Advertisement
ಜೂ.10ರಂದು ಪ್ರಕರಣ ಬಯಲಾಗುತ್ತಿದ್ದಂತೆ ತೆರೆಮರೆಯಲ್ಲಿ ಐಎಂಎ ಸಮೂಹ ಸಂಸ್ಥೆಗಳು ಹಾಗೂ ಮನ್ಸೂರ್ ಖಾನ್ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದ ಇಡಿ ಅಧಿಕಾರಿಗಳು, ಇದೀಗ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಆತನ ವಿರುದ್ಧ ಲೇವಾದೇವಿ ನಿಯಂತ್ರಣ ಕಾಯ್ದೆ (ಪಿಎಂಎಲ್ಎ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೇಮಾ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾದ ಮನ್ಸೂರ್ ಖಾನ್ ಅವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿರುವ ಜಾರಿ ನಿರ್ದೇಶನಾಲಯ, ಜೂ.24ರಂದು ಬೆಳಗ್ಗೆ 11 ಗಂಟೆಗೆ ಇ.ಡಿ ಕಚೇರಿಗೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದು, ಶಿವಾಜಿನಗರದಲ್ಲಿರುವ ಐಎಂಎ ಜ್ಯುವೆಲರ್ಸ್ ಸಂಸ್ಥೆ ಕಟ್ಟಡದ ಪ್ರವೇಶ ದ್ವಾರದಲ್ಲಿ ಸಮನ್ಸ್ ಅಂಟಿಸಿದ್ದರು. ಕೆಲ ಹೊತ್ತಿನ ಬಳಿಕ ತೆಗೆದಿದ್ದಾರೆ.
Related Articles
Advertisement
ಪ್ರಧಾನಿ ನರೇಂದ್ರ ಮೋದಿಗೆ ಪತ್ರ:
ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂ. ಕಳೆದುಕೊಂಡಿ ರುವ ಸಂತ್ರಸ್ತರಿಗೆ ನ್ಯಾಯ ಕೊಡಿಸಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹಜರತ್ ಟಿಪ್ಪುಸುಲ್ತಾನ್ ಅಮನ್ ಫೆಡರೇಷನ್‌ನ ಬೆಂಗಳೂರು ಅಧ್ಯಕ್ಷ ಮುರ್ತುಜಾ ಖಾನ್ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ಜಂಟಿ ನಿರ್ದೇಶಕ ಅಮಿತ್ ನಾರಾ ಅವರಿಗೆ ಪತ್ರ ಬರೆದಿರುವ ಮುರ್ತುಜಾ ಖಾನ್, ಅಧಿಕ ಬಡ್ಡಿ ಹಾಗೂ ಲಾಂಭಾಂಶ ಕೊಡುವುದಾಗಿ 13 ವರ್ಷಗಳಿಂದ ಮೊಹಮ್ಮದ್ ಮನ್ಸೂರ್ ಖಾನ್ ಶಿವಾಜಿನಗರದಲ್ಲಿರುವ ಐಎಂಎಂ ಸಂಸ್ಥೆ ಮೂಲಕ ಸಾವಿರಾರು ಮಂದಿಯಿಂದ 1,600 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಿದ್ದಾನೆ. ಆದರೆ, ಇದೀಗ ಹಣ ಹಿಂದಿರುಗಿಸದೆ ಆರೋಪಿ ಜೂನ್ 10ರಿಂದ ತಲೆಮರೆಸಿಕೊಂಡಿದ್ದು, ಹೂಡಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಸಂಬಂಧ ಆರೋಪಿಯ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೂ 40 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಹೀಗಾಗಿ ಸಂಘಟನೆಯ ಮನವಿಯನ್ನು ಪರಿಗಣಿಸಿ ಹೂಡಿಕೆ ಮಾಡಿರುವ 2.25 ಲಕ್ಷ ಮಂದಿಗೆ ನ್ಯಾಯ ಕೊಡಿಸಬೇಕು ಎಂದು ಮುರ್ತುಜಾ ಖಾನ್ ಪತ್ರದಲ್ಲಿ ಮನವಿ ಮಾಡಿದ್ದಾರೆ.