ಸುಳ್ಯ: ಇಲ್ಲಿನ ನಗರ ಪಂಚಾಯತ್‌ಗೆ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿ ಕಚೇರಿಯ ಅವ್ಯವಸ್ಥೆಯ ಬಗ್ಗೆ ಗರಂ ಆದ ಘಟನೆ ನಡೆದಿದೆ.
ನಗರ ಪಂಚಾಯತ್ ಕಚೇರಿಯ ಅವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ನಗರ ಪಂಚಾ ಯತ್ ಮುಖ್ಯಾಧಿಕಾರಿ, ಎಂಜಿನಿಯರ್, ಆರೋಗ್ಯಾಧಿಕಾರಿ ಸೇರಿದಂತೆ ಅಧಿಕಾರಿ ಹಾಗೂ ಸಿಬಂದಿಯನ್ನು ತರಾಟೆ ಗೆತ್ತಿಕೊಂಡರು. ಟೇಬಲ್‌ಗಳಲ್ಲಿ ಕಡತಗಳು ರಾಶಿ ಬಿದ್ದದ್ದನ್ನು ಕಂಡು ಪ್ರಶ್ನಿಸಿದರು.
ನಗರ ಪಂಚಾಯತ್ ಅವರಣದ ಬಳಿ ಇದ್ದ ಕಸದ ರಾಶಿಯ ಬಗ್ಗೆ ನಗರ ಪಂಚಾಯತ್ ಆಡಳಿತದಿಂದ ಮಾಹಿತಿ ಪಡೆದುಕೊಂಡರು. ಜಿಲ್ಲಾಧಿಕಾರಿ ಪ್ರಶ್ನೆಗಳಿಗೆ ಅಧಿಕಾರಿಗಳು, ಸಿಬಂದಿಯಿಂದ ಸಮರ್ಪಕ ಉತ್ತರ ನೀಡಲು ಸಾಧ್ಯವಾಗದೆ ಇದ್ದಾಗ ತರಾಟಗೆ ತೆಗೆದುಕೊಂಡ ಡಿಸಿ ಸಾರ್ವಜನಿಕರಿಂದಲೂ ಕೆಲವು ದೂರು ಗಳನ್ನು ಆಲಿಸಿ ನ.ಪಂ. ಆಡಳಿತಕ್ಕೆ ಬಿಸಿ ಮುಟ್ಟಿಸಿದರು. ಬಳಿಕ ಜನ ಪ್ರತಿನಿಧಿ ಹಾಗೂ ಅಧಿಕಾರಿಗಳ ಸಭೆ ನಡೆಸಿದರು.
ಸಚಿವರ ಸೂಚನೆ ಮೇರೆಗೆ ಪರಿಶೀಲನೆ
ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾತನಾಡಿದ ಡಾ| ರಾಜೇಂದ್ರ ಕೆ.ವಿ., ಜನಪ್ರತಿನಿಧಿಗಳು ಮತ್ತಿತರ ದೂರಿನ ಹಿನ್ನೆಲೆಯಲ್ಲಿ ಸಚಿವರ ಸೂಚನೆಯ ಮೇರೆಗೆ ನಗರ ಪಂಚಾಯತ್‌ಗೆ ಆಗಮಿಸಿ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆ ಕಂಡು ಬಂದಿದೆ. ಮುಖ್ಯಾಧಿಕಾರಿ, ಎಂಜಿನಿಯರ್, ಆರೋಗ್ಯಾಧಿಕಾರಿ ಸೇರಿ ದಂತೆ ಅಧಿಕಾರಿಗಳ ಕೆಲಸ ಕಾರ್ಯ ಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿದೆ. ವರದಿ ದೊರೆತ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮುಂದಿನ ತಿಂಗಳು ಮತ್ತೆ ಆಗಮಿಸಿ ನಗರ ಪಂಚಾಯತ್‌ನ ಕೆಲಸ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Related Articles
ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ತಹಶೀಲ್ದಾರ್ ಅನಿತಾಲಕ್ಷ್ಮೀ, ನಗರ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಕಂದಾಯ ಅಧಿಕಾರಿ ಕೊರಗಪ್ಪ ಹೆಗ್ಡೆ, ಸಹಾಯಕ ಕಾರ್ಯಪಾಲಕ ಅಭಿಯಂತ ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವರದಿ ನೀಡಲು ಸೂಚನೆ
ನಗರ ಪಂಚಾಯತ್‌ನಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಕೂಡಲೇ ವರದಿ ನೀಡುವಂತೆ ಜಿಲ್ಲಾ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಡಾ| ರಾಜೇಂದ್ರ ಕೆ.ವಿ. ತಿಳಿಸಿದರು.