Advertisement

ಬೇಸಗೆ: ನೀರಿನಿಂದ ಹರಡುವ ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ

06:00 AM Apr 29, 2018 | |

ಉಡುಪಿ : ಬೇಸಗೆ ತೀವ್ರವಾಗಿದೆ. ಜತೆಗೆ ಕಲುಷಿತ ನೀರಿನಿಂದಾಗಿ ಉಂಟಾಗಬಹುದಾದ ಕಾಯಿಲೆಗಳು ಕೂಡ ಈ ಹೊತ್ತಿನ ಸವಾಲು. 

Advertisement

ಈಗ ಖಾಸಗಿ, ಸಾರ್ವಜನಿಕ ಸಮಾರಂಭಗಳು, ಜಾತ್ರೆ ಉತ್ಸವಗಳ ಸಾಲು. ಜತೆಗೆ ಚುನಾವಣೆ ಚಟುವಟಿಕೆ. ಎಲ್ಲೆಡೆ ಶುದ್ಧ ನೀರಿನ ಖಾತರಿ ಇಲ್ಲ. ತಂಪು ಪಾನೀಯ, ಮಜ್ಜಿಗೆ, ಐಸ್‌ಕ್ರೀಂನಲ್ಲೂ ಶುದ್ಧ ನೀರೇ ಬಳಕೆಯಾಗುತ್ತದೆ ಎಂದು ಖಚಿತವಾಗಿ ಹೇಳಲಾಗದು. ಆದ್ದರಿಂದ ಎಚ್ಚರ ಇರಬೇಕಾದ್ದು ಅತೀ ಅಗತ್ಯ. 

ನೀರು ಶುದ್ಧವಿರಲಿ  
ಕಲುಷಿತ ನೀರು ಮತ್ತು ಆಹಾರದಿಂಧಾಗಿ ವಾಂತಿ ಭೇದಿ, ಕರುಳು ಬೇನೆ, ಕಾಲರಾ, ಇಲಿಜ್ವರ ಕಾಡುತ್ತವೆ. ಹೆಪಟೈಟಿಸ್‌ ಎ ಮತ್ತು ಇ (ಜಾಂಡೀಸ್‌) ಕೂಡ ಹರಡಬಹುದು. ಸ್ಥಳೀಯ ಆಡಳಿತಗಳು ನೀರನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ವಿತರಿಸುತ್ತವೆ. ಸ್ಥಳೀಯ ಸಂಸ್ಥೆಗಳು ಹೆಚ್ಚಾಗಿ ಕ್ಲೋರಿನ್‌ ಅನಿಲ ಹಾಯಿಸಿ ಶುದ್ಧೀಕರಣ ವ್ಯವಸ್ಥೆ ಮಾಡಿಕೊಳ್ಳುತ್ತವೆ. ನೀರನ್ನು ತಿಳಿಯಾಗಿಸಲು ಆ್ಯಲಂ ಬಳಕೆ ಮಾಡಲಾಗುತ್ತದೆ. ಪ್ರತಿ ಗ್ರಾ.ಪಂ. ನೀರಿನ ಮೂಲಗಳಿಂದ ಮಾದರಿ ಸಂಗ್ರಹಿಸಿ ಪರೀಕ್ಷಿಸುವಂತೆ ಆರೋಗ್ಯ ಇಲಾಖೆ ಸ್ಥಳೀಯ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸುತ್ತೋಲೆ ಕಳುಹಿಸಿದೆ. ನೀರಿನ ಶುದ್ಧೀಕರಣ ನಡೆಯುತ್ತಿದೆಯೇ ಎಂಬ ನಿಗಾ ಅತ್ಯಗತ್ಯ.  

ಬ್ಲೀಚಿಂಗ್‌ ಪೌಡರ್‌ ಬಳಕೆ
ಗ್ರಾ.ಪಂ.ಗಳ ನೀರಿನ ಮೂಲಗಳಾದ ಕೊಳವೆ ಬಾವಿ, ತೆರೆದ ಬಾವಿಗಳಿಂದ ಸಂಗ್ರಹಿಸುವ ನೀರನ್ನು ಕೂಡ ಶುದ್ಧೀಕರಿಸಲೇ ಬೇಕು. ಇದಕ್ಕಾಗಿ ಪ್ರತಿ 15 ದಿನಕ್ಕೊಮ್ಮೆ ಟ್ಯಾಂಕ್‌ ನೀರನ್ನು ಬ್ಲೀಚಿಂಗ್‌ ಮಾಡಬೇಕು. ಸಂಜೆ ಬ್ಲೀಚ್‌ ಮಾಡಿ ಮರುದಿನವಷ್ಟೇ ಆ ನೀರನ್ನು ಬಳಸುವುದು ಉತ್ತಮ. ಬ್ಲೀಚಿಂಗ್‌ ಪೌಡರ್‌ ನೀರಿನಲ್ಲಿ ಕರಗಿ ಪರಿಣಾಮ ಬೀರಬೇಕಾದರೆ ಕನಿಷ್ಠ 1 ಗಂಟೆ ಬೇಕು.

ತೆರೆದ ಬಾವಿ 2 ಮೀ. ಅಗಲವಿದ್ದು, 6 ಮೀ. ನೀರಿದ್ದರೆ 56 ಗ್ರಾಂ ಬ್ಲೀಚಿಂಗ್‌ ಪುಡಿ ಹಾಕಬೇಕು. ಮನೆಯ 1,000 ಲೀ. ನೀರಿನ ಟ್ಯಾಂಕ್‌ಗೆ 2.5ರಿಂದ 3 ಗ್ರಾಂನಷ್ಟು ಬ್ಲೀಚಿಂಗ್‌ ಪೌಡರ್‌ ಹಾಕಬೇಕು. ಟ್ಯಾಂಕ್‌ಗೆ ಪುಡಿಯನ್ನು ನೇರವಾಗಿ ಹಾಕಬಾರದು; ಬಕೆಟ್‌ ನೀರಿಗೆ ಹಾಕಿ, ಸೋಸಿ ಪುಡಿ ಬೇರ್ಪಡಿಸಿ ನೀರನ್ನು ಮಾತ್ರ ಸುರಿಯಬೇಕು. ಈ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾ ಸರ್ವೇಕ್ಷಣಾ ಘಟಕ ( 0820-2525561) ಸಂಪರ್ಕಿಸಬಹುದಾಗಿದೆ. 

Advertisement

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ರೀತಿಯ (ಎಚ್‌2ಎಸ್‌) ಪರೀಕ್ಷೆಯನ್ನು ಮಾಡಲಾಗುತ್ತದೆ. ಸರ್ವೇಕ್ಷಣಾ ಘಟಕದಲ್ಲಿ ಎಂಪಿಎನ್‌ ಮಾದರಿಯ ಉನ್ನತ ದರ್ಜೆಯ ನೀರಿನ ಪರೀಕ್ಷೆ ನಡೆಸಲಾಗುತ್ತದೆ.

ಮುನ್ನೆಚ್ಚರಿಕೆ ಅಗತ್ಯ
1. ನೀರು ಕುದಿಸಿ ಆರಿಸಿಯೇ ಕುಡಿಯಬೇಕು
2. ಸಾಧ್ಯವಾದಷ್ಟು ವಾಟರ್‌ ಫಿಲ್ಟರ್‌ ಬಳಕೆ ಮಾಡಬೇಕು
3. ತಾಜಾ ಆಹಾರಗಳನ್ನೇ ಸೇವಿಸಬೇಕು
4. ಆಹಾರದ ಮೇಲೆ ನೊಣ, ಇತರ ಕ್ರಿಮಿಗಳು ಸ್ಪರ್ಶಿಸದಂತಿರಬೇಕು
5. ಎಲ್ಲೆಂದರಲ್ಲಿ ಐಸ್‌ಕ್ರೀಂ, ತಂಪು ಪಾನೀಯಗಳನ್ನು ಕುಡಿಯಬಾರದು
6. ಆಹಾರ ಖರೀದಿಸಿದ ಅಂಗಡಿಯಿಂದ ಬಿಲ್‌ ಪಡೆಯಬೇಕು. ಒಂದು ವೇಳೆ ಅನಾರೋಗ್ಯ ಉಂಟಾದರೆ, ಆಹಾರದ ಮಾದರಿ ಸಂಗ್ರಹಿಸಿ ಆ ಆಹಾರ ಮಾರಾಟ ಮಾಡ‌ದಂತೆ ತಡೆಯೊಡ್ಡಿ, ಕಾಯಿಲೆ ಹರಡದೇ ಇರಲು ಅನುಕೂಲವಾಗುತ್ತದೆ  
7. ಜ್ವರ, ಬೇಧಿ ಮೊದಲಾದ ಲಕ್ಷಣ ಕಂಡುಬಂದ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು  

ಕಂಡುಬಂದ ಪ್ರಕರಣಗಳು
ವಾಂತಿಬೇಧಿ

2015    493 
2016    581 
2017    631

ಟೈಫಾಯಿಡ್‌
2015    331
2016    217
2017    307

ಇಲಿಜ್ವರ 
2016    195
2017    246
2018    22

2015      8
ಬಳಿಕ ಕಾಲರಾ ಪತ್ತೆಯಾಗಿಲ್ಲ

– ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next