಲಕ ಸಂಪನ್ನಗೊಂಡಿತು. ಮುಸ್ಸಂಜೆಯ ಹೊತ್ತಿನಲ್ಲಿ ಹಿತವಾದ ನಾದದೊಂದಿಗೆ ಮೂಡಿಬಂದ ಈ ಕಛೇರಿಯು ಸಂಗೀತ ರಸಿಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.

ಪ್ರಥಮವಾಗಿ ಭೈರವಿಯ ವಿರಿಬೋಣಿ ವರ್ಣವನ್ನು ಆಯ್ದುಕೊಂಡ ಕಲಾವಿದರು ಅನಂತರ ಚಕ್ರವಾಕ ರಾಗದ ಗಜಾನನಯುತಂ ಕೃತಿಯನ್ನು ಚಿಕ್ಕವಾದ ಮತ್ತು ಚೊಕ್ಕವಾದ ಸ್ವರಪ್ರಸ್ತಾರದೊಂದಿಗೆ ಪ್ರಸ್ತುತಪಡಿಸಿದರು. ಬಳಿಕ ರೇವಗುಪ್ತಿ ರಾಗದ ಗೋಪಾಲಕ ಪಾಹಿಮಾಂ, ದ್ವಿಜಾವಂತಿ ರಾಗದ ಅಖೀಲಾಂಡೇಶ್ವರಿ, ವನಸ್ಪತಿಯ ಪರಿಯಾಚಕಮಾ ಮತ್ತು ತ್ವರಿತಗತಿಯಲ್ಲಿ ಸಾಗಿದ ಸಾಮರಾಗದ ಅನ್ನಪೂರ್ಣೇ ಮೆಚ್ಚುಗೆ ಗಳಿಸಿತು.

ಹಂಸಾನಂದಿಯ ಶಂಕರ ಶ್ರೀಗಿರಿನಾಥಪ್ರಭೋ ಮತ್ತು ಮಧ್ಯಮಾವತಿಯ ಪಾಲಿಂಚು ಕಾಮಾಕ್ಷಿಯನ್ನು ಪ್ರಧಾನವಾಗಿ ಕೈಗೆತ್ತಿಗೊಂಡ ಕಲಾವಿದರು ಪರಿಪಕ್ವವಾದ ತಮ್ಮ ಮನೋಧರ್ಮದೊಂದಿಗೆ ರಾಗದ ಸೂಕ್ಷ್ಮಸಂಚಾರಗಳನ್ನೂ ವಿವಿಧ ಮಜಲುಗಳನ್ನೂ ಕ್ರಮಬದ್ಧವಾಗಿ ಮತ್ತು ಲಾಲಿತ್ಯಪೂರ್ಣವಾಗಿ ನುಡಿಸಿದುದು ಭಾವಸಾಂದ್ರತೆಯನ್ನುಂಟುಮಾಡಿತು. ಕೊನೆಯಲ್ಲಿ ಜನಪ್ರಿಯ ರಚನೆಯಾದ ಮನವೇ ಮಂತ್ರಾಲಯ, ಹಾಗೂ ಧನಾಸರಿಯ ತಿಲ್ಲಾನದೊಂದಿಗೆ ಮುಕ್ತಾಯಗೊಂಡ ಕಛೇರಿಯು ಕಲಾವಿದರ ಉತ್ತಮ ನುಡಿಸಾಣಿಕೆಯಿಂದ ಸಂಗೀತಾಭಿಮಾನಿಗಳ ಮನ ತಣಿಸಿತು. ಉತ್ತಮವಾದ ‌ಸಾಥಿಯನ್ನು ಕೊಟ್ಟು ಕಛೇರಿಯನ್ನು ಕಳೆಗಟ್ಟಿಸಿದವರು ವಿ| ಅಟ್ಟುಕ್ಕಲು ಬಾಲಸುಬ್ರಹ್ಮಣ್ಯಂ ತಿರುವನಂತಪುರ(ವಯಲಿನ್‌), ವಿ| ಕಾಂಚನ ಈಶ್ವರ ಭಟ್‌ (ಮೃದಂಗ) ಮತ್ತು ವಿ| ಉಡುಪಿ ಶ್ರೀಧರ್‌ ತಿರುವನಂತಪುರ(ಘಟಂ).

ಸಂಗೀತೋತ್ಸವದ ದಿನ ಬೆಳಗಿನಿಂದಲೇ ಸುನಾದದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಸಂಗೀತ ಸಮಾರಾಧನೆ ನಡೆಯಿತು.

Advertisement

– ಶ್ರೀವಾಣಿ ಕಾಕುಂಜೆ

Advertisement

Udayavani is now on Telegram. Click here to join our channel and stay updated with the latest news.

Next