Advertisement

ರಾಜ್ಯದಲ್ಲಿ ಕೋವಿಡ್ ಪ್ರಕರಣ ಗಣನೀಯ ಇಳಿಕೆ! ಸಕ್ರಿಯ ಪ್ರಕರಣ ಕೆಲವು ಜಿಲ್ಲೆಗಳಲ್ಲಿ ಮಾತ್ರ 

12:23 AM Nov 15, 2020 | sudhir |

ಬೆಂಗಳೂರು: ಹಿಂದಿನ ಎರಡು ತಿಂಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೊರೊನಾ ತೀವ್ರತೆ ನವೆಂಬರ್‌ ತಿಂಗಳ ಮೊದಲೆರಡು ವಾರಗಳಲ್ಲಿ ನಾಲ್ಕು ಪಟ್ಟು ಕಡಿಮೆಯಾಗಿದೆ. ಸೋಂಕು ಪರೀಕ್ಷೆ ಹೆಚ್ಚಳವಾದರೂ ಪಾಸಿಟಿವಿಟಿ ದರ ಶೇ.10ರಿಂದ ಶೇ 2.5ಕ್ಕೆ ಕುಸಿದಿದೆ.

Advertisement

ಪ್ರಸ್ತುತ ಪ್ರತಿದಿನದ ಹೊಸ ಪ್ರಕರಣಗಳು ಎರಡೂವರೆ ಸಾವಿರ ಹಾಗೂ ಸಾವಿನ ಸಂಖ್ಯೆ 20ರ ಆಸುಪಾಸಿಗೆ ಇಳಿದಿದೆ.
ಸೆಪ್ಟಂಬರ್‌ ಮತ್ತು ಅಕ್ಟೋಬರ್‌ನ ಮೊದಲ ಎರಡು ವಾರಗಳಲ್ಲಿ ಕ್ರಮವಾಗಿ 68 ಸಾವಿರ ಮತ್ತು 98 ಸಾವಿರ ಕೊರೊನಾ ಪರೀಕ್ಷೆಗಳು ನಡೆದಿದ್ದವು. ಪಾಸಿಟಿವಿಟಿ ದರ ಸೆಪ್ಟಂಬರ್‌ನಲ್ಲಿ ಶೇ 13 ಹಾಗೂ ಅಕ್ಟೋಬರ್‌ನಲ್ಲಿ ಶೇ.10ರಷ್ಟಿತ್ತು. ನಿತ್ಯ ಸರಾಸರಿ 9 ಸಾವಿರದಷ್ಟು ಹೊಸ ಪ್ರಕರಣಗಳು 100ರಷ್ಟು ಸಾವು ಸಂಭವಿಸುತ್ತಿತ್ತು. ನವೆಂಬರ್‌ನಲ್ಲಿ ಪರೀಕ್ಷೆ 1.03 ಲಕ್ಷಕ್ಕೆ ಹೆಚ್ಚಳವಾಗಿದ್ದು, ಪಾಸಿಟಿವಿಟಿ ದರ ಶೇ.2.5ಕ್ಕೆ ಕುಸಿದಿದೆ.

ಎರಡನೇ ಸ್ಥಾನದಿಂದ ಕೆಳಕ್ಕೆ
ಕಳೆದ ತಿಂಗಳ ಆರಂಭದಲ್ಲಿ ದೇಶದಲ್ಲಿ ಎರಡನೇ ಅತಿ ಹೆಚ್ಚು, ಅಂದರೆ 1.2 ಲಕ್ಷ ಸಕ್ರಿಯ ಕೊರೊನಾ ಪ್ರಕರಣಗಳು ಕರ್ನಾಟಕದಲ್ಲಿದ್ದವು. ಆದರೆ, ಅಕ್ಟೋಬರ್‌ ಕೊನೆಯ ವಾರ ಮತ್ತು ನವೆಂಬರ್‌ನ ಮೊದಲ ಎರಡು ವಾರಗಳಲ್ಲಿ ಹೊಸ ಕೇಸ್‌ಗಳಿಗಿಂತ ಗುಣಮುಖರ ಸಂಖ್ಯೆ ದುಪ್ಪಟ್ಟಾದ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳು 28 ಸಾವಿರಕ್ಕೆ ಇಳಿಕೆಯಾಗಿವೆ. ಇದರಿಂದ ರಾಜ್ಯವು ಸಕ್ರಿಯ ಪ್ರಕರಣದಲ್ಲಿ ಐದನೇ ಸ್ಥಾನಕ್ಕೆ ಇಳಿದಿದೆ. ಮೊದಲ ನಾಲ್ಕು ಸ್ಥಾನದಲ್ಲಿ ಕ್ರಮವಾಗಿ ಮಹಾರಾಷ್ಟ್ರ, ಕೇರಳ, ದಿಲ್ಲಿ ಹಾಗೂ ಪಶ್ಚಿಮ ಬಂಗಾಳ ಇವೆ.

ಇದನ್ನೂ ಓದಿ:ಐಪಿಎಸ್‌ ಅಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ

ಸಕ್ರಿಯ ಪ್ರಕರಣಳು ಕೆಲವು ಜಿಲ್ಲೆಗಳಲ್ಲಿ ಮಾತ್ರ
ನವೆಂಬರ್‌ನಲ್ಲಿ ನಿತ್ಯ ಐದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೆರಳೆಣಿಕೆ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ನಿತ್ಯ ಒಂದು ಸಾವಿರ, ತುಮಕೂರು, ದಕ್ಷಿಣ ಕನ್ನಡ, ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ 50ರಷ್ಟು ಮಂದಿಗೆ ಸೋಂಕು ತಗಲಿದೆ. ಉಳಿದ 24 ಜಿಲ್ಲೆಗಳಲ್ಲಿ ಸೋಂಕು ಬಹುತೇಕ ಹತೋಟಿಯಲ್ಲಿದೆ.

Advertisement

ತೀವ್ರತೆ ಇಳಿಕೆಗೆ ಕಾರಣವೇನು?
ರಾಜ್ಯದಲ್ಲಿ ಕಳೆದ ತಿಂಗಳು ಭಾರೀ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸಿರುವುದೇ ಸೋಂಕು ಇಳಿಕೆಗೆ ಕಾರಣ. ಆಗಸ್ಟ್‌ನಲ್ಲಿ ನಿತ್ಯ ಸರಾಸರಿ 20 ಸಾವಿರ ಇದ್ದ ಸೋಂಕು ಪರೀಕ್ಷೆಗಳು ಸೆಪ್ಟಂಬರ್‌ನಲ್ಲಿ 60 ಸಾವಿರಕ್ಕೆ ಹಾಗೂ ಅಕ್ಟೋಬರ್‌ನಲ್ಲಿ ಒಂದು ಲಕ್ಷಕ್ಕೆ ಹೆಚ್ಚಳವಾದವು. ಈ ರೀತಿ ನಿತ್ಯ ಒಂದು ಲಕ್ಷ ಪರೀಕ್ಷೆಗಳನ್ನು ನಡೆಸುವ ಮೂಲಕ ಸೋಂಕಿತರನ್ನು ಶೀಘ್ರವೇ ಪತ್ತೆ ಮಾಡಿ ಅವರಿಗೆ ಚಿಕಿತ್ಸೆ /ಆರೈಕೆ ನೀಡಲಾಗಿದೆ. ಈ ಮೂಲಕ ಇತರರಿಗೆ ಸೋಂಕು ಹರಡುವುದನ್ನು ತಡೆಯಲಾಗಿದೆ ಎನ್ನುತ್ತಾರೆ ತಜ್ಞರು.

Advertisement

Udayavani is now on Telegram. Click here to join our channel and stay updated with the latest news.

Next