ವಂದನಾರ್ಹನಾದ ಸೂರ್ಯನಿಗೆ ನಮಿಸ ಬೇಕಾದದ್ದು ದೇವರನ್ನು ಹುಡುಕುವ ಪ್ರತಿ ಭಕ್ತನ, ಆ ಸೂರ್ಯನ ಬೆಳಕಿನಲ್ಲಿ ಬದುಕು ಕಟ್ಟಿಕೊಳ್ಳುವ ನಮ್ಮೆಲ್ಲರ ಕರ್ತವ್ಯ. ಹಾಗಾಗಿ, ಗಾಯತ್ರಿ ಮಂತ್ರದಲ್ಲೂ ಸೂರ್ಯನನ್ನು ನೆನಯಲಾಗುತ್ತದೆ. ಸೂರ್ಯನ ಕುರಿತಾದ ಮಂತ್ರಗಳೂ ಶ್ಲೋಕಗಳೂ ಇವೆ.
ಪ್ರತಿ ಮನುಷ್ಯನಿಗೂ ದೇವರನ್ನು ಪ್ರತ್ಯಕ್ಷವಾಗಿ ಕಾಣಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ, ಒಂದೊಮ್ಮೆ ದೇವರು ಪ್ರತ್ಯಕ್ಷನಾಗಿ ಕಣ್ಣೆದುರು ನಿಂತರೆ ನಾವೇನು ಮಾಡುತ್ತೇವೆ ಅಥವಾ ಏನು ಮಾಡಬೇಕು? ಎಂಬ ಗೊಂದಲ ಉಂಟಾಗಬಹುದು. ಅಲ್ಲದೇ, ಈ ಕಲಿಯುಗದಲ್ಲಿ ದೇವರು ಪ್ರತ್ಯಕ್ಷನಾಗಿ ನಮ್ಮೆದುರಿಗೆ ಬಂದರೂ ನಾವು ಸರ್ವತಾ ನಂಬಲಿಕ್ಕಿಲ್ಲ. ನಮ್ಮ ಸಮಾಜದ ಸ್ವಾಸ್ಥ್ಯ ಅಷ್ಟೊಂದು ಕೆಟ್ಟು ಹೋಗಿದೆ. ದೇವರು ಎಂಬುದಕ್ಕೆ ವಿಶಾಲ ಅರ್ಥವಿದೆ. ಆದರೆ ಅದನ್ನು ನಾವು ಈಗಾಗಲೇ ಸಂಕುಚಿತಗೊಳಿಸಿ, ದೇವರಿಗೆ ಇರುವ ಆಕಾರವನ್ನೂ ಬದಲಿಸಿ, ನಮ್ಮ ನಡೆನುಡಿಗಳಲ್ಲಿ ತೋರಬೇಕಾದ ದೇವತಾ ದರ್ಶನವನ್ನು ಬಿಟ್ಟು, ದೇವರನ್ನು ನಿಂದಿಸುತ್ತ ಕಾಲ ಕಳೆಯುತ್ತಿದ್ದೇವೆ. ನೆನಪಿರಲಿ; ದೇವರ ಶಕ್ತಿಯಿಲ್ಲದೆ ಒಂದು ಅಣುವೂ ಕಣವಾಗಲಾರದು.
ದೇವರು ನಮ್ಮೆದುರಿಗೆ ನಿತ್ಯವೂ ಪ್ರತ್ಯಕ್ಷನಾಗುತ್ತಾನೆ. ಆ ದೇವರ ಪ್ರತ್ಯಕ್ಷ$ ರೂಪವೇ ಜಗ ಬೆಳಗುವ ಸೂರ್ಯ; ಸೂರ್ಯದೇವ. ಹೆಚ್ಚಿನ ಕಡೆ ಸೂರ್ಯನನ್ನು ಪೂಜಿಸಲಾಗುತ್ತದೆ. ಇಡೀ ಜಗತ್ತನ್ನು ಆಳುವವನೇ ಆತ. ಸೌರಮಂಡಲದ ಚಮತ್ಕಾರವೆಲ್ಲವೂ ಸೂರ್ಯನಿಗೆ ಸೇರಿದ್ದು. ನಾಳೆ ಸೂರ್ಯೋದಯವಾಗದಿದ್ದರೆ ಏನೇನು ಅನಾಹುತವಾಗಬಹುದೆಂಬುದನ್ನು ಊಹಿಸಬಹುದು. ಹಕ್ಕಿಗಳ ಕಲರವ, ಹೂವುಗಳ ಅರಳುವಿಕೆಯಿಂದ ಆರಂಭವಾಗುವ ಹಗಲು ಸೂರ್ಯನನ್ನೇ ಅವಲಂಬಿಸಿದೆ. ಸೂರ್ಯನ ಬೆಳಕಿನಿಂದಾಗಿಯೇ ಭೂಮಿಯ ನೀರು ಆವಿಯಾಗಿ ಆಗಸವನ್ನು ಸೇರುತ್ತದೆ, ಮಳೆ ಬರುತ್ತದೆ, ಬೀಜ ಮೊಳಕೆಯೊಡೆಯುತ್ತದೆ, ಗಿಡ ಚಿಗುರಿ ಹೂಹಣ್ಣು ಕೊಡುತ್ತದೆ- ಹೀಗೆ ಬದುಕಿನ ಚಕ್ರ ಸರಾಗವಾಗಿ ಅಡೆತಡೆಗಳಿಲ್ಲದೆ ಸುತ್ತುತ್ತದೆ. ಪರಿಸರ ಎಂಬುದರ ಹುಟ್ಟಿಗೆ ಈ ಸೂರ್ಯ ಬೇಕೇಬೇಕು.
ಹಾಗಾಗಿ, ಸೂರ್ಯ ಒಂದು ಗ್ರಹವಾಗಿದ್ದರೂ ವಂದನಾರ್ಹ ದೇವರು. ಆಗಲೇ ಹೇಳಿದಂತೆ ದೇವರು ಎಂಬ ಪದಕ್ಕೆ ವಿಶಾಲ ಅರ್ಥವಿದೆ. ನಮ್ಮ ಬದುಕಿನ ಪ್ರತಿಕ್ಷ$ಣವನ್ನು ಸಂಪೂರ್ಣಗೊಳಿಸುವ ವಸ್ತುವಿನಿಂದ ಹಿಡಿದು ಪ್ರತಿಯೊಂದು ಸೂಕ್ಷ್ಮ ಜೀವಿಯೂ ಕೂಡ ದೇವರೇ. ಹಾಗಾಗಿ, ಸೂರ್ಯನೂ ದೇವರೇ. ಆತ ಕಣ್ಣಿಗೆ ಕಾಣುವ ಪ್ರತ್ಯಕ್ಷ$ ದೇವರು. ನಮ್ಮ ಪುರಾಣಗಳಲ್ಲಿ ಸೂರ್ಯದೇವನೆಂದೇ ಹೇಳಲಾಗುತ್ತದೆ. ಹಿಂದಿನ ಕಾಲದವರು ಸೂರ್ಯನನ್ನೇ ಮೂಲ ದೇವರನ್ನಾಗಿ ಪೂಜಿಸುತ್ತಿದ್ದರು. ಆದುದರಿಂದಾಗಿಯೇ ಕೆಲವೆಡೆ ಸೂರ್ಯ ದೇವಾಲಯಗಳಿವೆ.
ಮನುಷ್ಯನಿಗೆ ಬದುಕುವ ಶಕ್ತಿ ಕೊಡುವವನೇ ದೇವರು. ಅಂತಹ ಶಕ್ತಿ ಕೊಡುವವನು ಈ ಸೂರ್ಯ. ನಾವು ಜೀವಿಸುತ್ತಿರುವ ಪ್ರಕೃತಿಯೇ ಆ ಸೂರ್ಯನದು. ನಮ್ಮ ದರ್ಶನ ನಮಗಾಗಬೇಕೆಂದರೆ ಸೂರ್ಯ ಬೇಕು. ನಾವು ಜ್ಞಾನಿಗಳಾಗುತ್ತ ಹೋದಂತೆ ನಂಬಿಕೆಯ ರೀತಿಯನ್ನೂ ಬದಲಾಯಿಸಿಕೊಂಡಿದ್ದೇವೆ. ಹಿಂದಿನವರು ಸೌರಮಂಡಲದ ಬಗ್ಗೆ ತಿಳಿದಿರದಿದ್ದರೂ ಸೂರ್ಯನನ್ನು ನಮಿಸಿ ಪೂಜಿಸುತ್ತಿದ್ದರು. ಸದಾ ಸನ್ನಡತೆಯಲ್ಲಿಯೇ ಜೀವಿಸಲು ಯೋಚಿಸುತ್ತಿದ್ದರು. ಎಲ್ಲಿ ಸೂರ್ಯದೇವರು ಮುನಿಸಿಕೊಂಡು ನಾಳೆ ಬಾರದೆ ಹೋದರೆ! ಎಂಬ ಭೀತಿ ಅವರಲ್ಲಿರುತ್ತಿತ್ತು. ಇಂದು ಎಲ್ಲವೂ ಬದಲಾಗಿದೆ. ಅಪನಂಬಿಕೆಯೇ ನಮ್ಮ ದೌರ್ಬಲ್ಯ. ಹಾಗಾಗಿಯೇ ನಮ್ಮ ಕಣ್ಣಿಗೆ ದೇವರು ಕಾಣುವುದಿಲ್ಲ.
ವಂದನಾರ್ಹನಾದ ಸೂರ್ಯನಿಗೆ ನಮಿಸ ಬೇಕಾದದ್ದು ದೇವರನ್ನು ಹುಡುಕುವ ಪ್ರತಿ ಭಕ್ತನ, ಆ ಸೂರ್ಯನ ಬೆಳಕಿನಲ್ಲಿ ಬದುಕು ಕಟ್ಟಿಕೊಳ್ಳುವ ನಮ್ಮೆಲ್ಲರ ಕರ್ತವ್ಯ. ಹಾಗಾಗಿ, ಗಾಯತ್ರಿ ಮಂತ್ರದಲ್ಲೂ ಸೂರ್ಯನನ್ನು ನೆನಯಲಾಗುತ್ತದೆ. ಸೂರ್ಯನ ಕುರಿತಾದ ಮಂತ್ರಗಳೂ ಶ್ಲೋಕಗಳೂ ಇವೆ.
ಜ್ಞಾನದ ಬೆಳಗು: ಸೂರ್ಯೋದಯಾಸ್ತಗಳು ಜಗದ ನಿಯಮವಾಗಿದ್ದರೂ ಅದಕ್ಕೂ ಒಂದು ಪ್ರೇರಣಾಶಕ್ತಿ ಇದ್ದೇ ಇದೆ. ಅದನ್ನು ನೆನೆಯುತ್ತ ಪ್ರತಿ ಬೆಳಗಿಗೆ ಸೂರ್ಯನಿಗೆ ವಂದಿಸೋಣ
ವಿಷ್ಣು ಭಟ್ಟ ಹೊಸ್ಮನೆ