ಕಲಬುರಗಿ: ಚಿತ್ತಾಪುರ ತಾಲೂಕು ಧಾರ್ಮಿಕ ಕ್ಷೇತ್ರ ರೇವಗ್ಗಿ ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಇಳಿ ಸಂಜೆ ನಡೆದ ಗಾನಯಾನ ಕನ್ನಡ ಚಲನಚಿತ್ರ ಗೀತೆಗಳ ಭಾವಯಾನ ಸಂಗೀತ ರಸದೌತಣ ಉಣಬಡಿಸುವ ಕಾರ್ಯಕ್ರಮ ಸಂಗೀತಾಸಕ್ತರ ಮನ ಸೆಳೆಯಿತು.
ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಗಾನಯಾನ ಕಾರ್ಯಕ್ರಮದಲ್ಲಿ ಬೆಂಗಳೂರಿನ ನವೀನ ಮತ್ತಿಕೆರೆ ನೇತೃತ್ವದ ವಿಶ್ವಕಲಾ ನಿಕೇತನ ತಂಡದ ಹಿನ್ನೆಲೆ ಗಾಯಕರಾದ ಅಮೀತ ಎಸ್. ಕುಮಾರ, ದಿವ್ಯಾ ರಾಮಚಂದ್ರ, ಪಾರ್ಥ ಚಿರಂಥನ್, ಮಂಜುಶ್ರೀ ಅವರಿಂದ ಮೂಡಿಬಂದ ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ನೀನಾಗು, ಡಾ| ರಾಜಕುಮಾರ ಅಭಿನಯದ ಜೀವನ ಚರಿತ್ರೆ ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಗೀತೆ ನಾದಮಯ ಈ ಲೋಕವೆಲ್ಲ ನಾದಮಯ, ಗೀತಾಂಜಲಿ ಹಾಲುಗೆನ್ನೆಗೆ, ಒಳಿತು ಮಾಡು ಮನಸ್ಸಾ, ಒಲವಿನ ಉಡುಗರೆ ಕೊಡುಗೆ, ಸಂತೋಷಕ್ಕೆ ಹಾಡು ಸಂತೋಷಕ್ಕೆ, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಸೇರಿದಂತೆ ಹಲವು ಚಿತ್ರ-ಭಾವಗೀತೆಗಳು ನೆರದಿದ್ದ ಸಭಿಕರ ಮನಸೂರೆಗೊಂಡವು. ಪುನೀತ ರಾಜಕುಮಾರ ಅಭಿನಯದ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಗೀತೆಗಂತೂ ನೆರೆದವರ ಶಿಳ್ಳೆ, ಕೇಕೆ ಗಿಟ್ಟಿಸಿಕೊಂಡಿತು. ಅಲ್ಲದೇ ಕುಣಿದು ಕುಪ್ಪಳಿಸಲು ಕಾರಣವಾಯಿತು.
ಮೇಲವಿನ್ ಕೀಬೋರ್ಡ್ ನಿರ್ವಹಣೆ, ಮುನ್ನಾ ತಬಲಾ ಸಾಥ್ ನೀಡಿದರೆ ಧ್ರುವರಾಜ ರಿದಮ್ ನೋಡಿಕೊಂಡರು. ವಿಶ್ವಕಲಾ ನಿಕೇತನ ತಂಡದ ನುಣುವಿನಕೆರೆಯ ರಾಮಕೃಷ್ಣಯ್ಯ ತಂಡದ ಸದಸ್ಯರ ವಿವರ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯಲ್ಲಿ ಏರ್ಪಡಿಸಲಾಗಿದ್ದ ಗಾನಯಾನ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಮಾತನಾಡಿ, ಕಲಬುರಗಿ ಭಾಗದ ಜನರಲ್ಲಿ ಚಿತ್ರೋದ್ಯಮ ಮತ್ತು ಸಂಗೀತಾಸಕ್ತಿ ಹೆಚ್ಚಿಸಲು ಇಲ್ಲಿ ಗಾನಯಾನದಂತಹ ಕಾರ್ಯಕ್ರಮ ಆಯೋಜಿಸಿದ್ದು ಅರ್ಥಪೂರ್ಣವಾಗಿದೆ. ಜಗದ್ಗುರು ರೇವಣಸಿದ್ದೇಶ್ವರರ ಭಕ್ತರಿದ್ದು, ರೇವಣಸಿದ್ದೇಶ್ವರ ಕುರಿತು ಕಿರುಚಿತ್ರ ನಿರ್ಮಿಸಿ ಪ್ರದರ್ಶಿಸುವ ಕೆಲಸ ಆಗಬೇಕಾಗಿದೆ. ಸುಕ್ಷೇತ್ರ ರೇವಗ್ಗಿ ಅಭಿವೃದ್ಧಿಗೆ ಆಡಳಿತಾಧಿಕಾರಿಗಳು ಹೆಚ್ಚಿನ ಶ್ರಮವಹಿಸಿ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಬೇಕು ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಟಿ.ಎಸ್. ಪವಾರ, ಸತಿ ಸುಲೋಚನಾ ಚಿತ್ರದಿಂದ ಪ್ರಾರಂಭವಾದ ಕನ್ನಡ ಚಿತ್ರೋದ್ಯಮ ಇಲ್ಲಿಯವರೆಗೆ ನಾಡಿಗೆ, ಭಾಷೆಗೆ ಅನೇಕ ಕೊಡುಗೆ ನೀಡುತ್ತ ಚಿತ್ರರಂಗ ಹಲವು ಏರುಪೇರು ಕಂಡಿದೆ. ಚಿತ್ರಗಳಲ್ಲಿ ನಾಯಕರು ಶರೀರವಾದರೆ ಹಿನ್ನಲೆ ಗಾಯಕರು ಆತ್ಮ ಇದ್ದಂತೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ರೇವಗ್ಗಿ ಕ್ಷೇತ್ರದ ಸಂಸ್ಥಾನಿಕ ಶ್ರೀ ಚನ್ನಬಸಪ್ಪ ದೇವರಮನಿ ಹಾಗೂ ರಟಕಲ್ ವಿರಕ್ತಮಠದ ಶ್ರೀಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಜಗದ್ಗುರು ರೇವಣಸಿದ್ದೇಶ್ವರರ ಕುರಿತ ಭಕ್ತಿಗೀತೆಗಳ ಸಿಡಿ ಬಿಡುಗಡೆ ಮಾಡಲಾಯಿತು. ಅರಣಕಲ್ಲ ಜಿಪಂ ಸದಸ್ಯ ಜಗದೇವ ಗುತ್ತೇದಾರ, ಹೆಚ್ಚುವರಿ ಜಿಲ್ಲಾದಿಕಾರಿಗಳು ಹಾಗೂ ರೇವಗ್ಗಿ ರೇವಣಸಿದ್ದೇಶ್ವರ ದೇವಸ್ಥಾನದ ನೋಡಲ್ ಅಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಹಾಯಕ ಆಯುಕ್ತ ಹಾಗೂ ಆಡಳಿತಾ ಧಿಕಾರಿ ರಾಚಪ್ಪ, ಡಿವೈಎಸ್‌ಪಿ
ಶರಣಬಸಪ್ಪ, ಕಾಂಗ್ರೆಸ್ ಅಧ್ಯಕ್ಷ ಶಿವಶರಣಪ್ಪ, ತಾಪಂ ಸದಸ್ಯ ದತ್ತು ಕುಲಕರ್ಣಿ, ಮುಖಂಡರಾದ ಅಜೀಂ ಪಟೇಲ್, ರಾಜೀವ ಜಾಧವ, ರಾಮಚಂದ್ರ ಜಾಧವ, ಬಸವರಾಜ ಕನಗೊಂಡ, ರೇವಣಸಿದ್ದಪ್ಪ ಸಾತನೂರ ಇದ್ದರು. ಶಿವಾನಂದ ಅಣಜಗಿ ಕಾರ್ಯಕ್ರಮ ನಿರೂಪಿಸಿದರು.