ಬೆಂಗಳೂರು: ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಂಡ್ಯ ಸಂಸದೆ ಸುಮಲತಾ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಮಂಡ್ಯ ಜಿಲ್ಲಾ ಪ್ರಮುಖರ ಸಭೆಗೂ ಬಾರದೆ ನಿಗೂಢತೆ ಕಾಯ್ದುಕೊಂಡಿದ್ದಾರೆ.
ಬುಧವಾರ ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ನಡೆಯಲಿದ್ದು, ಸುಮಲತಾರ ಭೇಟಿಗೆ ಪ್ರಯತ್ನಿಸುವುದಾಗಿ ವಿಜಯೇಂದ್ರ ಹೇಳಿದ್ದಾರೆ. ಆದರೆ, ಇದುವರೆಗೆ ಸುಮಲತಾ ಜಿಲ್ಲಾ ಪ್ರಮುಖರ ಸಂಪರ್ಕಕ್ಕೂ ಸಿಗುತ್ತಿಲ್ಲ, ಬಿಜೆಪಿ ನಾಯಕರ ಸಂಪರ್ಕದಲ್ಲೂ ಇಲ್ಲ. ಅಲ್ಲದೆ, ಬುಧವಾರ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳುತ್ತಾರೆ ಎನ್ನುವ ಮಾತುಗಳೂ ಅವರ ಆಪ್ತವಲಯದಲ್ಲಿದೆ.
ಕಳೆದ ಚುನಾವಣೆಯಲ್ಲಿ ಪಕ್ಷೇತರ ರಾಗಿ ಸ್ಪರ್ಧಿಸಿದ್ದ ಸುಮಲತಾಗೆ ಕಾಂಗ್ರೆಸ್ ಮತ್ತು ಬಿಜೆಪಿ ಪರೋಕ್ಷ ಬೆಂಬಲ ನೀಡಿತ್ತು. ಜೆಡಿಎಸ್‌ನ ನಿಖೀಲ್ ಕುಮಾರಸ್ವಾಮಿ ಸೋಲಿಗೂ ಈ ಚುನಾವಣೆ ಸಾಕ್ಷಿಯಾಗಿತ್ತು. ಸುಮಲತಾ ಗೆಲುವಿನ ಬಳಿಕ ಪ್ರಧಾನಿ ಮೋದಿ ಅವರಿಗೆ ಬಾಹ್ಯ ಬೆಂಬಲ ಪ್ರಕಟಿಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಕ್ಷೇತ್ರವನ್ನು ದಕ್ಕಿಸಿಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ.
ಮಂಡ್ಯವನ್ನು ಬಿಜೆಪಿ ಉಳಿಸಿ ಕೊಳ್ಳುವ ವಿಶ್ವಾಸವಿದೆ ಎಂದು ಹೇಳುತ್ತಲೇ ಬಂದಿದ್ದ ಸುಮಲತಾ, ಸ್ವತಂತ್ರವಾಗಿ ಸ್ಪರ್ಧಿಸದೆ ಬಿಜೆಪಿ ಯಿಂದಲೇ ಕಣಕ್ಕಿಳಿಯುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಇದರ ನಡುವೆಯೇ ಮಂಡ್ಯದಿಂದ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ಕಾರ್ಯಕರ್ತರು, ಮುಖಂಡರೊಂದಿಗೆ ಸಮನ್ವಯತೆ ಸಾಧಿಸಲು ಪ್ರಯತ್ನಿಸಿರುವ ಬಿಜೆಪಿ, ಮಂಡ್ಯ ಜಿಲ್ಲಾ ಪ್ರಮುಖರ ಸಭೆ ಕರೆದಿತ್ತು. ವಿಜಯೇಂದ್ರ ನೇತೃತ್ವದಲ್ಲಿ ನಡೆದಿದ್ದ ಸಭೆಗೆ ಮಂಡ್ಯದ ಎಲ್.ಆರ್. ಶಿವರಾಮೇಗೌಡ, ಮಾಜಿ ಸಚಿವ ನಾರಾಯಣಗೌಡ ಸೇರಿದಂತೆ ಇನ್ನಿತರರು ಆಗಮಿಸಿದ್ದರು. ಆದರೆ, ಸುಮಲತಾ ಮಾತ್ರ ಬಂದಿರಲಿಲ್ಲ.