Advertisement

ಮೋದಿ ನವ ಭಾರತ ನಿರ್ಮಾಣದ ರೂವಾರಿ: ಮಾಳವಿಕಾ ಅವಿನಾಶ್‌

06:34 AM Mar 13, 2019 | |

ಸುಳ್ಯ : ಭ್ರಷ್ಟಾಚಾರ, ಸುರಕ್ಷತೆ ಭೀತಿ ಮೊದಲಾದ ಗಂಭೀರ ಸಮಸ್ಯೆಗಳಿಂದ ನಲುಗಿದ್ದ ಭಾರತವನ್ನು ಕಳೆದ ಐದು ವರ್ಷಗಳಲ್ಲಿ ನವ ಭಾರತವನ್ನಾಗಿ ರೂಪಿಸಿ ವಿಶ್ವ ಗುರುವನ್ನಾಗಿಸುವ ದಾರಿಯತ್ತ ಮುನ್ನಡೆಸಿದ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನ ಮಂತ್ರಿಯಾಗುವುದು ದೇಶದ ಅನಿವಾರ್ಯತೆ ಆಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಮಾಳವಿಕಾ ಅವಿನಾಶ್‌ ಹೇಳಿದ್ದಾರೆ.

Advertisement

ಸುಳ್ಯ ಮಂಡಲ ಬಿಜೆಪಿ ವತಿಯಿಂದ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆದ ಪ್ರಬುದ್ಧರ ಸಭೆಯಲ್ಲಿ ಅವರು ಮಾತನಾಡಿದರು. 2013ರ ಹಿಂದಿನ ಭಾರತ ಮತ್ತು 2013ರ ಅನಂತರದ ಭಾರತವನ್ನು ಅವಲೋಕಿಸಿದರೆ ಮೋದಿ ಅವರ ಅನಿವಾರ್ಯತೆ ಅರಿವಾಗಬಹುದು. ಕತ್ತಲಲ್ಲಿದ್ದ ಭಾರತ ಬೆಳಕು ಕಾಣುವ ಭರವಸೆ ಸಿಕ್ಕಿದ್ದು ಮೋದಿ ಅವರು ಪ್ರಧಾನಿ ಆದ ಅನಂತರವೇ. 2013ರ ಹಿಂದೆ ಲಕ್ಷ ಕೋಟಿಗಳ ಹಗರಣ, ಭೂಮಿಯಿಂದ ಗಗನದ ವರೆಗೂ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಮೋದಿ ಆಡಳಿತಕ್ಕೆ ಬಂದ ಬಳಿಕ ಹೊಸ ಮನ್ವಂತರವೇ ಆರಂಭಗೊಂಡಿದೆ. ಜಗತ್ತಿನ ನಾನಾ ರಾಷ್ಟ್ರಗಳು ಭಾರತದ ಸಾಮರ್ಥ್ಯ ಅರಿತುಕೊಂಡು ಉತ್ತಮ ಬಾಂಧವ್ಯ ಇರಿಸಿಕೊಂಡಿವೆ ಎಂದರು.

18 ತಾಸು ದುಡಿಮೆ
ಮೋದಿ ಅವರು ದಿನದ 18 ತಾಸು ದೇಶಕ್ಕಾಗಿ ದುಡಿಯುತ್ತಿದ್ದಾರೆ. ದೇಶದ ಜನರಿಗೆ ಕನಸು ಕಾಣುವ ಧೈರ್ಯವನ್ನು ತುಂಬಿದ್ದಾರೆ. ತಲೆ ತಗ್ಗಿಸುವ ಸ್ಥಿತಿಯಲ್ಲಿದ್ದ ಸಮಾಜವನ್ನು ತಲೆ ಎತ್ತಿ ನಡೆಯುವಂತೆ ಮಾಡಿದ್ದಾರೆ. ಯೋಗ ದಿನವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದು ಇಲ್ಲಿನ ಸಂಸ್ಕೃತಿಯನ್ನು ಪಸರಿಸಿದರು.

ಶೌಚಾಲಯ ನಿರ್ಮಾಣ, ಆಯುಷ್ಮಾನ್‌ ಯೋಜನೆ, ಜನಧನ್‌ ಯೋಜನೆ ಜಾರಿಗೆ ತಂದು ದೇಶದ ಜನರ ಹಿತ ಬಯಸಿದರು ಎಂದು ಮಾಳವಿಕಾ ಅವಿನಾಶ್‌ ಉಲ್ಲೇಖೀಸಿದರು.

ಕಾಂಗ್ರೆಸ್‌ ಅಡ್ಡಿ
ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್‌ ಪದ್ಧತಿಯಿಂದ ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾನೂನು ರೂಪಿಸಿತ್ತು. ವಿದೇಶದಲ್ಲಿ ಕುಳಿತು ದೂರವಾಣಿ, ಎಸ್ಸೆಮ್ಮಸ್‌ ಇತ್ಯಾದಿಗಳ ಮೂಲಕ ತಲಾಖ್‌ ಹೇಳಿ ಹೆಣ್ಣು ಮಕ್ಕಳನ್ನು ಅರ್ಧದಲ್ಲೇ ಕೈ ಬಿಡುವ ಪ್ರಕರಣಗಳಿಗೆ ಮುಕ್ತಿ ದೊರೆಯುವ ಅಗತ್ಯವಿತ್ತು. ಈ ಕಾನೂನು ಜಾರಿಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಅಡ್ಡಿ ಉಂಟು ಮಾಡಿದೆ. ಇದರಿಂದ ಕಾಂಗ್ರೆಸ್‌ ಹೆಣ್ಣು ಮಕ್ಕಳ ವಿರೋಧಿ ಪಕ್ಷ ಅನ್ನುವ ಭಾವನೆ ಉಂಟಾಗಿದೆ ಎಂದು ಮಾಳವಿಕಾ ಅವಿನಾಶ್‌ ಹೇಳಿದರು. ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಶಾಸಕ ಎಸ್‌. ಅಂಗಾರ ಮಾತನಾಡಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್‌ ವಳಲಂಬೆ ಸ್ವಾಗತಿಸಿ, ಪ್ರ.ಕಾರ್ಯದರ್ಶಿ ಸುಬೋಧ್‌ ಶೆಟ್ಟಿ ಮೇನಾಲ ವಂದಿಸಿ ದರು. ವಿನಯಕುಮಾರ್‌ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು.

Advertisement

ದೇವರೇ ಕಾಪಾಡಬೇಕು…!
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 44 ಯೋಧರು ಉಗ್ರರ ದಾಳಿಗೆ ಹತರಾದರು. ಈ ವೇಳೆ ಕೆಲವು ಬುದ್ಧಿಜೀವಿಗಳು ಹುತಾತ್ಮ ಯೋಧರ ಶವದಲ್ಲಿ ಜಾತಿ ಲೆಕ್ಕ ಹಾಕಿದರು. ಭಾರತ ಉಗ್ರ ತಾಣಗಳ ಮೇಲೆ ನಡೆಸಿದ ವಾಯುಸೇನಾ ದಾಳಿ ಬಗ್ಗೆ ಅನುಮಾನಪಟ್ಟು, ದಾಳಿ ಮಾಡಿದ್ದು ಉಗ್ರ ನೆಲೆಗೂ ಅಥವಾ ಮರ ಗಿಡಗಳ ಮೇಲೋ ಎಂದು ಕುಹಕವಾಡಿದರು. ಇಂತಹ ಮನಃಸ್ಥಿತಿಯ ಬುದ್ಧಿಜೀವಿಗಳನ್ನು ಆ ದೇವರೇ ಕಾಪಾಡಬೇಕು ಎಂದು ಮಾಳವಿಕಾ ಅವಿನಾಶ್‌ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next