Advertisement
ಸುಳ್ಯ ತಾಲೂಕಿನಲ್ಲಿ ಕೆರೆಗಳು ಎಷ್ಟಿವೆ ಎನ್ನುವ ಸ್ಪಷ್ಟ ಮಾಹಿತಿ ಇಲಾಖೆ ಬಳಿ ಇಲ್ಲ. ಕೆರೆಗಳ ಸಂಖ್ಯೆಯಲ್ಲಿ ಗೊಂದಲವಿದೆ. ಅಂದಾಜು ಕೆರೆಗಳ ಸಂಖ್ಯೆ 12ರಷ್ಟಿದೆ. ಇದರಲ್ಲಿ ಜಿ.ಪಂ. ಅಂಕಿ ಅಂಶದಲ್ಲಿ ಬಳ್ಪದ ಗ್ರಾಮದ ಭೋಗಾಯನಕೆರೆ, ಬೆಳ್ಳಾರೆ ಗ್ರಾಮದ ಮೊಗರ್ಪಣೆ, ಮುರುಳ್ಯದ ಪುದು, ಕುಲ್ಕುಂದದ ಬಸವನಮೂಲೆ, ಐನಕಿದುವಿನ ಕಾಂತುಕುಮೇರಿ, ಬಾಳುಗೋಡು ಪನ್ನೆಮಿತ್ತ ಕೆರೆ, ಯೇನೆಕಲ್ಲು ಗ್ರಾಮದ ಅಂಗರವರ್ಮ ಈ 7 ಕೆರೆಗಳೂ ಸೇರಿವೆ.
ಕೆರೆಗಳ ನೀರು ಸೂಕ್ತವಾಗಿ ಬಳಕೆ ಆಗುತ್ತಿಲ್ಲ. ಶೇ. 90ರಷ್ಟು ದೇಗುಲಗಳಲ್ಲಿ ಕೆರೆಗಳಿವೆ. ಖಾಸಗಿ ಭೂಮಿಗಳಲ್ಲಿ ಕೂಡ ಕೆರೆಗಳಿವೆ. ಮಳೆಗಾಲದಲ್ಲಿ ನೀರು ತುಂಬಿಕೊಂಡಿರುವ ಕೆರೆ ಬೇಸಗೆ ಕಾಲದಲ್ಲಿ ಒಣಗುತ್ತಿದೆ. ಕಾರಣ ವರ್ಷಂಪ್ರತಿ ತುಂಬುವ ಹೂಳು. ಸರಕಾರಿ ಕೆರೆ ಅಭಿವೃದ್ಧಿಗೆ ಅನುದಾನ ಲಭ್ಯವಿದ್ದರೂ ಬಳಕೆಯಾಗುವುದು ಕಡಿಮೆ. ಹಾಗಾಗಿ ತಾಲೂಕಿನಲ್ಲಿ ಹತ್ತಾರು ಕೆರೆ ಇದ್ದರೂ ಕಷ್ಟ ಕಾಲದಲ್ಲಿ ಬಳಕೆಗೆ ಸಿಗದಂತಾಗಿದೆ. ಒಂದೆಡೆ ಕೊಳವೆ ಬಾವಿಯಿಂದ ಅಂತರ್ಜಲ ಕುಸಿತ ಕಂಡಿದೆ. ಇನ್ನೊಂದೆಡೆ ಕೊಳವೆ ಬಾವಿ ತೆಗೆದ ಕೃಷಿ ಭೂಮಿಯ ಕೆರೆಗಳಲ್ಲಿ ಮರು ವರ್ಷ ನೀರು ಇರದಿರುವುದು. ಕೊಳವೆ ಬಾವಿ ಇದೆ ಎಂದು ಕೆರೆ ಮುಚ್ಚಿದ ಪ್ರಸಂಗವೂ ತಾಲೂಕಿನ ಹಲವೆಡೆ ಆಗಿದೆ. ಅಡಿಕೆ ತೋಟದಲ್ಲಿ ಕೆರೆ ಅನ್ನುವುದು ಇತಿಹಾಸ ಪುಟಕ್ಕೆ ಸೇರಿದರೆ, ಸಾರ್ವಜನಿಕ ಸ್ಥಳಗಳಲ್ಲಿನ ಕೆರೆಗಳನ್ನು ಕೇಳುವವರೇ ಇಲ್ಲ.
Related Articles
ಅನಾದಿ ಕಾಲದಿಂದಲು ಕೃಷಿಕರು ತಮ್ಮ ಕೃಷಿ ಜಮೀನಿನ ತೋಟಗಳಲ್ಲಿ ಕೆರೆ ಮಾಡಿ ಕೃಷಿ ಚಟುವಟಿಕೆ ನಡೆಸುತ್ತಾ ಬಂದಿದ್ದಾರೆ. ಅದರಲ್ಲೂ ಸುಳ್ಯ ತಾ| ಕೃಷಿ ಪ್ರಧಾನವಾಗಿದೆ. ಹಿಂದೆಲ್ಲ ಕೆರೆಗಳಿಗೆ ಹೆಚ್ಚು ಪ್ರಾತಿನಿಧ್ಯ ದೊರಕುತ್ತಿತ್ತು. ಈಗ ಅದೆಲ್ಲ ಮರೆಗೆ ಸರಿದಿವೆ. ಅಂತಹ ಕೆರೆಗಳಲ್ಲಿ ಈಗ ಮಣ್ಣು ತುಂಬಿವೆ. ಬಳಕೆಯಾಗುತ್ತಿಲ್ಲ. ಕೃಷಿಕರು ಪರ್ಯಾಯ ವ್ಯವಸ್ಥೆಗಳಾದ ಕೊಳವೆ ಬಾವಿ ಇತ್ಯಾದಿಗಳ ಮೊರೆ ಹೋಗಿದ್ದಾರೆ. ಸರಕಾರಿ ಕೆರೆಗಳ ಅಭಿವೃದ್ಧಿಗೂ ಸರಕಾರ ಅನುದಾನ ಒದಗಿಸಿದಲ್ಲಿ ಈ ಕೆರೆಗಳನ್ನು ಉಳಿಸಿಕೊಳ್ಳಬಹುದಾಗಿದೆ.
Advertisement
ಅಭಿವೃದಿಯಾಗುತ್ತಿಲ್ಲ ಹಿಂದೆ ಒಂದು ಅವಧಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 5 ಕೋಟಿ ರೂ ಅನುದಾನ ಬಿಡುಗಡೆಗೊಂಡಿತ್ತು. ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಹಣ ವಿಂಗಡಿಸಲಾಗಿತ್ತು. ಅಭಿವೃದ್ಧಿ ಕಾರ್ಯ ಮಾತ್ರ ಆಗಿಲ್ಲ. ಅನುದಾನದಿಂದ ಕೆರೆ ಹೂಳು ತೆಗೆಯುವುದು, ಬದಿಗಳಲ್ಲಿ ತಡೆಗೋಡೆ, ಕಾಲುವೆಗಳ ದುರಸ್ತಿ ಇತ್ಯಾದಿಗೆ ಬಳಕೆಯಾಗುತ್ತದೆ. ಬೆರಳೆಣಿಕೆಯ ಕರೆಗಳು ಅಭಿವೃದ್ಧಿ ಹೊಂದಿದರೂ ನೀರು ಬಳಕೆ ಆಗುತ್ತಿಲ್ಲ. ಕೋಟಿಗಟ್ಟಲೆ ಖರ್ಚು ಮಾಡಿ ಪರ್ಯಾಯ ನೀರಿನ ವ್ಯವಸ್ಥೆ ಮಾಡುವ ಬದಲು ಕೆರೆಗಳ ಹೂಳೆತ್ತಿದರೆ ಸಾಕು. ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತದೆ. ಜಲಸಂರಕ್ಷಣೆಯೂ ಆಗುತ್ತದೆ. ಅನುದಾನವಿಲ್ಲ
ಕೃಷಿ ಭಾಗ್ಯದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಖಾತರಿ ಯೋಜನೆ ಬಳಸಿಕೊಳ್ಳಬಹುದು. ನಮ್ಮ ಇಲಾಖೆಯಲ್ಲಿ ಕೆರೆ ಅಭಿವೃದ್ಧಿಗೆ ಅನುದಾನಗಳು ಬಂದಿಲ್ಲ.
- ಕೆ.ಜಿ. ಪಾಲಿಚಂದ್ರ
ಸ. ಕೃಷಿ ನಿರ್ದೇಶಕರು, ಸುಳ್ಯ ಬಾಲಕೃಷ್ಣ ಭೀಮಗುಳಿ