ಬೆಂಗಳೂರು: ಮಕ್ಕಳಿಗೆ ಪರೀಕ್ಷೆಗಳು ಮುಗಿದವು, ಶಾಲೆ ರಜೆ ಇದೆ. ಮನೆಯಲ್ಲಿ ಕುಳಿತು ಏನ್ ಮಾಡೋದು ಅಂತ ಚಿಂತೆ ಮಾಡ್ತಿದಿರಾ? ಡ್ಯಾನ್ಸ್ , ಡ್ರಾಮಾ ಮಾಡಬೇಕಾ?, ಹಾಡಬೇಕಾ?, ಕರಾಟೆ, ಯೋಗ, ಪೇಂಟಿಂಗ್ ಕಲಿಯುವ ಆಸಕ್ತಿ ಇದೆಯಾ? ಹಾಗಾದರೆ ನಗರದ ಕಬ್ಬನ್ ಪಾರ್ಕ್‌ನಲ್ಲಿನ ಜವಾಹರ್ ಬಾಲಭವನಕ್ಕೆ ಬನ್ನಿ. ಹತ್ತಾರು ಬಗೆಯ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳು ಒಂದೇ ಸೂರಿನಡಿ ಸಿಗಲಿವೆ.
ಹೌದು, ಕಬ್ಬನ್‌ಪಾರ್ಕ್‌ನಲ್ಲಿರುವ ಬಾಲ ಭವನ ಸೊಸೈಟಿಯು ಈ ಬಾರಿಯ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಈಗಾಗಲೇ, ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಇದು ಒಂದು ತಿಂಗಳ ಕಾಲ ಅಂದರೆ, ಏ.17ರಿಂದ ಮೇ 14ರವರೆಗೆ ನಡೆಯಲಿದೆ. ಐದು ವರ್ಷದಿಂದ 16 ವರ್ಷದವರೆಗಿನ ಮಕ್ಕಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಇವರಲ್ಲಿ 5 ರಿಂದ 7, 8 ರಿಂದ 12 ಹಾಗೂ 13 ರಿಂದ 16 ವರ್ಷದ ಮಕ್ಕಳು ಎಂಬ ಮೂರು ಹಂತಗಳಲ್ಲಿ ವಿವಿಧ ಅಭ್ಯಾಸಗಳನ್ನು ಕಲಿಸಲಾಗುತ್ತದೆ. ಇತ್ತೀಚೆಗೆ ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ಬಾಲಭವನವನ್ನು ನವೀಕರಿಸಲಾಗಿದ್ದು, ಪುಟಾಣಿ ಟ್ರೈನ್, ದೋಣಿ ವಿಹಾರ, ಸೈನ್ಸ್ ಪಾರ್ಕ್, ರೋಪ್ ವೇ, ಸ್ಕೇಟಿಂಗ್‌ನಂತಹ ಸುಮಾರು 60 ವಿಧದ ಮನರಂಜನೆ ಮತ್ತು ಸಾಹಸ ಕ್ರೀಡೆಗಳು ಎಲ್ಲರ ಗಮನ ಸೆಳೆಯುತ್ತಿವೆ.
ಶಾಲಾ ರಜಾವಧಿಯ ಕಾರಣ, ಈಗಾಗಲೇ ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಮಕ್ಕಳು ಆಗಮಿಸುತ್ತಿದ್ದು, ಹಲವು ಕ್ರೀಡಾ-ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಮತ್ತು ಬಾಲಭವನ ನವೀಕರಣದ ಹಿನ್ನೆಲೆ ಬೇಸಿಗೆ ಶಿಬಿರವನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ವರ್ಷ ಕೊರೊನಾ ಪ್ರಮಾಣ ತಗ್ಗಿದ ಕಾರಣ 2022ರಲ್ಲಿ ಸುಮಾರು 350 ರಿಂದ 400 ಮಕ್ಕಳು ಶಿಬಿರಕ್ಕೆ ಆಗಮಿಸಿದ್ದರು. ಆದರೆ, ಈ ಬಾರಿ ಬಾಲ ಭವನವು ಸಂಪೂರ್ಣವಾಗಿ ನವೀಕರಣಗೊಂಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಆಗಮಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5 ರಿಂದ 7 ವರ್ಷದ ಮಕ್ಕಳಿಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 1ಗಂಟೆವರೆಗೆ ಹಾಗೂ 8 ರಿಂದ 12 ಮತ್ತು 13 ರಿಂದ 16 ವರ್ಷದ ಮಕ್ಕಳಿಗೆ ಬೆಳಗ್ಗೆ 9.30ರಿಂದ ಸಂಜೆ 4.30ವರೆಗೆ ವಿವಿಧ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಆಸಕ್ತರು, ಕಬ್ಬನ್ ಪಾರ್ಕ್ ನಲ್ಲಿರುವ ಬಾಲ ಭವನದಲ್ಲಿ ಅರ್ಜಿ ಪಡೆದು, ದಾಖಲಾತಿಗಳೊಂದಿಗೆ ನೋಂದಣಿ ಮಾಡಬಹು ದಾಗಿದೆ. ಈ ಶಿಬಿರವು ಕೇಂದ್ರ ಬಾಲಭವನ ಒಳಗೊಂಡಂತೆ, ನಗರದ ರಾಜಾಜಿನಗರಮಿನಿ ಬಾಲ ಭವನ, ಕೋರ್ಲ್ಸ್ ಪಾರ್ಕ್ ಮಿನಿ ಬಾಲ ಭವನ ಮತ್ತು ಎಚ್.ಎಸ್.ಆರ್. ಲೇಔಟ್‌ನಲ್ಲಿರುವ ಮಿನಿ ಬಾಲಭವನದಲ್ಲಿಯೂ ಕೂಡ ಶಿಬಿರವನ್ನು ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಯಾವ-ಯಾವ ಚಟುವಟಿಕೆಗಳಿವೆ?: ಕರಾಟೆ, ಯೋಗ, ಚಿತ್ರಕಲೆ, ಕರಕುಶಲ ಕಲೆ, ಸಮೂಹ ನೃತ್ಯ, ಸಮೂಹ ಗೀತೆ, ಜೇಡಿಮಣ್ಣಿನ ಕಲೆ, ತಬಲ, ಕೀಬೋರ್ಡ್, ಕ್ಯಾಲಿಗ್ರಾಫಿ, ಜ್ಯೂವೆಲ್ಲರಿ ಮೇಕಿಂಗ್ ಮತ್ತು ಮೆಹಂದಿ, ಗಿಟಾರ್, ಕಸದಿಂದ ರಸ, ಯಕ್ಷಗಾನ, ರಂಗ ತರಬೇತಿ, ಕ್ಯಾನ್‌ವಾಸ್ ಪೇಂಟಿಂಗ್, ಪಾಟ್ ಪೇಂಟಿಂಗ್, ಅಲ್ಯೂಮಿನಿಯಂ ಫಾಯಿಲ್ ವರ್ಕ್, ಫೋಟೋಗ್ರಫಿ, ಮೆಟಲ್ ಎಂಬೋಸಿಂಗ್, ಮ್ಯೂರಲ್ ವರ್ಕ್‌ನಂತಹ ಹತ್ತಾರು ಬಗೆಯ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳನ್ನು ಅಗತ್ಯವುಳ್ಳ ಸಾಮಗ್ರಿಗಳೊಂದಿಗೆ ಅತ್ಯಲ್ಪ ಶುಲ್ಕದಲ್ಲಿ ನುರಿತ ಬೋಧಕರಿಂದ ಹೇಳಿಕೊಡಲಾಗುತ್ತದೆ.
ಸರ್ಕಾರಿ ಶಾಲೆ ಮಕ್ಕಳಿಗೆ ಶೇ.50 ರಿಯಾಯಿತಿ: ಮಧ್ಯಮ ವರ್ಗದ ಮಕ್ಕಳನ್ನು ಕೇಂದ್ರೀಕರಿಸಿಕೊಂಡು ಈ ಶಿಬಿರವನ್ನು ಆಯೋಜಿಸಲಾಗಿದೆ. ದಿವ್ಯಾಂಗರು, ಸ್ಲಂ ಮಕ್ಕಳಿಗೆ ಉಚಿತವಾಗಿ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಶೇ.50ರಷ್ಟು ಮತ್ತು ಬಾಲಭವನ ಸದಸ್ಯತ್ವ ಪಡೆದ ಮಕ್ಕಳಿಗೆ ಶೇ.25ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇಲ್ಲಿ ಮಾನಸಿಕ, ದೈಹಿಕ ಹಾಗೂ ಮನರಂಜನೆ ಆಧಾರಿತ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಮಕ್ಕಳು ಭಾಗವಹಿಸಿ, ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಬ್ಬನ್ ಪಾರ್ಕ್‌ನ ಕೇಂದ್ರ ಬಾಲಭವನದ ಅಧ್ಯಕ್ಷರಾದ ಪೂರ್ಣಿಮಾ ಪ್ರಕಾಶ್ ತಿಳಿಸಿದ್ದಾರೆ.
-ಭಾರತಿ ಸಜ್ಜನ್