Advertisement

Sullia: ಉಪಟಳ ಮಾಡುವ ಕೋತಿಗಳಿಗೆ ಶಾಕ್‌ ಟ್ರೀಟ್‌ಮೆಂಟ್‌!

07:48 PM Nov 29, 2024 | Team Udayavani |

ಸುಳ್ಯ: ಸದಾ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಕೃಷಿಕರದ್ದು. ಕಾಡು ಪ್ರಾಣಿಗಳು ಅದರಲ್ಲೂ ಕೋತಿಗಳ ಕಾಟ ಈಗ ಎಲ್ಲ ಕಡೆ ಜೋರಾಗಿದೆ. ಸುಳ್ಯದ ಕೃಷಿಕರೊಬ್ಬರು ಮಂಗಗಳ ಉಪಟಳ ತಡೆಗೆ ಶಾಕ್‌ ಟ್ರೀಟ್ಮೆಂಟ್‌ ಹೊಸ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ.

Advertisement

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬೊಳುಗಲ್ಲಿನ ಕೃಷಿಕ ಶ್ರೀಹರಿ ಅವರು ಎಳನೀರು, ತೆಂಗಿನ ಕಾಯಿಯನ್ನು ಸಂಪೂರ್ಣ ಹಾಳು ಮಾಡುತ್ತಿದ್ದ ಮಂಗ ಗಳಿಗೆ ವಿದ್ಯುತ್‌ ಶಾಕ್‌ ನೀಡುವ ತಂತ್ರ ಉಪಯೋಗಿಸಿದ್ದಾರೆ. ಫ‌ಸಲು ತುಂಬಿದ ತೆಂಗಿನ ಗೊನೆಯ ಮುಂಭಾಗದ ಮಡಲಿನ ಮೇಲೆ ಶಾಕಿಂಗ್‌ ಪ್ಯಾಡ್‌ ಅಳವಡಿಸಿ ಅದಕ್ಕೆ ಸೋಲಾರ್‌ ಬ್ಯಾಟರಿಯ ಮೂಲಕ ವಿದ್ಯುತ್‌ ಹಾಯಿಸಿ ಮಂಗಗಳಿಗೆ ಶಾಕ್‌ ಕೊಟ್ಟು ಓಡಿಸುವುದು ಈ ಪ್ರಯೋಗದ ಹಿಂದಿರುವ ಸೂತ್ರ.

ಬಿಎಸ್ಸಿ ಜತೆಗೆ ಕಾನೂನು ಪದವಿ ಯನ್ನೂ ಪಡೆದಿರುವ ಶ್ರೀಹರಿ ಅವರಿಗೆ ತಂತ್ರಜ್ಞಾನದಲ್ಲಿ ಆಸಕ್ತಿ. ಅನಿವಾರ್ಯವಾಗಿ ಕೃಷಿಯನ್ನೇ ಅವಲಂಬಿಸಿರುವ ಅವರು ಕಾಲೇಜಿನಲ್ಲಿ ತಯಾರಿಸುತ್ತಿದ್ದ ವಿಜ್ಞಾನ ಮಾಡೆಲ್‌ಗ‌ಳನ್ನು ಬಳಸಿ ಕೃಷಿಯಲ್ಲಿನ ಕೆಲವು ಸಮಸ್ಯೆಗಳ ಪರಿಹಾರ ಹುಡುಕುತ್ತಿದ್ದಾರೆ.

ಪತ್ನಿ ಹಾಗೂ ಓರ್ವ ಪುತ್ರನೊಂದಿಗೆ ವಾಸಿಸುತ್ತಿರುವ ಶ್ರೀಹರಿ ಅವರು ತಮ್ಮ ಜಾಗಕ್ಕೆ ಸೋಲಾರ್‌ ಬೇಲಿಯನ್ನೂ ಸ್ವತಃ ತಾವೇ ಅಳವಡಿಸಿದ್ದಾರೆ. ಇವರು ಮನೆಯ ವಯರಿಂಗ್‌, ಸ್ಲ್ಯಾಬ್‌ಗಳ ಕೆಲಸಗಳಲ್ಲೂ ಪರಿಣಿತರು.

ಏನಿದು ಮಂಕಿ ಶಾಕಿಂಗ್‌ ಪ್ಯಾಡ್‌?
40 ವ್ಯಾಟ್‌ನ ಸೋಲಾರ್‌ ಪ್ಯಾನಲ್‌, 12 ಆ್ಯಮ್ಸ್‌ಗಿಂತ ಅ ಧಿಕದ 12 ವೋಲ್ಟ್ನ ಬ್ಯಾಟರಿ, ಫೈಬರ್‌ ಹಾಗೂ ಅಲ್ಯುಮಿನಿಯಮ್‌ ಹೊದಿಕೆಯ ಪ್ಯಾನಲ್‌ ಹಾಗೂ 12 ಗೇಜ್‌ನ ತುಸು ಗಟ್ಟಿ ಸಾಮರ್ಥ್ಯದ ಸರಿಗೆ ಬಳಸಿ ಈ ಉಪಕರಣ ತಯಾರಿಸಿದ್ದಾರೆ. ಅದಕ್ಕೆ ಅವರಿಟ್ಟ ಹೆಸರು ಮಂಕಿ ಶಾಕಿಂಗ್‌ ಪ್ಯಾಡ್‌.

Advertisement

ಬಿಯರ್‌ ಟಿನ್‌ನ್ನು ಕತ್ತರಿಸಿ ಅದನ್ನು ಫೈಬರ್‌ ಶೀಟ್‌ನ ಮೇಲೆ ಹೊದಿಸಿ ಪ್ಯಾಡ್‌ ರಚಿಸಿದ್ದಾರೆ. ಫೈಬರ್‌ ಶೀಟ್‌ನ ಮೇಲೆ ಅಲ್ಯುಮಿನಿಯಮ್‌ ಹೊದಿಕೆಯನ್ನು ಹಾಸಿ ಅದಕ್ಕೆ ಸೋಲಾರ್‌ ಎನರ್ಜೈಸರ್‌ ಬಾಕ್ಸ್‌ನಿಂದ ಸಂಗ್ರಹಿಸಲಾಗುವ 1,200 ವೋಲ್ಟ್ ಪಲ್ಸ್‌ ಶಾಕ್‌ನ್ನು ತಂತಿಯ ಮೂಲಕ ಪ್ರವಹಿಸುವಂತೆ ಮಾಡಿದ್ದಾರೆ.

ಸಾಮಾನ್ಯವಾಗಿ ಮಂಗಗಳು ಸೀಯಾಳದ ಗೊನೆಗೆ ಬಾಯಿರಿಸಬೇಕಾದರೆ ಗೊನೆಯ ಮುಂಭಾಗದ ಮಡಲಿನ ಮೇಲೆಯೇ ಕುಳಿತುಕೊಳ್ಳುತ್ತವೆ. ಅದಕ್ಕಾಗಿ ಈ ಶಾಕಿಂಗ್‌ ಪ್ಯಾಡ್‌ನ್ನು ಗೊನೆಯ ಮುಂಭಾಗದ ಮಡಲಿಗೆ ಕಟ್ಟಲಾಗುತ್ತದೆ. ಪ್ರತೀ ಸೆಕೆಂಡ್‌ಗೊಮ್ಮೆ ಸೋಲಾರ್‌ ಎನರ್ಜೈಸರ್‌ ಬಾಕ್ಸ್‌ನಿಂದ ಶಾಕಿಂಗ್‌ ಪ್ಯಾಡ್‌ಗೆ ವಿದ್ಯುತ್‌ ಪ್ರವಹಿಸುವಂತೆ ಮಾಡಲಾಗುತ್ತದೆ. ಮಂಗಗಳು ಎಳನೀರು ಕುಡಿಯಲು ಮರವೇರಿ ಮಡಲಿನ ಮೇಲೆ ಕುಳಿತಾಗ ಅದಕ್ಕೆ ಶಾಕ್‌ ತಗಲುತ್ತದೆ. ಶಾಕ್‌ಗೆ ಒಳಗಾದ ಮಂಗಗಳು ಅಲ್ಲಿಂದ ಕಾಲು ಕೀಳುತ್ತವೆ. ಕಡಿಮೆ ತೀವ್ರತೆ ಇರುವುದರಿಂದ ಅಪಾಯವೇನೂ ಆಗುವುದಿಲ್ಲ. ಪ್ರತೀ ಗೊನೆಗೆ ಎದುರಾಗಿ ಒಂದೊಂದು ಪ್ಯಾಡ್‌ ಕಟ್ಟಬೇಕಾಗುತ್ತದೆ.

ಹಿಂದೆಲ್ಲ ತೋಟದಲ್ಲಿ ಮಂಗಗಳು ತಿಂದೆಸೆದ ಎಳನೀರಿನ ಸಿಪ್ಪೆಗಳೇ ಕಾಣಸಿಗು ತ್ತಿದ್ದವು. ಈ ಪ್ರಯೋಗದ ಬಳಿಕ ಹೊಸ ಗೊನೆಗಳು ಗೋಚರಿಸು ತ್ತಿವೆ. ಉಪಕರಣ ಅಳವಡಿಕೆಯಾ ಗದ ತೆಂಗಿನ ಮರಗಳಿಗೆ ಈಗಲೂ ಮಂಗಗಳ ಉಪಟಳ ತಪ್ಪಿಲ್ಲ. ಆರಂಭದಲ್ಲಿ ಬ್ಯಾಟರಿ, ಸೋಲಾರ್‌ ಉಪಕರಣ, ತಂತಿ ಹಾಗೂ ಇತರ ಸಾಧನಗಳಿಗಾಗಿ ತುಸು ಖರ್ಚಾಗಬಹುದು. ಫ‌ಸಲು ಉಳಿದರೆ ವ್ಯಯಿಸಿದ ಹಣ ಜುಜುಬಿ ಅನಿಸುತ್ತದೆ. ಬಾಳೆ ಕೃಷಿಗೂ ಇದನ್ನು ಅಳವಡಿಸುವ ಯೋಚನೆ ಇದೆ.
-ಶ್ರೀಹರಿ ಎಂ.ಬಿ. ಬೊಳುಗಲ್ಲು, ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next