Advertisement

ಸುಳ್ಯ: ಬಂಡಾಯ ಅಭ್ಯರ್ಥಿ ಪ್ರತ್ಯಕ್ಷ; ಚಕಮಕಿ

10:58 PM Jun 12, 2019 | Team Udayavani |

ಸುಳ್ಯ: ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರ ಉಪಸ್ಥಿತಿಯಲ್ಲಿ ಸದರ್ನ್ ರೆಸಿಡೆನ್ಸಿಯಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿ ನಾಯಕರ ನಡುವೆ ಪರಸ್ಪರ ವಾಗ್ವಾದ ನಡೆದು ಸಭೆ ಅರ್ಧದಲ್ಲೇ ಮೊಟಕುಗೊಂಡ ವಿದ್ಯಮಾನ ಮಂಗಳವಾರ ಸಂಜೆ ಸಂಭವಿಸಿದೆ.

Advertisement

ತಾಲೂಕು ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಪಕ್ಷದ ಕಾರ್ಯಕರ್ತರ ಸಭೆಗೆ ಐವನ್‌ ಆಗಮಿಸಿದ್ದರು. ನ.ಪಂ. ಚುನಾವಣೆಯಲ್ಲಿ ಬೂಡು ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಸಿಗದೆ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿ ಗೆದ್ದಿದ್ದ ರಿಯಾಜ್‌ ಕಟ್ಟೆಕಾರ್‌ ಅವರೂ ಸಭಾಂಗಣದಲ್ಲಿ ಹಾಜರಿದ್ದರು. ಇದನ್ನು ಕಂಡು ಕೆಲವು ನಾಯಕರು, ಕಾರ್ಯ ಕರ್ತರು ಸಭೆಯಿಂದ ಹೊರ ಹೋಗುವಂತೆ ರಿಯಾಜ್‌ ಅವರಿಗೆ ಸೂಚಿಸಿದರು.

ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ಸ್ಪರ್ಧಿಸಿದ್ದ ರಿಯಾಜ್‌ ಕಾಂಗ್ರೆಸ್‌ ಸಭೆಗೆ ಆಗಮಿಸಿದ್ದ ಏಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ವಿಚಾರ ಬ್ಲಾಕ್‌ ಕಾಂಗ್ರೆಸ್‌ ನಾಯಕರ ಮಧ್ಯೆ ವಾಗ್ವಾದಕ್ಕೆ ವೇದಿಕೆ ಸೃಷ್ಟಿಸಿತ್ತು. ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಐವನ್‌ ಡಿ’ಸೋಜಾ ಅವರು ಮಾತನಾಡುತ್ತಿದ್ದ ಸಂದರ್ಭ ಪುತ್ತೂರಿನಲ್ಲಿ ಇಂದು ಪಕ್ಷದ ಕಚೇರಿಗೆ ಬೀಗ ಹಾಕಿತ್ತು ಎಂದು ಹೇಳಿದ ಸಂದರ್ಭ ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಸುಳ್ಯದ ಕಾಂಗ್ರೆಸ್‌ ಕಚೇರಿ ಅದೇ ಸ್ಥಿತಿಗೆ ತಲುಪಿದೆ ಎಂದು ಹೇಳಿದ್ದಾರೆ. ಇದಕ್ಕೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಜಯಪ್ರಕಾಶ್‌ ರೈ ಅಸಮಾಧಾನಗೊಂಡು, ಸುಳ್ಯದಲ್ಲಿ ಕಚೇರಿ ಪ್ರತಿದಿನವೂ ತೆರೆದಿರುತ್ತದೆ. ಅಲ್ಲಿ ಕಚೇರಿ ಕೆಲಸಕ್ಕೆ ಸಂಬಳ ಕೊಟ್ಟು ಜನ ನಿಯೋಜಿಸಲಾಗಿದೆ ಎಂದು ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.

ಅಧ್ಯಕ್ಷರ ಮಾತಿಗೆ ಗೋಕುಲ್‌ದಾಸ್‌ ಸಹಿತ ಕೆಲ ನಾಯಕರು ಬೆಂಬಲ ಸೂಚಿಸಿದರು. ಇದೇ ವಿಚಾರಕ್ಕೆ ಸಂಬಂಧಿಸಿ ವೆಂಕಪ್ಪ ಗೌಡ ಮತ್ತು ಜಯಪ್ರಕಾಶ್‌ ರೈ ಅವರ ನಡುವೆ ಕೆಲ ಹೊತ್ತು ಚರ್ಚೆ ನಡೆಯಿತು ಎನ್ನಲಾಗಿದೆ. ಬಳಿಕ ಗೋಕುಲ್‌ದಾಸ್‌ ಮತ್ತು ವೆಂಕಪ್ಪ ಗೌಡ ಅವರೂ ವಾಗ್ವಾದ ನಡೆಸಿದರು. ಈ ಹಂತದಲ್ಲಿ ಮಾತನಾಡಿದ ಐವನ್‌ ಡಿ’ಸೋಜಾ, ನಾಯಕರು ಈ ರೀತಿ ಇರಬಾರದು. ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿ ಎಲ್ಲರನ್ನೂ ಸಮಾಧಾನಿಸಿ ಹೊರಟರು. ಬಳಿಕ ಸಭೆ ಮುಕ್ತಾಯಗೊಳಿಸಲಾಗಿದೆ.

ನಗರಸಭೆ ಪಕ್ಷೇತರ ಸದಸ್ಯ ರಿಯಾಜ್‌ ಅವರು ಐವನ್‌ ಅವರನ್ನು ತಮ್ಮ ವಾರ್ಡ್‌ ಗೆ ಕರೆದೊಯ್ಯಲು ಪ್ರಯತ್ನಿಸಿದ್ದರು. ಇದಕ್ಕೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಐವನ್‌ ಕೂಡ ಹೋಗಲು ಒಪ್ಪಿರಲಿಲ್ಲ. ಬಳಿಕ ರಿಯಾಜ್‌ ಸಭೆಯಲ್ಲಿ ಕಾಣಿಸಿ ಕೊಂಡಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.

Advertisement

ಸಭೆಗೆ ಅಡ್ಡಿಪಡಿಸಿಲ್ಲ: ರಿಯಾಜ್‌
ಬೂಡು ವಾರ್ಡ್‌ನ ಅಂಗನವಾಡಿ ತಡೆಗೋಡೆ ನಿರ್ಮಾಣದ ವಿಚಾರವಾಗಿ ಐವನ್‌ ಡಿ’ಸೋಜಾ ಅವರನ್ನು ಕರೆದೊಯ್ಯಲು ಬಂದಿದ್ದ ಸಂದರ್ಭ ಕೆಲವರು ತಡೆದರು. ಬಳಿಕ ಅವರು ಪೂರ್ವ ನಿಗದಿಯಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಗೆ ತೆರಳಿದ್ದರು. ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಐವನ್‌ ಅವರನ್ನು ನನ್ನ ವಾರ್ಡ್‌ಗೆ ಕರೆದೊಯ್ಯಲು ನಿಂತಿದ್ದೆ. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಸಭೆ ಅರ್ಧದಲ್ಲಿ ಮೊಟಕುಗೊಂಡಿತ್ತು. ಸಭೆಗೆ ಅಡ್ಡಿಪಡಿಸುವ ಯಾವುದೇ ಉದ್ದೇಶ ನನಗಿರಲಿಲ್ಲ ಎಂದು ಬೂಡು ವಾರ್ಡ್‌ ಸದಸ್ಯ ರಿಯಾಜ್‌ ಕಟ್ಟೆಕಾರ್‌ ತಿಳಿಸಿದ್ದಾರೆ.

ಅಂಗಡಿಯಲ್ಲಿ ಸಭೆ ಏಕೆ?
ಕಾಂಗ್ರೆಸ್‌ ಕಚೇರಿ ಇರುವಾಗ ಅಂಗಡಿಯಲ್ಲಿ ಸಭೆ ಏರ್ಪಡಿಸುವುದಕ್ಕೆ ಬೇಸರ ಇದೆ. ರಿಯಾಜ್‌ ನಮ್ಮ ಜತೆಗಿರುವ ಹುಡುಗ. ಪಕ್ಷೇತರವಾಗಿ ನಿಂತು ಗೆದ್ದಿರಬಹುದು. ಬಿಜೆಪಿ ಸೇರಿಲ್ಲ. ಪಕ್ಷವಿರೋಧಿ ಆಗಿದ್ದರೆ ಪಕ್ಷ ಈ ತನಕ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಐವನ್‌ ಮೊದಲಾದ ನಾಯಕರ ಜತೆ ಪಕ್ಷದ ಸಭೆ ನಡೆಯುವ ಸಭಾಂಗಣಕ್ಕೆ ಬಂದಿದ್ದ ರಿಯಾಜ್‌ ಅವರನ್ನು ಹೊರ ಹೋಗುವಂತೆ ಹೇಳಿರುವುದನ್ನು ನಾನು ಆಕ್ಷೇಪಿಸುವುದಿಲ್ಲ. ಆದರೆ ಹೇಳಿರುವ ಧಾಟಿಗೆ ನನ್ನ ವಿರೋಧ ಇದೆ. ಸಾವಧಾನದಿಂದಲೇ ತಿಳಿಸಬಹುದಿತ್ತು.
– ಎಂ.ವೆಂಕಪ್ಪ ಗೌಡ, ಕೆಪಿಸಿಸಿ ಕಾರ್ಯದರ್ಶಿ

ಕಚೇರಿ ಸದಾ ತೆರೆದಿದೆ
ಕಾಂಗ್ರೆಸ್‌ ಕಚೇರಿ ಸದಾ ತೆರೆದಿದೆ. ಎಂದೂ ಮುಚ್ಚಿಲ್ಲ. ಕಚೇರಿ ನಿರ್ವಹಣೆಗೆ ಓರ್ವರನ್ನು ನಿಯೋಜಿಸಿದ್ದೇವೆ. ಅಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಖಾಸಗಿ ಸಭಾಂಗಣದಲ್ಲಿ ಸಭೆ ಆಯೋಜಿಸಿದ್ದೆವು. ಮಂಗಳವಾರ ಪಕ್ಷದ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ನ.ಪಂ. ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದ ರಿಯಾಜ್‌ ಆಗಮಿಸಿದ ಕಾರಣ ಪಕ್ಷದ ನಿಯಮಾನುಸಾರ ಹೊರ ಹೋಗುವಂತೆ ಸೂಚಿಸಲಾಗಿದೆ. ರಿಯಾಜ್‌ ಕಾಂಗ್ರೆಸ್‌ ಸದಸ್ಯತ್ವ ಹೊಂದಿಲ್ಲ. ಹೀಗಾಗಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಅವರೇ ಲಿಖೀತ ರೂಪದಲ್ಲಿ ಮನವಿ ಕೊಟ್ಟಲ್ಲಿ ಪಕ್ಷದ ಸಭೆಯಲ್ಲಿ ಇರಿಸಿ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಿದೆ.
ಜಯಪ್ರಕಾಶ್‌ ರೈ ಎನ್‌, ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next