Advertisement

ಅಜ್ಜಿಮನೆಯೆಂಬ ಬೇಸಿಗೆ ಶಿಬಿರ

04:26 PM Apr 10, 2018 | |

ಅಜ್ಜಿ ಊರಿನಲ್ಲಿ ಮೊಮ್ಮಕ್ಕಳಿಗಾಗಿ ಕಾದಿದ್ದಾಳೆ. ಮೊಮ್ಮಕ್ಕಳೆಲ್ಲ ದೊಡ್ಡ ಮೊತ್ತದ ಫೀಸು ಕೊಟ್ಟು ಬೇಸಿಗೆ ಶಿಬಿರದ ಗೂಡು ಸೇರಿದ್ದಾರೆ. ಅಜ್ಜಿಮನೆಯೆಂದರೆ, ಜೀವನ ಪಾಠಗಳನ್ನೆಲ್ಲಾ ಕೆಲವೇ ಕೆಲವು ದಿನಗಳಲ್ಲಿ ಕಲಿಸುವ, ಜಗತ್ತಿನ ಯುನಿವರ್ಸಿಟಿಗಳನ್ನೆಲ್ಲ ಮೀರಿದ ಮಹಾವಿದ್ಯಾಲಯ ಎನ್ನುವುದು ಪಾಪ, ಈಗಿನ ಮೊಮ್ಮಕ್ಕಳಿಗೇನು ಗೊತ್ತು? ಅಜ್ಜಿಮನೆಯಂಥ ಬೇಸಿಗೆ ಶಿಬಿರ ಮತ್ತೂಂದಿಲ್ಲ. ಅಲ್ಲಿ ಸಿಗುವ ಜೀವನಪಾಠಗಳಿಗೆ ಯಾವ ಫೀಸೂ ಇಲ್ಲ…

Advertisement

ಎಷ್ಟೋ ವರ್ಷಗಳ ನಂತರ ಅಜ್ಜಿ ಮನೆಯ ದಾರಿ ಹೊಕ್ಕ ಅವನಿಗೆ ಅಲ್ಲಿನ ಮರದ ನೆರಳಲ್ಲಿ ಕಳೆದುಹೋದ ಸ್ವಪ್ನಗಳೆಲ್ಲಾ ಸಿಕ್ಕಂತಾಯ್ತು. ಬಾಲ್ಯದಲ್ಲಿ ಅವನನ್ನು ಅಜ್ಜಿಮನೆ ದಾರಿ ಸಾಗಿಸುತ್ತಿದ್ದ ಆ ಕೆಂಪು ಲಟಾರಿ ಬಸ್ಸು ಈಗ ಬದಲಾಗಿದ್ದರೂ, ಅದರ ಪಯಣ ಅವನಿಗೆ ಭೂಲೋಕದಲ್ಲಿ ತೇಲುವ ಪುಷ್ಪಕ ವಿಮಾನದಲ್ಲಿ ಕೂತಷ್ಟು ಫೀಲ್‌ ಕೊಟ್ಟಿತು.

ಅಜ್ಜಿ ಮನೆಯ ನದಿ, ಕಾಡು, ಡಾಂಬರು ರೋಡು, ಹಂಚಿನ ಮಾಡು, ಹಕ್ಕಿಗಳ ಸಂಗೀತ ಅವನಿಗೆ ಹುಚ್ಚೇ ಹಿಡಿಸಿಬಿಟ್ಟತು. ಮನೆ ಒಳಗೆ ಹೊಕ್ಕಾಗ ಪ್ರೀತಿಯಿಂದ ಕೈಗೆ ಜಗತ್ತೇ ಬಂತು ಅಂತ ತಬ್ಬಿಕೊಂಡ ಅಜ್ಜಿಯ ಅಪ್ಪುಗೆ ಅವನನ್ನು ಯಾವುದೋ ಹಿತವಾದ ಲೋಕಕ್ಕೆ ಕರೆದೊಯ್ಯಿತು. ಮದುವೆ ವಯಸ್ಸಿಗೆ ಬಂದಿದ್ದರೂ ಅಜ್ಜಿ ಮನೆಯ ಮೌನ, ಅಲ್ಲಿ ಮಾತ್ರ ಸಿಗುವಂತಿದ್ದ ಸಗಣಿ ಸಾರಿಸಿದ ಅಂಗಳದ ಪರಿಮಳ, ಕಾಡು ಹಣ್ಣಿನ ಘಮಲು, ಆ ಕ್ಷಣಕ್ಕೆ ಅವನಲ್ಲಿ ಮತ್ತಷ್ಟು ಹುಮ್ಮಸ್ಸನ್ನು, ಜೀವನ ಪ್ರೀತಿಯನ್ನು ಮೂಡಿಸಿಬಿಟ್ಟಿತು.

ಹೀಗೆಲ್ಲ ಅಜ್ಜಿಮನೆಯಲ್ಲಿ ಅಜ್ಜಿಯ ಸ್ವಾದಿಷ್ಟ ಪ್ರೀತಿ, ಹಂಡೆ ಸ್ನಾನದ ಅಸಲಿ ಖುಷಿ, ಅಜ್ಜನ ಕತೆಯನ್ನೂ ಹೀರಿದಾಗೆಲ್ಲ ಅವನು ಬೆಳಕಿನ ಉಂಡೆಯಂತಾಗುತ್ತಿದ್ದ, ಬದುಕುವ ಹುಮ್ಮಸ್ಸು ಅವನಲ್ಲಿ ಹೆಚ್ಚಾಗಿತ್ತು. ಗೆಳೆಯರಿಗೂ ಬದುಕಿನ ಬಗ್ಗೆ ಇನ್ನೂ ಆಶೆ ಹುಟ್ಟಿಸುತ್ತಿದ್ದ, ಅಜ್ಜಿ ಮನೆಯ ದಾರಿಯತ್ತ ಸಾಗಲು ಪ್ರೇರೇಪಿಸುತ್ತಿದ್ದ. ಅಜ್ಜಿ ಮನೆಯೆಂದರೆ ಹಾಗೇ,

ಜೀವನದ ಚೆಂದದ ಚಿತ್ರಗಳನ್ನು, ಕತೆಗಳನ್ನು ತೋರಿಸುವ ಪುಟ್ಟ ಬೆಳಕಿಂಡಿ. ಜೀವನ ಪಾಠಗಳನ್ನೆಲ್ಲಾ ಕೆಲವೇ ಕೆಲವು ದಿನಗಳಲ್ಲಿ ಕಲಿಸುವ, ಜಗತ್ತಿನ ಯುನಿವರ್ಸಿಟಿಗಳನ್ನೆಲ್ಲ ಮೀರಿದ ಮಹಾವಿದ್ಯಾಲಯ. ಯಾವ ಅಹಂಗಳನ್ನೂ, ಕೊರಳ ಪಟ್ಟಿಗಳನ್ನೂ ಅಂಟಿಸಿಕೊಳ್ಳದೇ ಪ್ರೀತಿಯಿಂದ ಪಾಠ ಹೇಳುವ ಅಜ್ಜಿ ಅನ್ನೋ ಅಕ್ಕರೆಯೇ, ಈ ಬೇಸಿಗೆ ಶಿಬಿರಕ್ಕೆ ಹಾಲು ಸಕ್ಕರೆ.

Advertisement

ಅಜ್ಜಿಮನೆ ಎಂಬ ವಂಡರ್‌ಲ್ಯಾಂಡ್‌!: ಹಕ್ಕಿಯೊಂದು ತನ್ನ ಮರಿಗೆ ಗುಟುಕು ಕೊಡೋದು ಹೇಗೆ? ಮರದಲ್ಲಿ ತುಂಬಿರುವ ಆ ಮಾವಿನ ಕಾಯಿಯ ಹೆಸರೇನು? ಯಾವ ಬ್ಯಾಟು- ಬಾಲುಗಳಿಲ್ಲದೆಯೂ ಐಪಿಎಲ್‌ಗಿಂತ ರೋಚಕ ಪಂದ್ಯಗಳನ್ನಾಡುವುದು ಹೇಗೆ? ಆ ನದಿ ಹರಿದು ಎಲ್ಲಿ ಸೇರುತ್ತದೆ? ಅದರ ಮೂಲ ಯಾವುದು? ಅಲ್ಲೇ ಬುಡದಲ್ಲಿರುವ ಆ ಮರದ ಕತೆಯೇನು?

ಇಂತಹ ಸಾವಿರ ಪ್ರಶ್ನೆಗಳಿಗೆಲ್ಲಾ ಅಜ್ಜಿ ಮನೆ ಅನ್ನೋ ಸುಂದರ ಪಾಠಶಾಲೆಯಲ್ಲಿ ಕೂಡಲೇ ಉತ್ತರ ಸಿಕ್ಕಿಬಿಡುತ್ತದೆ. ಭಾರತದ ಉದ್ದದ ನದಿ ಯಾವುದು? ಎತ್ತರದ ಶಿಖರ ಯಾವುದು? ನಿತ್ಯ ಹರಿದ್ವರ್ಣದ ಕಾಡುಗಳು ಹೇಗಿರುತ್ತವೆ? ಅನ್ನೋ ಪ್ರಶ್ನೆಗಳಿಗೆಲ್ಲ ಪುಸ್ತಕಕ್ಕೆ ಕಣ್ಣು ಕೊಡುವುದನ್ನು ಬಿಡಿಸಿ, ಅಜ್ಜಿ ಮನೆ ಅನ್ನೋ ಸ್ವರ್ಗ ಉತ್ತರರೂಪಿಯಾಗಿ ನಮ್ಮೊಳಗೆ ಇಳಿಯುತ್ತಿತ್ತು. 

ದೂರದ ಬೆಟ್ಟಗಳನ್ನು ಹತ್ತಿರದಿಂದ ಕಾಣಿಸುತ್ತಾ, ಬೆಟ್ಟ ಹತ್ತಿಸುವ ಆಸೆ ಹುಟ್ಟಿಸುತ್ತಿತ್ತು. ನಿತ್ಯ ಹರಿದ್ವರ್ಣ ಕಾಡಿನ ಹಸಿರಲ್ಲಿ ಕರಗಿಸಿ, ದಾರಿ ತಪ್ಪಿಸಿ, ಒಂದಿಷ್ಟು ಪಾಠ ಕಲಿಸುತ್ತಿತ್ತು. ನಾವು ಹಕ್ಕಿಗಳ ಗೂಡನ್ನು ಹತ್ತಿರದಿಂದ ನೋಡಿದ್ದು ಹಕ್ಕಿಗೆ ಗೊತ್ತಾದರೆ ಮತ್ತೆಂದೂ ಅದು ಗೂಡಿನ ಕಡೆ ತಲೆಯೇ ಹಾಕೋಲ್ಲ ಅನ್ನೋ ನಿಸರ್ಗದ ತಿಳಿವಳಿಕೆ ಮೂಡಿಸುತ್ತಿತ್ತು, ಮಾವಿನ ಹಣ್ಣು ತಿನ್ನೋಕೆ ಆಸೆಯಾದರೆ, ಗೇರು ಹಣ್ಣನ್ನು ಹೀರುವ ಮನಸ್ಸಾದರೆ, ಮರ ಹತ್ತೋದನ್ನೂ ಕಲಿಸುತ್ತಿತ್ತು ಈ ಅಜ್ಜಿಮನೆಯೆಂಬ ಬೇಸಿಗೆ ಕ್ಯಾಂಪು!

ಅಲ್ಲಿದೆ ಅಜ್ಜಿ ಮನೆ, ಈ ಶಿಬಿರ ಸುಮ್ಮನೆ!: ಈ ಹಿಂದೆ, ಅಜ್ಜ- ಅಜ್ಜಿ ಅನ್ನೋ ಜೀವಗಳಿಗಿರುತ್ತಿದ್ದ ಮರ್ಯಾದೆ, ಆ ಹೆಸರುಗಳನ್ನು ಬಾಯಲ್ಲಿಟ್ಟ ಕೂಡಲೇ ಉಕ್ಕುತ್ತಿದ್ದ ಅದಮ್ಯ ಉತ್ಸಾಹ, ಈಗಿನ ಮಕ್ಕಳಲ್ಲಿವೇನೋ, ಅವರ ಹೆತ್ತವರಿಗೂ ಇಲ್ಲವೇನೋ ಅಂತನ್ನಿಸಿ ಬೇಸರವೊಂದು ಆವರಿಸಿಕೊಳ್ಳುತ್ತದೆ. ನಮಗೆ ಸಿಕ್ಕಂಥ ಅಜ್ಜಿಯ ಮನೆಯ ಖುಷಿ, ನಮ್ಮ ಮಕ್ಕಳಿಗೆ ಸಿಗಲೇ ಇಲ್ವಲ್ಲ,

ಸಿಗಲಿಕ್ಕೆ ನಾವೇ ಬಿಡಲಿಲ್ವಲ್ಲ ಎಂಬ ಅಪರಾಧಿ ಪ್ರಜ್ಞೆ ಈಗಿನ ಹೆತ್ತವರನ್ನು ಕಾಡುತ್ತಿಲ್ಲವೇ? ನಿರಂತರ ಸಂಘರ್ಷದಿಂದಲೋ, ಸೆಣಸಾಟದಿಂದಲೋ, “ಅಯ್ಯೋ ಆ ಮುದುಕ- ಮುದುಕಿಯ ಹಂಗ್ಯಾಕೆ’ ಅನ್ನುವ ಅಸಡ್ಡೆಯಿಂದಲೋ? ಅಪ್ಪ - ಅಮ್ಮನ ಜತೆಗೆ ಸಂಬಂಧ ಕಡಿದುಕೊಂಡು ಹಾಯಾಗಿರಬೇಕು ಅಂತ ಯಾವ್ಯಾವ ಊರಿನ ಪಾದಕ್ಕೋ ಸಲೀಸಾಗಿ ಸೇರಿಕೊಳ್ಳುತ್ತೇವೆ.

ಮನಸ್ಸಾದರೆ ಮತ್ತೆ ತವರೂರಿಗೆ ಬಂದು ಮಕ್ಕಳನ್ನು ಅಜ್ಜ- ಅಜ್ಜಿಗೆ, ಬೇಕೋ ಬೇಡವೋ ಅನ್ನುವಂತೆ ತೋರಿಸಿ ನಿರುಮ್ಮಳರಾಗಿ ಬಿಡುತ್ತೇವೆ. ಪುಟ್ಟ ಮಕ್ಕಳ ಕಿರುಬೆರಳನ್ನೋ, ಕೆಂಚು ಕೆಂಚು ಹೆರಳನ್ನೋ ಖುಷಿಯಿಂದ ನೇವರಿಸುತ್ತಾ ತಲ್ಲೀನರಾಗುವ ಅಜ್ಜ- ಅಜ್ಜಿಯ ಪ್ರೀತಿಯ ಸ್ವತ್ಛಂದತೆ ನಮ್ಮಂಥ ಮೂಢ ಮನಸ್ಸಿಗೆ ಅರ್ಥವಾಗುವುದು, ನಾವು ಅವರಂತೆ ಮುದುಕರಾದಾಗಲೇನೋ ಗೊತ್ತಿಲ್ಲ.

ಅಜ್ಜನ ಮನೆಗೆ ಹೋಗಿ ಗಮ್ಮತ್ತು ಮಾಡೋಣ ಎಂಬ ಆಸೆ ಮಕ್ಕಳಿಗೆ ಇದ್ದರೂ, ಸಮ್ಮರ್‌ ಕ್ಯಾಂಪ್‌ ಅನ್ನುವ ಡೂಪ್ಲಿಕೇಟ್‌ ಅಜ್ಜಿಮನೆ ಅವರ ಕನಸುಗಳಿಗೆ ಕೊಳ್ಳಿ ಇಡುತ್ತಿದೆ. ಆ ಶಿಬಿರದಲ್ಲಿ ಮರ ಹತ್ತೋದನ್ನು ಕಲಿಸುವುದಿಲ್ಲ. ರಾತ್ರಿ ಆಕಾಶ ತೋರಿಸುತ್ತಲೇ ನಕ್ಷತ್ರದ ಕತೆ ಹೇಳುವುದಿಲ್ಲ. ಬೆಕ್ಕಿನ ಮರಿಯ ಅಮ್ಮ, ಆಗಾಗ ತನ್ನ ಪುಟ್ಟ ಕಂದಮ್ಮಗಳನ್ನು ಕಚ್ಚಿಕೊಂಡು ಹೋಗಿ ಬೇರೆ ಜಾಗದಲ್ಲಿ ಇಡೋದ್ಯಾಕೆ?

ಅನ್ನೋದು ಸಮ್ಮರ್‌ ಕ್ಯಾಂಪುಗಳ ಕೃತಕ ಅಜ್ಜಿಗೆ ಗೊತ್ತಿರುವುದಿಲ್ಲ, ಆ ಕೃತಕ ಅಜ್ಜಿ, ದಪ್ಪ ದಪ್ಪ ಎಲೆಗಳನ್ನು ಜೋಡಿಸಿ ಮಕ್ಕಳಿಗೆ ಪಿಂಪಿರಿ, ತೆಂಗಿನ ಗರಿಯ ಹಾವು, ವಾಚು ಮಾಡಿಕೊಟ್ಟು ಆಟವಾಡಿಸೋದಿಲ್ಲ. ಬೆಟ್ಟ ಬೇಣ ಸುತ್ತಿಸಿ ಕಾಡು ಹಣ್ಣನ್ನು ತಿನ್ನಿಸೋದಿಲ್ಲ. ಕಪ್ಪೆ, ಕೆಂಜಿರುವೆ, ಕಂಬಳಿಹುಳಗಳ ಜೀವನ ಶೈಲಿ ಬಗ್ಗೆ ಕೇಳಿದರೆ ಅಲ್ಲಿ ಆಕೆಗೆ ಏನೂ ಗೊತ್ತಿರುವುದಿಲ್ಲ.

ಆದರೂ, ಬೇಸಿಗೆ ಶಿಬಿರ ಅನ್ನೋ ಕೃತಕ ಅಜ್ಜಿಮನೆಗೆ ಸಾವಿರಾರು ಕಾಸು ಸುರಿದು, ಮತ್ತೆ ನಾಲ್ಕು ಗೋಡೆಗಳ ಮಧ್ಯೆ ಕೂರಿಸಿ, ಮಕ್ಕಳನ್ನು ಖುಷಿಯ ಪರಮಾವಧಿಗೆ ಕರಕೊಂಡು ಹೋದೆವು ಅಂತ ಬೀಗುವವರಿದ್ದಾರೆ. ಆದರೆ, ಅದನ್ನೂ ಮೀರಿದ ದೊಡ್ಡ ಹಬ್ಬವೊಂದು ಅಜ್ಜಿ ಮನೆ ಅನ್ನೋ ಸ್ವರ್ಗದಲ್ಲಿದೆ ಅನ್ನೋದನ್ನು ಮಾತ್ರ ಆ ಮಕ್ಕಳಿಗೆ ಗುಟ್ಟಾಗಿಯೂ ಅವರು ಹೇಳುವುದಿಲ್ಲ.

ಸಮ್ಮರ್‌ ಕ್ಯಾಂಪ್‌, ಕನಸುಗಳನ್ನು ಹುಟ್ಟಿಸೋದೇ ಇಲ್ಲ ಎನ್ನುವ ವಾದ ಇದಲ್ಲ. ಆದರೆ, ಊರಲ್ಲಿ ಅಜ್ಜ- ಅಜ್ಜಿ ಇದ್ದಾಗ ಮಕ್ಕಳನ್ನು ಒಂದಷ್ಟು ದಿನವಾದರೂ ಅವರಲ್ಲಿಗೆ ಬಿಡಲಾರದಷ್ಟು ಸ್ವಾರ್ಥಿಗಳಾಗಿ ಬಿಟ್ಟರಾ ಈ ಕಾಲದ ಅಪ್ಪ- ಅಮ್ಮಂದಿರು? ಅನ್ನೋದು ದೈನ್ಯ ಪ್ರಶ್ನೆ. ಮೊನ್ನೆ ಜಾಹೀರಾತೊಂದನ್ನು ನೋಡುತ್ತಿದ್ದೆ. “ಅಜ್ಜಿ ಮನೆ, ಬೇಸಿಗೆ ಶಿಬಿರ. ನಿಮ್ಮ ಮಕ್ಕಳನ್ನು ಕರೆ ತನ್ನಿ’ ಅಂತ ಬೋರ್ಡೋಂದಿತ್ತು.

ಅಜ್ಜಿಯ ಪ್ರೀತಿಯನ್ನೂ ಹಣಕೊಟ್ಟು ತಗೊಳ್ಳುವ ಹಾಗೆ ಮಾಡಿ ಬಿಡ್ತಲ್ಲಾ ಈ ಬೇಸಿಗೆ ಶಿಬಿರ ಅಂತ ಮರುಕವಾಯ್ತು. ಅಜ್ಜಿ ಅನ್ನೋ ಎರಡಕ್ಷರವನ್ನೇ ಮಾರುಕಟ್ಟೆಯ ಬ್ರಾಂಡ್‌ ಮಾಡಿ ಸಹಜವಾದುದನ್ನೇ ಅಸಹಜಗೊಳಿಸಿ, ಅಜ್ಜಿ ಹೆಸರನ್ನೇ ಮಾರುಕಟ್ಟೆಯ ಯಾವುದೋ ಉತ್ಪನ್ನಕ್ಕಿಟ್ಟು ಅಜ್ಜಿ ಅನ್ನೋ ಪದವನ್ನು ಮಕ್ಕಳಲ್ಲಿ ಸಾಬೂನು, ಬಿಸ್ಕತ್ತು ಕಂಪನಿಯ ಹೆಸರುಗಳಂತೆ ಅವೂ ಒಂದು ಹೆಸರು, ಅಂತ ಅಜ್ಜಿಯ ಹೆಸರಿನ ಹಿಂದಿರುವ ಚಂದದ ಮಮತೆಯನ್ನೇ ಸಾಯಿಸಿಬಿಡುತ್ತಾರೆ ಈ ಮಾರುಕಟ್ಟೆಯ ಪಂಡಿತರು.

ನಾಕು ನಾಕಗಳು…
1. ಕಾಲಿಗೆ ಸಗಣಿ ತಾಗೋದು, ಮುಳ್ಳು ಚುಚ್ಚೋದು, ಕಾಡಲ್ಲಿ ದಾರಿ ತಪ್ಪೋದು- ಇವು ಅಜ್ಜಿ ಮನೆ ಕಲಿಸೋ ದೊಡ್ಡ ಪಾಠ.

2. ಜಿಪಿಎಸ್‌ನಲ್ಲಿ ದಾರಿ ಹುಡುಕೋದು, ಮೊಬೈಲ್‌ನಲ್ಲಿ ಹಾಡು ಕೇಳ್ಳೋದು, ವಾಟ್ಸಾéಪ್‌ನಲ್ಲಿ ಗುಡ್‌ ಮಾರ್ನಿಂಗ್‌ ಕಳಿಸೋದಕ್ಕೆ ಸ್ವಲ್ಪ ಬ್ರೇಕ್‌ ಕೊಡಿ, ಅಜ್ಜಿ ಮನೆಯ ದಾರಿಗೆ ಕಾಲು ಕೊಡಿ. ತೋಟಕ್ಕೆ ನುಗ್ಗಿ ಮಾವಿನಹಣ್ಣು ತಿನ್ನಿ, ಹುಣಸೆಯ ರುಚಿ ನೋಡಿ. ಹಕ್ಕಿ, ಜೀರುಂಡೆಗಳ ಹಾಡು ಕೇಳಿ. ಹಳ್ಳಿಯ ನಿಜವಾದ ಬೆಳಗನ್ನು ಆಸ್ವಾದಿಸಿ.

3. ಅಜ್ಜಿ ಮನೆಯ ಮಿಡಿ ಮಾವಿಗೆ, ಕಾಡು ಹಣ್ಣಿಗೆ, ಪರಿಮಳದ ಹೂವಿಗೆ, ಜೇನು ಗೂಡಿಗೆ, ಹರಿಯುವ ತೋಡಿಗೆ ನಮನ್ನು ಬಾಲ್ಯಕ್ಕೆ ಕರೆದೊಯ್ಯುವ ಶಕ್ತಿ ಉಂಟು. ಅದರ ಜೊತೆ ಸೇರಿ ಮತ್ತೆ ಸಣ್ಣವರಾಗೋಣ.

4. ಯಾವ ಸಾಧನಗಳೂ, ಸೌಕರ್ಯಗಳೂ ಇಲ್ಲದೇ ಬದುಕೋದು ಕೆಲವೊಮ್ಮೆ ದೊಡ್ಡ ಖುಷಿ ಕೊಡುತ್ತದೆ. ಅಜ್ಜಿ ಮನೆಯಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಿಗದಿದ್ದರೆ ಖುಷಿ ಪಡಿ. ಸುಮ್ಮನೆ ಒಂದಷ್ಟು ದಿನ ಯಾವ ಆಧುನಿಕ ಸೌಕರ್ಯದ ಹಂಗಿಲ್ಲದೇ ಮೌನದಲ್ಲೇ ಕಳೆದು ಹೋಗಿ.

* ಪ್ರಸಾದ್‌ ಶೆಣೈ ಆರ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next