ಬೆಂಗಳೂರು : ಎಲ್ಲೆಲ್ಲೂ ಬಿಸಿಲಿನ ಕಾವಿಗೆ ತತ್ತರಿಸಿದ್ದು ನೆರಳು ಸಿಕ್ಕಿದರೆ ಸಾಕಪ್ಪಾ, ಯಾರಾದರೂ ತಣ್ಣನೆಯ ನೀರು ಕೊಟ್ಟರೆ ಸಾಕಪ್ಪಾ.. ಎಂಬ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪಟ್ಟಣದಲ್ಲಿ ವಾಹನಗಳ ಗಿಜಿ ಗಿಜಿ ವಾತಾವರಣದಲ್ಲಿ, ಡಾಂಬರು ರಸ್ತೆಯ ತಾಪದ ನಡುವೆ ಜೀವನ ಸಾಗಿಸುವುದು ಅನಿವಾರ್ಯವಾಗಿದೆ. ಇನ್ನು ಆಫೀಸಿಗೆ ಹೋಗಿ ಎಷ್ಟು ಬೇಗ ಎಸಿಯಲ್ಲಿ ಕೂರುತ್ತೇವೋ ಎಂಬಷ್ಟರ ಮಟ್ಟಿಗೆ ಬಿಸಿಲಿನ ತಾಪ ಜನರನ್ನು ಕಾಡುತ್ತಿದೆ. ಆದ್ರೆ ಏನು ಮಾಡುವುದು ಬೇಸಿಗೆಯೇ ಹಾಗೆ. ಇದಕ್ಕೆ ತಕ್ಕಂತೆ ನಾವುಗಳೇ ಹೊಂದಿಕೊಂಡು ಹೋಗಬೇಕು. ಇಷ್ಟೇ ಅಲ್ಲದೆ ಈ ವಾತಾವರಣಕ್ಕೆ ತಕ್ಕಂತಹ ಆಹಾರಗಳನ್ನು ತಿಂದರೆ ದೇಹ ತಂಪಾಗಿರುತ್ತದೆ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾದರೆ ಅಂತಹ ತಿನಿಸುಗಳು ಯಾವುವು ಅಂದ್ರಾ.. ಬನ್ನಿ ನೋಡೋಣ..
ಮೊಸರು : ಹಿತವಾದ ಮತ್ತು ಪ್ರೋಬಯಾಟಿಕ್ ಮೊಸರು ನಿಮ್ಮ ಕರುಳಿಗೆ ತುಂಬಾ ಒಳ್ಳೆಯದು. ಇಷ್ಟೇ ಅಲ್ಲ ಇದು ನಿಮ್ಮ ಹೊಟ್ಟೆಯನ್ನು ತಂಪಾಗಿಸಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ಸ್ಥಿರಗೊಳಿಸಲು ಸಹಾಯ ಮಾಡುವುದಲ್ಲದೆ, ಮೊಸರು ರೋಗನಿರೋಧಕ ಶಕ್ತಿಯನ್ನೂ ಹೊಂದಿದೆ. ಜೀರ್ಣಕ್ರಿಯೆ, ಹೃದಯ ಮತ್ತು ಚರ್ಮಕ್ಕೂ ಉತ್ತಮ. ಮೊಸರನ್ನು ಅನ್ನದ ಜೊತೆ ತಿಂದರೂ ಒಳ್ಳೆಯದು, ಇಲ್ಲವಾದರೆ ಸಕ್ಕರೆ ಜೊತೆ ಸೇವಿಸಿದರೂ ಉತ್ತಮ.
ಪುದೀನ : ಪುದೀನವು ಭಾರತದಲ್ಲಿ ಬೇಸಿಗೆಗೆ ಉತ್ತಮ ಆಹಾರ ಅಂದರೆ ತಪ್ಪಾಗುವುದಿಲ್ಲ. ನೀವು ಪುದೀನವನ್ನು ಚಟ್ನಿ ಮಾಡಿ ತಿನ್ನಬಹುದು. ಇಲ್ಲವಾದರೆ, ಜೂಸ್ ಮಾಡಿ ಕುಡಿಯಬಹುದು. ಇಷ್ಟೇ ಯಾಕೆ, ರೈಟಾ ಮತ್ತು ಐಸ್ ಕ್ರೀಮ್ ಗಳಲ್ಲಿಯೂ ಇದನ್ನು ಬಳಸಬಹುದು. ತಾಜಾ ಪುದೀನ ತಂಪಿನೊಂದಿದೆ ಯಾವುದೇ ಖಾದ್ಯದ ಪರಿಮಳವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಜೀರ್ಣಕ್ರಿಯೆ ಸುಲಭವಾಗುವ ಅಂಶಗಳು ಇರುವುದರಿಂದ ನಿಮ್ಮ ಚರ್ಮ, ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಗಳ ವೃದ್ಧಿಗೆ ಸಹಾಯ ಮಾಡುತ್ತದೆ.
ಸೌತೇಕಾಯಿ : ಇದು ದೇಹವನ್ನು ತಂಪಾಗಿಸುವ ತರಕಾರಿ. ಬೇಸಿಗೆ ಕಾಲದಲ್ಲಿ ಅತೀ ಹೆಚ್ಚು ಸೌತೇಕಾಯಿ ತಿನ್ನುವುದರಿಂದ ನಿಮ್ಮ ದೇಹದ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ನಿರ್ಜಲೀಕರಣ ದೂರವಾಗುತ್ತದೆ. ಅಲ್ಲದೆ ದೇಹವನ್ನು ತಂಪಾಗಿಡುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುವ ಶಕ್ತಿಯನ್ನು ಸೌತೇಕಾಯಿ ಹೊಂದಿದೆ. ಸೌತೆಕಾಯಿ ಉತ್ತಮ ಕ್ಯಾಲೊರಿಗಳನ್ನು ಹೊಂದಿದ್ದು, ಶೂನ್ಯ ಕೊಬ್ಬಿನ ಅಂಶ ಹೊಂದಿರುವ ತರಕಾರಿ ಇದಾಗಿದೆ.
ನಿಂಬೆಹಣ್ಣು : ನಿಂಬು ಪಾನಿ ಅಥವಾ ನಿಂಬೆ ರಸ ಬೇಸಿಗೆಗೆ ಹೇಳಿ ಮಾಡಿಸಿದ ಪಾನೀಯ. ಈ ನಿಂಬೆ ಶರಬತ್ತಿಗೆ ಸಕ್ಕರೆಯ ಬದಲು ಜೇನು ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ನಿಮ್ಮ ದೇಹವನ್ನು ತಂಪಾಗಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಲ್ಲಂಗಡಿ ಹಣ್ಣು : ಬೇಸಿಗೆ ಬಂತೆಂದರೆ ಸಾಕು ಲೋಡು ಲೋಡು ಕಲ್ಲಂಗಡಿ ಹಣ್ಣುಗಳ ರಾಶಿಗಳನ್ನು ರಸ್ತೆ ಬದಿಗಳಲ್ಲಿ ಕಾಣ ಬಹುದು. ಅಲ್ಲದೆ ಜೂಸ್ ಅಂಗಡಿಗಳಲ್ಲೂ ಕಲ್ಲಂಡಿಗಳದ್ದೇ ಕಾರುಬಾರು. ಇದು ಆರೋಗ್ಯಕ್ಕೆ ಎಷ್ಟು ಉಪಯುಕ್ತ ಅಂದರೆ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದರ ಜೊತೆಯಲ್ಲಿ ದೇಹದ ನೀರಿನ ಅಂಶವನ್ನು ಹೆಚ್ಚಿಸುತ್ತದೆ. ಜೀರ್ಣ ಕ್ರಿಯೆಯನ್ನು ಸುಲಭಗೊಳಿಸಲು ಕಲ್ಲಂಗಡಿ ಹಣ್ಣು ಸಹಾಯ ಮಾಡುತ್ತದೆ. ಎಲ್ಲಾ ಸಮಯದಲ್ಲೂ ಪೋಷಕಾಂಶಗಳು ಮತ್ತು ಸಾಕಷ್ಟು ಪ್ರಮಾಣದ ನೀರಿನಿಂದ ತುಂಬಿರುವ ಇದು ಬೇಸಿಗೆ ಕಾಲಕ್ಕೆ ಉಪಯುಕ್ತವಾದ ತಿನಿಸು.