Advertisement

ಚಿಣ್ಣರ ತರಿಕಿಟ ಸಂಭ್ರಮ

06:00 AM May 18, 2018 | |

ರಜಾದಿನಗಳಲ್ಲಿ ಮಕ್ಕಳನ್ನು ಮಕ್ಕಳಾಗಿಯೇ ಬಿಟ್ಟು ಬಿಡಬೇಕು. ಆಟ, ಕೂಟ, ಮೋಜು, ಗೌಜಿ ಆ ಸಂಭ್ರಮದಲ್ಲಿ ಮಕ್ಕಳಿರುವಾಗ ಆ ಸಮಯದಲ್ಲೂ ಪಾಠ, ಸ್ಪೆಷಲ್‌ಕ್ಲಾಸ್‌, ಟ್ಯೂಷನ್‌ ಎಂದರೆ ಇದು ಮಕ್ಕಳ ಮನಸಿಗೆ ಮಾನಸಿಕ ಹಿಂಸೆಯೇ ಸರಿ. ಮಂಗಳೂರಿನ ಕುಂಜತ್‌ಬೈಲಿನಲ್ಲಿ ರಂಗ ಸ್ವರೂಪ ಈ ಸಲ ತರಿಕಿಟ ಸಂಭ್ರಮ ಎಂಬ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ಯಾವ ರೀತಿಯ ಕಟ್ಟುನಿಟ್ಟಿನ ರೀತಿ ನಿಯಮ ನಿಬಂದನೆಗಳಿಲ್ಲ. ಮಕ್ಕಳು ಮಕ್ಕಳಾಗಿಯೇ ತಮ್ಮ ಆಟದ ಮನರಂಜನೆಯ ಕನಸುಗಳನ್ನು ಆಕಾಶಕ್ಕೇರಿಸುವಂತೆ ಸುಸೂತ್ರವಾಗಿರುತ್ತವೆ. ಮಕ್ಕಳ ಮನಸುಗಳು ಪರಸ್ಪರ ಬೆರೆತುಕೊಂಡು ಅವರವರ ಸ್ವಪ್ರಯತ್ನಗಳಲ್ಲೇ ಸೃಜನಶೀಲ ಧೋರಣೆಗಳನ್ನು ಕಟ್ಟಿಕೊಳ್ಳುತ್ತವೆ. ಹಾಗೆ ನೋಡಿದರೆ ಶಿಬಿರಗಳು ಮಕ್ಕಳ ಪ್ರತಿಭೆಯನ್ನು ಅರಸಿ ಅವರ ಮುಂದಿನ ಪ್ರತಿಭಾ ಚಟುವಟಿಕೆಗಳಿಗೆ ಅವಕಾಶಗಳನ್ನು ಕಲ್ಪಿಸುವ ವೇದಿಕೆ ಎಂದೇ ಹೇಳಬಹುದು. ಹಾಡು, ಕಿರುಚುವಿಕೆ, ಇಷ್ಟ ಬಂದ ಕುಣಿತ, ಗೀಚಿದ್ದೇ ಚಿತ್ರ, ತೋಚಿದ್ದೇ ನೃತ್ಯ, ಸಂಕೋಚ, ನಾಚಿಕೆ, ಕೀಳರಿಮೆಗಳಿಗೆ ಅವಕಾಶಗಳೇ ಇಲ್ಲದಂತೆ ಎಲ್ಲ ಮಕ್ಕಳೂ ಸಮಾನರಾಗಿ ಸಂಯಮ ರೀತಿಯಲ್ಲಿ ಶಿಬಿರದ ಸಂಘಟನೆಯೇ 15 ವರ್ಷಗಳಿಂದ ಶಿಬಿರದ ಯಶಸ್ಸಿಗೆ ಕಾರಣಗಳು. ರೆಹಮಾನ್‌ ಖಾನ್‌ ನೇತೃತ್ವದಲ್ಲಿ ಆಯೋಜಿಸಲ್ಪಡುವ ಈ ಶಿಬಿರದ ಸಂಘಟನೆಯಲ್ಲಿ ಪ್ರೇಮನಾಥ್‌ ಮರ್ಣೆ, ಸುಬ್ರಹ್ಮಣ್ಯ, ಅರವಿಂದ ಕುಡ್ಲ, ತಸ್ಲಿಮಾ ಬಾನು, ರೆಹನಾ, ಅಕ್ಷತಾ ಮುಂತಾದ ನವ ಚಿಂತನೆಯುಳ್ಳ ಯುವ ಮನಸುಗಳೇ ಬೆರೆತುಕೊಂಡಿವೆ. ಮೈಮ್‌, ಪೇಪರ್‌ ಕ್ರಾಫ್ಟ್, ವರ್ಲಿಕಲೆ, ಮುಖವಾಡ ರಚನೆ, ಪೇಪರ್‌ ಕೊಲಾಜ್‌, ಕನ್ನಡ ಹಸ್ತಾಕ್ಷರ, ಭಿತ್ತಿಚಿತ್ರ, ಮ್ಯಾಗಜಿನ್‌ ತಯಾರಿ ಮುಂತಾದವುಗಳ ಬಗ್ಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗಿತ್ತು. ಮಕ್ಕಳಿಗೆ ಎಲ್ಲಿಯೂ ಒತ್ತಾಯಗಳಿಲ್ಲದ ಕಾರಣ ಮತ್ತು ಅವರವರ ಸ್ವಇಚ್ಚೆಗೆ ಪೂರಕವಾದ ವಾತಾವರಣವಿದ್ದುದರಿಂದ ಮಕ್ಕಳಿಗೆ ಇದು ಮನೆಯಂತೆಯೇ ಆಗುತ್ತಿತ್ತು. ಮಕ್ಕಳ ಪೋಷಕರು ಖುಷಿಯಿಂದಲೇ ಈ ಶಿಬಿರಕ್ಕೆ ಕಳುಹಿಸುತ್ತಿದ್ದು ಎಲ್ಲೋ ಒಂದು ಕಡೆ ಶಾಲಾ ಕಲಿಕೆಗೂ ಈ ಶಿಬಿರವು ಪ್ರೇರಣೆಯಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಭವಿಷ್ಯದ ಸುಭದ್ರ ಸಮಾಜವನ್ನು ಕಟ್ಟಿಕೊಡಬೇಕಾದ ಮಕ್ಕಳಿಗೆ ಬಾಲ್ಯದಲ್ಲೇ ಶೋಧನೆಯೊಂದಿಗೆ ಬೋಧನೆಯಾದರೆ ಅದು ಸ್ವಸ್ಥ ಸಮಾಜಕ್ಕೆ ಅನುಮೋದನೆಯಾಗುತ್ತಿದೆ. ಈ ತರಿಕಿಟ ಸಂಭ್ರಮದಲ್ಲಿ ಮಕ್ಕಳ ನಲಿದದ್ದೆಷ್ಟು, ಒಲಿದದ್ದಷ್ಟು, ಬಿದ್ದದ್ದೆಷ್ಟು ಎದ್ದದ್ದೆಷ್ಟು ಎಂಬ ತಮ್ಮ ಎಲ್ಲಾ ಅನುಭವಗಳನ್ನು ಶಿಬಿರದ ಸಮಾರೋಪದಲ್ಲಿ ಹಂಚಿಕೊಂಡಿದ್ದೇ ನಲಿವು ಗೆಲುವಿಗೆ ಸಾಕ್ಷಿಯಾಗಿತ್ತು. ಈ ನೆಲದ ಪ್ರೀತಿಗಾಗಿ ಎಂಬ ಪರಿಸರ ಕಾಳಜಿಯೂ ಇರುವ ರಂಗಸ್ವರೂಪದ ಶಿಬಿರಕ್ಕೆ ಮುಂದಿನ ದಿನಗಳಲ್ಲಿ ಪೂರಕವಾದ ವಾತಾವರಣ ನಿರ್ಮಾಣವಾಗಲಿ ಎಂದು ಹಾರೈಸೋಣ. 

Advertisement

 ದಿನೇಶ್‌ ಹೊಳ್ಳ 

Advertisement

Udayavani is now on Telegram. Click here to join our channel and stay updated with the latest news.

Next