Advertisement
ಬೋಳೂರಿನ ಗುರುಪುರ ನದಿಯ ತಟದಲ್ಲಿರುವ ಸುಲ್ತಾನ್ ಬತ್ತೇರಿಯಲ್ಲಿ ಟಿಪ್ಪುವಿನ ಕಾಲದಲ್ಲಿ ನಿರ್ಮಿಸಿದ ವೀಕ್ಷಣಾ ಗೋಪುರ ಪ್ರಮುಖ ಆಕರ್ಷಣೆ. ಪ್ರಾಕೃತಿಕ ಸೌಂದರ್ಯದಲ್ಲಿ ಮಿಂದೆದ್ದಿರುವ ಇಲ್ಲಿನ ಸೊಬಗು ಆಸ್ವಾದಿಸಲು ದೂರದೂರಿನಿಂದ ನೂರಾರು ಜನರು ಆಗಮಿಸುತ್ತಾರೆ. ಆದರೆ ಮಂಗಳೂರಿನ ಹಿರಿಮೆಗೆ ಗರಿಯಂತಿರುವ ಕರಾವಳಿಯ ಪ್ರತಿಷ್ಠಿತ ಸುಲ್ತಾನ್‌ಬತ್ತೇರಿ ಆಡಳಿತದ ನಿರ್ಲಕ್ಷ್ಯದಿಂದ ಹಾಳು ಕೊಂಪೆ ಯಾಗಿ ಪರಿವರ್ತಿತವಾಗಿದೆ.
ದೇಶದೆಲ್ಲೆಡೆ ಸ್ವತ್ಛ ಪರಿಕಲ್ಪನೆಯ ಧ್ವನಿ ಮೊಳಗುತ್ತಿದ್ದರೂ, ಕರಾವಳಿಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವತ್ಛತೆ ಎಂಬುದು ಇನ್ನೂ ಜೀವಂತಿಕೆ ಪಡೆದಿಲ್ಲ ಎಂಬುದಕ್ಕೆ ಸುಲ್ತಾನ್‌ಬತ್ತೇರಿ ಸಾಕ್ಷಿ. ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಹೊಂಡ-ಗುಂಡಿಗಳಿಂದಲೇ ಸ್ವಾಗತ ನೀಡುತ್ತಿದೆ. ನಿತ್ಯ ನೂರಾರು ಪ್ರವಾಸಿಗರು ಬರುತ್ತಿದ್ದರೂ ರಜಾ ದಿನಗಳಲ್ಲಿ ಆ ಸಂಖ್ಯೆ ಹೆಚ್ಚಿರುತ್ತದೆ. ಇಲ್ಲಿ ಬೋಟಿಂಗ್ ವ್ಯವಸ್ಥೆಯೂ ಇದೆ. ಇಲ್ಲಿನ ವಿಪುಲ ನೀರರಾಶಿಗೆ ಮಾರು ಹೋಗುವ ಪ್ರವಾಸಿಗರು ಮತ್ತೂಂದೆಡೆ ಕಸಕಡ್ಡಿಗಳನ್ನು ಕಂಡು ಮೂಗು ಮುಚ್ಚಿಕೊಳ್ಳುವುದು ಅನಿವಾರ್ಯವಾಗಿದೆ. ಪರಿಸ್ಥಿತಿ ಹೀಗಿದ್ದರೂ ಸಂಬಂಧಪಟ್ಟ ಇಲಾಖೆಯವರು ಗಾಢ ಮೌನದಲ್ಲಿರುವುದು ಆಶ್ಚರ್ಯದ ಸಂಗತಿಯೇ.
Related Articles
Advertisement
ಗಮನಹರಿಸದ ಆಡಳಿತ ವ್ಯವಸ್ಥೆಸುಲ್ತಾನ್ಬತ್ತೇರಿಯು ಕಳೆದ ಹಲವು ವರ್ಷಗಳಿಂದ ಪಾಳುಬಿದ್ದಿದೆ. ಕಸಕಡ್ಡಿಗಳು, ಕಲ್ಲು ಚಪ್ಪಡಿಗಳೂ ರಾಶಿ ಬಿದ್ದಿವೆ. ಗಮನಹರಿಸಬೇಕಾದ ಇಲಾಖೆಗಳು ಮಾತ್ರ ಈ ಬಗ್ಗೆ ಯಾವುದೇ ಗಮನ ನೀಡಿದಂತಿಲ್ಲ. ಪರಿಣಾಮವಾಗಿ ಪ್ರತಿಷ್ಠಿತ ಪ್ರವಾಸೋದ್ಯಮ ಸ್ಥಳವೊಂದು ಕಸದ ಕೊಂಪೆಯಿಂದ ಆವೃತವಾಗಿದೆ.
-ಸುಕೇಶ್ ಭಂಡಾರಿ , ಮಂಗಳೂರು