Advertisement

ಬಿಸಿಲಿನ ದಾಳಿ; ಬೇಸಗೆಗೆ ಮುನ್ನವೇ ಭಾರೀ ಸೆಖೆ; ರಾಯಚೂರು, ಕಲಬುರಗಿ ಕೆಂಡ

12:46 AM Mar 29, 2022 | Team Udayavani |

ಬೆಂಗಳೂರು/ಹೊಸದಿಲ್ಲಿ: ಎರಡು ವರ್ಷಗಳ ಹಿಂದೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಜನರೆಲ್ಲರೂ ಮನೆಯಲ್ಲಿಯೇ ಇದ್ದರು. ಪ್ರಸಕ್ತ ವರ್ಷ ಬಿಸಿಲಿನ ಪ್ರಖರತೆಯಿಂದ ಮನೆ ಯೊಳಗೇ ಕುಳಿತುಕೊಳ್ಳುವಂತೆ ಆಗಲಿದೆಯೇ?

Advertisement

ಈ ವರ್ಷ ಬೇಸಗೆ ಪ್ರವೇಶದ ಸಂದರ್ಭ ದಲ್ಲಿಯೇ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದಾರೆ. ಸೋಮವಾರ ರಾಯಚೂರಿನಲ್ಲಿ 41.4 ಡಿಗ್ರಿ ಸೆ., ಕಲಬುರಗಿಯಲ್ಲಿ 39.8 ಡಿಗ್ರಿ ಸೆ. ತಾಪ ಮಾನ ದಾಖಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಸಕ್ತ ವರ್ಷ ಕನಿಷ್ಠ 2ರಿಂದ 3 ಡಿಗ್ರಿ ಸೆ. ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಸಾಮಾನ್ಯವಾಗಿ ಬೇಸಗೆ ಆರಂಭ ಎಪ್ರಿಲ್‌ನಿಂದ. ಆದರೆ ಈ ವರ್ಷ ಅದಕ್ಕೆ ಮುನ್ನವೇ ಪ್ರಖರ ಬಿಸಿಲು ಕಾಡ ಲಾರಂಭಿಸಿದೆ. ಪ್ರತೀ ಬಾರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಎಪ್ರಿಲ್‌ ಬಳಿಕ ತಾಪಮಾನ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಕನಿಷ್ಠ 15 ದಿನ ಮೊದಲೇ ಬಿಸಿಲಿನ ಪ್ರಖರತೆ ಕಾಡುತ್ತಿದ್ದು, ಜನರು ತತ್ತರಿಸುತ್ತಿದ್ದಾರೆ. ಕಲಬುರಗಿ, ರಾಯಚೂರು, ಕೊಪ್ಪಳ, ಹಾವೇರಿ, ಗದಗ ಜಿಲ್ಲೆಗಳಲ್ಲಿ ರಣ ಬಿಸಿಲು ರಾಚುತ್ತಿದೆ.

41.5 ಡಿಗ್ರಿ ಸೆ. ದಾಖಲು
ರಾಯಚೂರು ಜಿಲ್ಲೆಯಲ್ಲಿ ಸೋಮವಾರ 41.5 ಡಿಗ್ರಿ ಸೆ., ಕಲಬುರಗಿಯಲ್ಲಿ 39.8 ಡಿಗ್ರಿ ಸೆ. ದಾಖಲಾಗಿದೆ. ಇದು 44 -45 ಡಿಗ್ರಿ ಸೆ.ವರೆಗೂ ಹೆಚ್ಚಳವಾಗಬಹುದು. ಸದ್ಯಕ್ಕಂತೂ ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ ಕಡಿಮೆಯಾಗುವ ಲಕ್ಷಣಗಳಿಲ್ಲ ಎಂದು ಬೆಂಗಳೂರು ಹವಾಮಾನ ಕೇಂದ್ರದ ಹವಾಮಾನ ತಜ್ಞ ಸದಾನಂದ ಅಡಿಗ ತಿಳಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಕೂಡ 40 ಡಿಗ್ರಿ ಸೆ.ಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬಿಸಿಲಿನ ಪ್ರಖರತೆ ಮತ್ತಷ್ಟು ಹೆಚ್ಚಾಗುವ ಸಂಭವ ಇದೆ.

ಸದ್ಯ ಕರಾವಳಿಗಿಲ್ಲ ಆತಂಕ
ಕರಾವಳಿ, ದ. ಒಳನಾಡಿನ ಅಲ್ಲಲ್ಲಿ ಮಳೆ ಯಾಗು ತ್ತಿರುವುದರಿಂದ ತಾಪಮಾನ ಸದ್ಯ ಹೆಚ್ಚುವ ಲಕ್ಷಣಗಳಿಲ್ಲ. ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿ ಗರಿಷ್ಠ ತಾಪ ಮಾನ 36.5 ಡಿಗ್ರಿ ಸೆ. ದಾಖಲಾಗಿತ್ತು. ಮಂಗಳೂರು ವಿಮಾನ ನಿಲ್ದಾಣ ದಲ್ಲಿ 33.7 ಡಿಗ್ರಿ ಸೆ. ಮತ್ತು ಪಣಂಬೂರಿನಲ್ಲಿ 35.8 ಡಿಗ್ರಿ ಸೆ. ಇತ್ತು.

Advertisement

ಇದನ್ನೂ ಓದಿ:ನಾಲ್ಕು ಲಕ್ಷ ಬಿಪಿಎಲ್‌ ಅರ್ಜಿಗಳಿಗೆ ತಿಂಗಳಲ್ಲಿ ಮುಕ್ತಿ: ಉಮೇಶ್‌ ಕತ್ತಿ

2 ದಿನ ಗುಡುಗು ಸಹಿತ ಮಳೆ
ಮುಂದಿನ 3-4 ದಿನಗಳಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳು ಮತ್ತು ಕರಾ ವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ  ಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.

ಉತ್ತರಕ್ಕೆ ಬಿಸಿಗಾಳಿ ಭೀತಿ
ಉತ್ತರ ಭಾರತದ ಕೆಲವು ಭಾಗಗಳಲ್ಲಿ ಮುಂದಿನ ಐದು ದಿನಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ರಾಜಸ್ಥಾನದ ಪಶ್ಚಿಮ ಮತ್ತು ಪೂರ್ವ ಭಾಗ, ಮಧ್ಯಪ್ರದೇಶದ ಪಶ್ಚಿಮ ಮತ್ತು ಉತ್ತರ ಭಾಗ, ಉತ್ತರ ಪ್ರದೇಶದ ದಕ್ಷಿಣ ಭಾಗ, ಒಡಿಶಾದ ಕೆಲವು ಪ್ರದೇಶಗಳು, ಮಹಾರಾಷ್ಟ್ರ, ಸೌರಾಷ್ಟ್ರ, ಪ್ರದೇಶಗಳಲ್ಲಿ ಮಾ.18-ಎ.1ರ ಅವಧಿಯಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next