Advertisement

ಸುಳ್ಯ: ಎರಡು ಸರಕಾರಿ ಕನ್ನಡ ಶಾಲೆಗಳಿಗೆ ಬೀಗ?

12:27 PM Jun 19, 2018 | |

ಸುಳ್ಯ : ಹಾಲಿ ಶೈಕ್ಷಣಿಕ ವರ್ಷದಲ್ಲಿ ಶೂನ್ಯ ದಾಖಲಾತಿಯಿಂದ ತಾಲೂಕಿನ ಎರಡು ಸರಕಾರಿ ಕನ್ನಡ ಶಾಲೆಗಳು ಮುಚ್ಚುಗಡೆಯಾದ ಶಾಲೆಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿವೆ. ಕುಕ್ಕೇಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಕರ್ನಾಟಕ-ಕೇರಳ ಗಡಿಭಾಗದ ರಂಗತ್ತಮಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಇಲ್ಲದೆ ಶೈಕ್ಷಣಿಕ ಚಟುವಟಿಕೆ ಸ್ಥಗಿತವಾಗಿದೆ.

Advertisement

ದಾಖಲಾತಿ ಇಲ್ಲ
ಉಭಯ ಶಾಲೆಗಳಲ್ಲಿ 1ರಿಂದ 5ನೇ ತರಗತಿ ತನಕ ಇವೆ. ಯಾವ ತರಗತಿಯಲ್ಲೂ ವಿದ್ಯಾರ್ಥಿಗಳಿಲ್ಲ. 1ನೇ ತರಗತಿಗೆ ಹೊಸ ದಾಖಲಾತಿ ಆಗಿಲ್ಲ. ಒಟ್ಟು ವಿದ್ಯಾರ್ಥಿ ಸಂಖ್ಯೆ ಶೂನ್ಯ. ಇದರಿಂದ ಎರಡೂ ಶಾಲೆಗಳಿಗೆ ಬೀಗ ಜಡಿಯುವ ಸ್ಥಿತಿ ಒದಗಿದೆ.

ಕುಕ್ಕೇಟಿ ಕಿ. ಪ್ರಾಥಮಿ ಶಾಲೆ
ಅಜ್ಜಾವರ ಗ್ರಾಮದ ಕುಕ್ಕೇಟಿ ಕಿ.ಪ್ರಾಥಮಿಕ ಶಾಲೆ 1966ರಲ್ಲಿ ಸ್ಥಾಪನೆ ಗೊಂಡದ್ದು. ಇಲ್ಲಿ ಕಳೆದ ಎರಡು ವರ್ಷಗಳಿಂದ ಒಂದನೇ ತರಗತಿಗೆ ದಾಖಲಾತಿ ಆಗಿಲ್ಲ. 2017-18ನೇ ಸಾಲಿನಲ್ಲಿ 2ನೇ ತರಗತಿಯಲ್ಲಿ 3, 3ನೇ ತರಗತಿಯಲ್ಲಿ 1, 5ನೇ ತರಗತಿಯಲ್ಲಿ 4 ವಿದ್ಯಾರ್ಥಿಗಳಿದ್ದರು. 5ನೇ ತರಗತಿಯ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಬೇರೆ ಶಾಲೆಗೆ ತೆರಳಿದ್ದಾರೆ. ಉಳಿದ ನಾಲ್ವರು ವರ್ಗಾವಣೆ ಪತ್ರ ಪಡೆದು ಹತ್ತಿದ ಶಾಲೆಗಳಿಗೆ ಸೇರ್ಪಡೆಗೊಂಡಿದ್ದಾರೆ. ಶಾಲಾ ಪುನರಾರಂಭಗೊಂಡು ಎರಡು ವಾರಗಳು ಕಳೆದರೂ ಇಬ್ಬರು ಶಿಕ್ಷಕರು ಆಗಮಿಸಿ-ನಿರ್ಗಮಿಸುವುದನ್ನು ಬಿಟ್ಟರೆ ಮಿಕ್ಕೇನೂ ಚಟುವಟಿಕೆ ನಡೆಯುತ್ತಿಲ್ಲ.

ರಂಗತ್ತಮಲೆ ಶಾಲೆ
ಆಲೆಟ್ಟಿ ಗ್ರಾಮದ ರಂಗತ್ತಮಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೂಡ ಮುಚ್ಚುವ ಪಟ್ಟಿಗೆ ಸೇರಿದೆ. ಇಲ್ಲೂ ಮಕ್ಕಳ ಸಂಖ್ಯೆಯೂ ಸೊನ್ನೆ. ಕಳೆದ ಕೆಲವು ವರ್ಷಗಳಿಂದಲೇ ಮುಚ್ಚುವ ಪೂರ್ವ ತಯಾರಿಯಲ್ಲಿದ್ದ ಈ ಶಾಲೆ, ಈ ಬಾರಿ ಅಧಿಕೃತವಾಗಿ ಬಂದ್‌ ಆಗಲಿದೆ. 

ಕಳೆದ ವರ್ಷ 1ರಿಂದ 4ನೇ ತರಗತಿ ತನಕ ಮಕ್ಕಳೇ ಇರಲಿಲ್ಲ. 5ನೇ ತರಗತಿಯಲ್ಲಿದ್ದ ಮಕ್ಕಳು ತೇರ್ಗಡೆ ಹೊಂದಿ ಬೇರೆ ಶಾಲೆ ಹೋಗಿದ್ದಾರೆ. ಹೊಸ ದಾಖಲಾತಿ ಇಲ್ಲದೆ ಶೂನ್ಯ ಸಂಖ್ಯೆಯ ಕಾರಣ ಹಾಲಿ ವರ್ಷದ ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಂಡಿದೆ.

Advertisement

ಮುಚ್ಚುಗಡೆ ಸಂಖ್ಯೆ ಹೆಚ್ಚಳ
ಈಗಾಗಲೇ ತಾಲೂಕಿನ ಬಾಬ್ಲುಬೆಟ್ಟು, ಕೆಮ್ಮನಬಳ್ಳಿ, ಭೂತಕಲ್ಲು ಕಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಮುಚ್ಚುಗಡೆ ಆಗಿದ್ದ ಬೆಂಡೋಡಿ ಶಾಲೆ ಮತ್ತೆ ತೆರೆದಿದೆ. ಉಳಿದಂತೆ ಹೊಸದಾಗಿ ಈ ಬಾರಿ ರಂಗತ್ತಮಲೆ, ಕುಕ್ಕೇಟಿ ಸೇರ್ಪಡೆಗೊಂಡಿವೆ. ಹದಿನೈದಕ್ಕೂ ಅಧಿಕ ಶಾಲೆಗಳಲ್ಲಿ 10ಕ್ಕಿಂತಲೂ ಕಡಿಮೆ ಮಕ್ಕಳಿದ್ದಾರೆ. ಅವು ಕೂಡ ಮುಂದಿನ ದಿನಗಳಲ್ಲಿ ಬಾಗಿಲು ಮುಚ್ಚುವ ಶಾಲೆಗಳ ಪಟ್ಟಿಗೆ ಸೇರ್ಪಡೆಗೊಳ್ಳುವ ಹಂತದಲ್ಲಿವೆ.

ಅವಕಾಶ ಇದೆ 
ಶಿಕ್ಷಣ ಇಲಾಖೆ ಶೈಕ್ಷಣಿಕ ಚಟುವಟಿಕೆ ರಹಿತ ಶಾಲೆಗಳನ್ನು ಮುಚ್ಚಲ್ಪಟ್ಟ ಶಾಲೆಗಳು ಎಂದು ಒಪ್ಪುವುದಿಲ್ಲ. ಮುಂದಿನ
ವರ್ಷ ದಾಖಲಾತಿ ಆದರೆ ಪುನಾರರಂಭಕ್ಕೆ ಅವಕಾಶ ಇದೆ ಎಂಬ ನಿಯಮ ಅದಕ್ಕೆ ಕಾರಣ. ಈ ತನಕ ದಾಖಲಾತಿ ಇಲ್ಲದೆ ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಂಡ ಶಾಲೆಗಳ ಪೈಕಿ ಶೇ.99 ಶಾಲೆಗಳು ಪುನಾರರಂಭಗೊಂಡಿಲ್ಲ. ಅಲ್ಲಿ ಮತ್ತೆ ಮಕ್ಕಳು ದಾಖಲಾತಿ ಪಡೆದ ಉದಾಹರಣೆ ಕಡಿಮೆ. ಅವು ಶಾಶ್ವತವಾಗಿ ಮುಚ್ಚಿವೆ.

ಮಾಹಿತಿ ಪಡೆಯುವೆ
ಈಗಾಗಲೇ ದಾಖಲಾತಿ ಆಂದೋಲನ ಪ್ರಗತಿಯಲ್ಲಿದೆ. ಹಾಗಾಗಿ ಮಕ್ಕಳು ಸೇರ್ಪಡೆಗೊಳ್ಳಲು ಇನ್ನೂ ಅವಕಾಶ ಇದೆ. ಸುಳ್ಯದಲ್ಲಿ ದಾಖಲಾತಿ ಇಲ್ಲದ ಎರಡು ಶಾಲೆಗಳ ಬಗ್ಗೆ ಶಿಕ್ಷಣಾಧಿಕಾರಿ ಅವರಿಂದ ಮಾಹಿತಿ ಪಡೆಯುತ್ತೇನೆ. 
 - ವೈ.ಶಿವರಾಮಯ್ಯ
ಡಿಡಿಪಿಐ, ಮಂಗಳೂರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next