Advertisement
ಕೇಂದ್ರ ಸರಕಾರ ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿ (ಯುನಿವರ್ಸಲ್ ಸರ್ವೀಸ್ ಆಬ್ಲಿಗೇಶನ್ ಫಂಡ್)ಯಡಿ ದೇಶಾದ್ಯಂತ ಕುಗ್ರಾಮಗಳ ಸಹಿತ ಸ್ವಲ್ಪವೂ ನೆಟ್‌ವರ್ಕ್ ತಲುಪದ ಸ್ಥಳಗಳಲ್ಲಿ ಸ್ಥಾಪಿಸಲಿರುವ ಬಿಎಸ್ಸೆನ್ನೆಲ್ 4ಜಿ ಸೇವೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೂ ಅನುಷ್ಠಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ದ.ಕ. ಹಾಗೂ ಉಡುಪಿಯ 98 ಕಡೆಗಳಿಗೆ ಟವರ್ ಮಂಜೂರುಗೊಂಡಿದ್ದು, ಅನುಷ್ಠಾನ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಕೇಂದ್ರದ ಹೊಸ ಯೋಜನೆಯಂತೆ ನಿರ್ಮಾಣಗೊಳ್ಳುವ ಬಿಎಸ್ಸೆನ್ನೆಲ್ ಟವರ್‌ಗಳ ಬಳಿಯಲ್ಲೇ ಸೋಲಾರ್ ಪ್ಯಾನಲ್ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಟವರ್‌ಗಳಿಗೆ ವಿದ್ಯುತ್ ಸಂಪರ್ಕದ ಜತೆಗೆ ಆಯಾ ವ್ಯಾಪ್ತಿಯ ಟವರ್‌ಗಳ ಸಾಮರ್ಥ್ಯಕ್ಕೆ ತಕ್ಕಂತೆ ಸೋಲಾರ್ ಪವರ್ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಕರೆಂಟ್ ಇಲ್ಲದಿದ್ದರೂ ನಿರಂತರ ನೆಟ್‌ವರ್ಕ್ ಪೂರೈಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಇದು ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಟವರ್‌ಗಳಿಗೆ ಮಾತ್ರವೇ ಈ ವ್ಯವಸ್ಥೆ ಇರಲಿದೆ. ಪ್ರಾಯೋಗಿಕ ಹಂತದಲ್ಲಿ
ಗ್ರಾಮೀಣ ಭಾಗದಲ್ಲಿ ಬಿಎಸ್ಸೆನ್ನೆಲ್ ಹೊಸ ಟವರ್ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ವಿವಿಧ ಹಂತಗಳ ಕೆಲಸಗಳು ಮುಗಿದ ಬಳಿಕ 4ಜಿ ನೆಟ್‌ವರ್ಕ್ ವ್ಯವಸ್ಥೆ ಪರೀಕ್ಷಿಸುವ ಪ್ರಾಯೋಗಿಕ ಹಂತ ಕೆಲವೆಡೆ ನಡೆಯುತ್ತಿದೆ. ದ.ಕ. ಮತ್ತು ಉಡುಪಿಯ ಕೆಲವೆಡೆ ಮಾತ್ರವೇ ಟವರ್ ನಿರ್ಮಾಣ ಹಾಗೂ ಇತರ ಕೆಲಸಗಳು ಪೂರ್ಣಗೊಂಡಿದ್ದು, ಅಂತಹ ಕಡೆಗಳಲ್ಲಿ ನೆಟ್‌ವರ್ಕ್‌ನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವ ಕೆಲಸ ನಡೆಯುತ್ತಿದೆ. ಗ್ರಾಮೀಣ ಜನರು ಹಳೆ ಸಿಮ್ ಬಳಸುತ್ತಿದ್ದರೆ ಹೊಸ ಬಿಎಸ್ಸೆನ್ನೆಲ್ 4ಜಿ ಸಿಮ್‌ಗೆ ಅದನ್ನು ಮೇಲ್ದರ್ಜೆಗೇರಿಸಬೇಕಾಗುತ್ತದೆ.
Related Articles
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೈಕೊಡುವ ಸಂದರ್ಭದಲ್ಲಿ ಬಿಎಸ್ಸೆನ್ನೆಲ್‌ನೆಟ್‌ವರ್ಕ್ ಕೈಕೊಡುವ ಪ್ರದೇಶಗಳನ್ನು ಸಮೀಕ್ಷೆ ಮಾಡಿ ಅಂತಹ ಕಡೆಗಳಿಗೂ ಸೋಲಾರ್ ಮೂಲಕ ಪವರ್ ಒದಗಿಸಲು ಚಿಂತಿಸಲಾಗಿದೆ.
Advertisement
ಸದ್ಯ ಸಮೀಕ್ಷೆ ನಡೆಯುತ್ತಿದ್ದು, ಈ ಪ್ರಕ್ರಿಯೆಗಳಿಗೆ ಮಂಜೂರಾತಿ ದೊರೆತಲ್ಲಿ ಟವರ್ ಬಳಿ ಸೋಲಾರ್ ಪವರ್ ಆಯೋಜನೆ ನಡೆಯಲಿದೆ.
-ದಯಾನಂದ ಕಲ್ನಾರ್