Advertisement

ಕರಾವಳಿ: ಬೇಸಗೆ ಮಳೆ ದಾಖಲೆ

12:04 AM May 27, 2022 | Team Udayavani |

ಮಂಗಳೂರು: ಕರಾವಳಿಯಲ್ಲಿ ಈ ಬಾರಿ ಬಿರುಸಿನ ಬೇಸಗೆ ಮಳೆ ಸುರಿದಿದ್ದು, ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ದಾಖಲೆ ಮಾಡಿದೆ.

Advertisement

ಕರಾವಳಿ ಭಾಗದಲ್ಲಿ ಜನವರಿಯಿಂದ ಮೇ 21ರ ವರೆಗೆ ವಾಡಿಕೆಯಂತೆ ಸುರಿಯಬೇಕಿದ್ದ ಮಳೆ 96.6 ಮಿ.ಮೀ. ಆದರೆ ಈ ಬಾರಿ 306.3 ಮಿ.ಮೀ. ಮಳೆ ಸುರಿದಿದ್ದು, ಶೇ. 217ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುರಿದ ಮಳೆ ಶೇ. 8ರಷ್ಟು ಕಡಿಮೆ. ಆದರೆ ಮುಂಗಾರು ಆರಂಭಕ್ಕೆ ಇನ್ನೂ ಕೆಲವು ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಬಾರಿ ಬೇಸಗೆ ಮಳೆ ದಾಖಲೆಯಾಗಬಹುದು ಎನ್ನುವ ನಿರೀಕ್ಷೆಯಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ವಾಡಿಕೆಗಿಂತ ಶೇ. 138 ಹೆಚ್ಚಳ, ಬಂಟ್ವಾಳ ಶೇ. 196, ಮಂಗಳೂರು ಶೇ. 76, ಪುತ್ತೂರು ಶೇ. 205, ಸುಳ್ಯ ಶೇ. 251, ಮೂಡುಬಿದಿರೆ ಶೇ. 218, ಕಡಬದಲ್ಲಿ ಶೇ. 151, ಕಾರ್ಕಳದಲ್ಲಿ ಶೇ. 195, ಕುಂದಾಪುರದಲ್ಲಿ ಶೇ. 238, ಉಡುಪಿಯಲ್ಲಿ ಶೇ. 278, ಬೈಂದೂರು ಶೇ. 269, ಬ್ರಹ್ಮಾವರದಲ್ಲಿ ಶೇ. 215, ಕಾಪುವಿನಲ್ಲಿ ಶೇ. 202 ಮತ್ತು ಹೆಬ್ರಿಯಲ್ಲಿ ಶೇ. 212ರಷ್ಟು ಹೆಚ್ಚು ಮಳೆಯಾಗಿದೆ.

ಹವಾಮಾನ ಇಲಾಖೆ ತಜ್ಞರ ಪ್ರಕಾರ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿದರೆ ಮುಂದೆ ಆಗಮಿಸುವ ಮುಂಗಾರು ಮಾರುತದ ಪ್ರಭಾವ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಬೇಸಗೆ ಮಳೆ ಕಡಿಮೆಯಾದರೆ ಭೂ ಭಾಗದಲ್ಲಿ ತೇವಾಂಶ ಕಡಿಮೆ ಇದ್ದು, ಆಗ ಉಷ್ಣಾಂಶದಲ್ಲಿ ಏರಿಕೆ ಕಂಡು ವಾತಾವರಣದ ಒತ್ತಡ ಕಡಿಮೆ ಆಗುತ್ತದೆ. ಆಗ ಮುಂಗಾರು ಮಾರುತ ವೇಗ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಈ ಬಾರಿ ಮುಂಗಾರು ಆಗಮಿಸಲು ಕೆಲವೇ ದಿನಗಳು ಇರುವಾಗ “ಅಸಾನಿ’ ಚಂಡಮಾರುತ ಪ್ರವೇಶಿಸಿದ್ದು, ಮುಂಗಾರು ಮಾರುತ ತೀವ್ರಗೊಳ್ಳಲು ಕಾರಣವಾಗಬಹುದು. ಹೀಗಾಗಿ ಮೇ 28ರ ಅಂದಾಜಿಗೆ ಕೇರಳ ಕರಾವಳಿಗೆ ಮುಂಗಾರು ಪ್ರವೇಶಿಸುವ ನಿರೀಕ್ಷೆ ಇದ್ದು, ಬಳಿಕ ನಮ್ಮ ಕರಾವಳಿಯನ್ನು ಸ್ಪರ್ಶಿಸುವ ನಿರೀಕ್ಷೆ ಇದೆ.

ರಾಜ್ಯದಲ್ಲೇ ಕರಾವಳಿಯಲ್ಲಿ ಅಧಿಕ ಮಳೆ :

Advertisement

ಕರಾವಳಿ ಭಾಗದಲ್ಲಿ 96.6 ಮಿ.ಮೀ. ವಾಡಿಕೆ ಮಳೆಯಲ್ಲಿ 306.3 ಮಿ.ಮೀ. ಮಳೆಯಾಗಿ ರಾಜ್ಯದಲ್ಲೇ ಅಧಿಕ ಶೇ. 217ರಷ್ಟು ಹೆಚ್ಚು ಮಳೆ ಸುರಿದಿದೆ. ರಾಜ್ಯಕ್ಕೆ ಹೋಲಿಕೆ ಮಾಡಿದರೆ ಬೀದರ್‌ (ಶೇ.-2) ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ.

ಕರಾವಳಿಯಲ್ಲಿ ಪೂರ್ವ ಮುಂಗಾರು ಮಳೆ

(ವಾಡಿಕೆ ಮಳೆ: 158.2 ಮಿ.ಮೀ.)

ವರ್ಷ  ಸುರಿದ ಮಳೆ   ಶೇ.

2017    148      -13

2018    312      82

2019    44        -74

2020    149      -6

2021    514.7   225

2022    306.3   217

ಈ ಬಾರಿ ಕರಾವಳಿ  ಸಹಿತ ರಾಜ್ಯದಲ್ಲಿಯೇ ಪೂರ್ವ ಮುಂಗಾರು ಉತ್ತಮವಾಗಿತ್ತು. ಅದರಲ್ಲೂ ಅಸಾನಿ ಚಂಡಮಾರುತದ ಪರಿಣಾಮ ಹಲವು ಭಾಗಗಳಲ್ಲಿ ಮಳೆಯಾಗಿತ್ತು. – ಡಾ| ರಾಜೇಗೌಡ,  ಕೃಷಿ ವಿ.ವಿ. ಹವಾಮಾನ ವಿಜ್ಞಾನಿ 

 

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next