Advertisement

ಸುಳ್ಯ ನ.ಪಂ. ಸಾಮಾನ್ಯ ಸಭೆ; ನೀರಿನ ಮಿತಬಳಕೆ, ಜಾಗೃತಿ ಅಗತ್ಯ

01:22 PM Mar 24, 2023 | Team Udayavani |

ಸುಳ್ಯ: ಮುಂದಿನ ಕೆಲವು ದಿನದಲ್ಲಿ ಮಳೆಯಾಗದೇ ಇದ್ದಲ್ಲಿ ಸುಳ್ಯ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕವನ್ನು ಸುಳ್ಯ ನ.ಪಂ. ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ.

Advertisement

ಸುಳ್ಯ ನ.ಪಂ. ಸಾಮಾನ್ಯ ಸಭೆ ಗುರುವಾರ ನ.ಪಂ. ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಡಿಯುವ ನೀರಿನ ಕುರಿತಂತೆ ನಡೆದ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು, ಮುಂದಿನ 10 ದಿನದಲ್ಲಿ ಮಳೆ ಬಾರದೇ ಇದ್ದಲ್ಲಿ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾದೀತು.

ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ನೀರನ್ನು ಜಾಗರೂಕತೆಯಿಂದ ಬಳಸಬೇಕು. ಈ ಕುರಿತು ವಾರ್ಡ್‌ ವ್ಯಾಪ್ತಿಯಲ್ಲಿ ನಾಗರಿಕರಿಗೆ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದರು. ಮುಂದಿನ ದಿನಗಳಲ್ಲಿ ನ.ಪಂ. ವ್ಯಾಪ್ತಿಗೆ ಮೂರು ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗುವ ನಿರೀಕ್ಷೆ ಇದೆ ಎಂದು ಅಧ್ಯಕ್ಷರು ತಿಳಿಸಿದರು.

ಶಾಸಕರ ಗೈರು-ಕಪ್ಪುಪಟ್ಟಿ ಮುಂದುವರಿಕೆ ಸದಸ್ಯ ಕೆ.ಎಸ್‌. ಉಮ್ಮರ್‌ ಮಾತನಾಡಿ, ಸ್ಥಳೀಯ ಶಾಸಕರು ಸಭೆಗೆ ಬರಬೇಕೆಂದು ನಾವು 7-8 ತಿಂಗಳಿಂದ ಬೇಡಿಕೆ ಇಡುತ್ತಿದ್ದೇವೆ. ಆದರೆ ಅವರು ಬಂದಿಲ್ಲ. ಆಡಳಿತದವರು ಕರೆಸಲೂ ಇಲ್ಲ. ಆದ್ದರಿಂದ ಈ ಬಾರಿಯೂ ನಾನು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತೇನೆ ಎಂದರಲ್ಲದೆ, ಬಜೆಟ್‌ ಮೀಟಿಂಗ್‌ನಲ್ಲಿ ಒಂದು ವಾರ್ಡ್‌ಗೆ 10 ಲಕ್ಷ ರೂ. ಅಭಿವೃದ್ಧಿ ಅನುದಾನ ಕೊಡಬೇಕೆಂದು ಕೇಳಿದ್ದೆವು. ಆದರೆ ಅದೂ ಆಗಿಲ್ಲ ಎಂದರು.

ನ.ಪಂ. ವ್ಯಾಪ್ತಿಯ 12ನೇ ವಾರ್ಡಿನ ಕೆರೆಮೂಲೆ ಭಾಗದಲ್ಲಿ ಚರಂಡಿಗೆ ಆರ್‌ಸಿಸಿ ಪೈಪ್‌ ಅಳವಡಿಸುವ ಬಗ್ಗೆ, 1.75 ಲಕ್ಷ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು. ಬಹುಮಹಡಿ ಕಟ್ಟಡ ನಿರ್ಮಿಸಿ ಬಾಡಿಗೆ ನೀಡುತ್ತಿರುವವರು ತಾವೇ ಇಂಗುಗುಂಡಿ ನಿರ್ಮಿಸಿ ಅದಕ್ಕೆ ಕೊಳಚೆ ನೀರನ್ನು ಬಿಡಬೇಕು. ಅದು ನ.ಪಂ. ಜವಾಬ್ದಾರಿಯಲ್ಲ. ಇಂದು ಬಡವರೂ ಕೂಡ ಇಂಗುಗುಂಡಿ ನಿರ್ಮಿಸುತ್ತಾರೆ.

Advertisement

ಶೌಚಾಲಯದ ನೀರನ್ನು ಹೊರಗೆ ಬಿಡುವುದು ಸರಿಯಲ್ಲ ಎಂದು ಸದಸ್ಯರು ಪ್ರಸ್ತಾವಿಸಿದರು. ಬೇಡಿಕೆ ಇರುವಲ್ಲಿ ಬೋರ್‌ವೆಲ್‌ ಕೊರೆಸುವ ಬಗ್ಗೆ, ವಸತಿ ಯೋಜನೆಯ ಹಣ ಪಾವತಿ ಆಗದೇ ಇರುವ ಬಗ್ಗೆ, ರಸ್ತೆ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆ ನೀಡಲು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಸದಸ್ಯ ಶರೀಫ್ ಕಂಠಿ ಸ್ಥಾಯೀ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್‌, ಸದಸ್ಯರಾದ ಬಾಲಕೃಷ್ಣ ಭಟ್‌ ಕೊಡೆಂಕಿರಿ, ಡೇವಿಡ್‌ ಧೀರಾ ಕ್ರಾಸ್ತಾ ಶಶಿಕಲಾ ನೀರಬಿದಿರೆ, ಶೀಲಾ ಕುರುಂಜಿ, ಸುಶೀಲಾ ಜಿನ್ನಪ್ಪ, ಶಿಲ್ಪಾ ಸುದೇವ್‌, ವಾಣಿಶ್ರೀ ಬೊಳಿಯಮಜಲು, ಪೂಜಿತಾ ಕೆ.ಯು., ಪ್ರವಿತಾ ಪ್ರಶಾಂತ್‌, ಉಮ್ಮರ್‌ ಕೆ.ಎಸ್‌., ಶರೀಫ್ ಕಂಠಿ, ರಿಯಾಜ್‌ ಕಟ್ಟೆಕ್ಕಾರ್‌, ನಾರಾಯಣ ಶಾಂತಿನಗರ, ಬಾಲಕೃಷ್ಣ ರೈ, ಬುದ್ಧ ನಾಯ್ಕ, ನಾಮನಿರ್ದೇಶನ ಸದಸ್ಯರಾದ ಬೂಡು ರಾಧಾಕೃಷ್ಣ ರೈ, ರೋಹಿತ್‌ ಕೊಯಿಂಗೋಡಿ ಮತ್ತಿತರರಿದ್ದರು.

ಪುಸ್ತಕದಲ್ಲಿ ನಮೂದಿಸಲು ಸೂಚನೆ
ಸದಸ್ಯ ಬೂಡು ರಾಧಾಕೃಷ್ಣ ಮಾತನಾಡಿ, ಸುಳ್ಯದಲ್ಲಿ ಇಂದಿರಾ ಕ್ಯಾಂಟಿನ್‌ ಕಾರ್ಯಾಚರಿಸುತ್ತಿದೆ. ಇದರ ಜವಾಬ್ದಾರಿ ನೋಡಿಕೊಳ್ಳುವವರು ಯಾರು, ಅಲ್ಲಿ ಎಷ್ಟು ಊಟ, ತಿಂಡಿ ಹೋಗುತ್ತದೆ ಎಂದು ಪ್ರಶ್ನಿಸಿ, ಅಲ್ಲಿನವರ ವರ್ತನೆ ಸರಿಯಿಲ್ಲದೆ ಇರುವುದರಿಂದ ಜನರು ಬರುತ್ತಿಲ್ಲ. ಈ ಬಗ್ಗೆ ನ.ಪಂ. ಗಮನ ಹರಿಸಬೇಕು ಎಂದರು. ಉತ್ತರಿಸಿದ ಮುಖ್ಯಾಧಿಕಾರಿ ಸುಧಾಕರ್‌ ಅವರು ಈ ಬಗ್ಗೆ ವರದಿ ನೀಡುತ್ತೇವೆ. ಗುತ್ತಿಗೆ ಪಡೆದುಕೊಂಡ ಸಂಸ್ಥೆ ಕ್ಯಾಂಟಿನ್‌ ನಡೆಸುತ್ತದೆ. 50-60 ಮಂದಿ ನಿತ್ಯ ಬರುತ್ತಿದ್ದಾರೆ ಎಂದ ಅವರು ಅಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಅಲ್ಲಿನ ದೂರು ಪುಸ್ತಕದಲ್ಲಿ ಉಲ್ಲೇಖೀಸಿದ್ದಲ್ಲಿ ಸಂಬಂಧಿಸಿದವರಿಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next