ಸುಳ್ಯ: ಕರಾವಳಿಯ ಜನಮನದ ಜೀವನಾಡಿ “ಉದಯವಾಣಿ’ ಆಶ್ರಯದಲ್ಲಿ ಕೆನರಾ ಪ್ರೌಢಶಾಲೆ ಅಸೋಸಿಯೇಶನ್ ಹಾಗೂ ಉಡುಪಿ ಆರ್ಟಿಸ್ಟ್ ಫೋರಂ ಸಹಯೋಗದಲ್ಲಿ ಸುಳ್ಯದ ಕೆವಿಜಿ ಕಾನೂನು ಕಾಲೇಜು ಸಭಾಂಗಣದಲ್ಲಿ ಅ. 20ರಂದು ಸುಳ್ಯ ತಾಲೂಕು ಮಟ್ಟದ “ಉದಯವಾಣಿ’ ಮಕ್ಕಳ ಚಿತ್ರಕಲಾ ಸ್ಪರ್ಧೆ ನಡೆಯಿತು.
Advertisement
ತಾಲೂಕು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ಅವರು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಚಿತ್ರ ಬಿಡಿಸುವಿಕೆ ಎಂಬ ಕಲೆ ಮೂಲಕ ಮಕ್ಕಳ ಮನಸ್ಸಿನಲ್ಲಿ ಪರಿಸರ ಪ್ರೇಮ, ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವ ಸಾಧ್ಯವಿದೆ. ಈ ನಿಟ್ಟಿನಲ್ಲಿ “ಉದಯವಾಣಿ’ ಚಿಣ್ಣರ ಬಣ್ಣ ಬಹುದೊಡ್ಡ ಅವಕಾಶ ತೆರೆದಿಟ್ಟಿದೆ. ಇದು ಇನ್ನಷ್ಟು ಯಶಸ್ಸು ಕಾಣಲಿ ಎಂದರು. “ಉದಯವಾಣಿ’ ದೈನಿಕ 50 ವರ್ಷದ ಸಂಭ್ರಮದಲ್ಲಿದೆ. ಸ್ಪಷ್ಟ ವರದಿ ದಾಖಲಿಸಿ ಓದುಗರ ಮುಂದಿಡುವ ಮೂಲಕ ತನ್ನ ವಿಶ್ವಾಸವನ್ನು ಇಂದಿಗೂ ಉಳಿಸಿಕೊಂಡಿದೆ. “ಉದಯವಾಣಿ’ ಓದುವುದೆಂದರೆ ನಮಗೂ ಅದೊಂದು ಹೆಮ್ಮೆ ಎಂದು ತಿಳಿಸಿದರು.
ಕೆವಿಜಿ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕೌಶಿಕ್ ಚಿದ್ಗಲ್ಲು ಮಾತನಾಡಿ, ಮಕ್ಕಳ ಮೇಲೆ ಪಠ್ಯದ ಹೊರೆ ಹೇರದೆ ಅವರನ್ನು ಸೃಜಶೀಲವಾದ ಚಿತ್ರಕಲೆ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡ ಬೇಕು. ಇದರಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವುದು. ಈ ನಿಟ್ಟಿನಲ್ಲಿ “ಉದಯವಾಣಿ’ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ ಉತ್ತಮ ಅವಕಾಶವಾಗಿದೆ ಎಂದರು. ನಿರೀಕ್ಷೆಗೂ ಮೀರಿ ಸ್ಪಂದನೆ
“ಉದಯವಾಣಿ’ ಮ್ಯಾಗಜಿನ್ಸ್ ಆ್ಯಂಡ್ ಸ್ಪೆಷಲ್ ಇನೀಶಿಯೇಟಿವ್ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಆನಂದ್ ಕೆ. ಮಾತನಾಡಿ, ಸುಳ್ಯದಲ್ಲಿ ಈ ಬಾರಿ ನಮ್ಮ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದೆ. ಇಲ್ಲಿ ಭಾಗವಹಿಸಿದ ಚಿಣ್ಣರು ಮುಂದೊಂದು ದಿನ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಳ್ಯಕ್ಕೆ ಕೀರ್ತಿ ತರುವಂತಾಗಲಿ ಎಂದರು.
Related Articles
“ಉದಯವಾಣಿ’ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ಪ್ರಸ್ತಾವನೆಗೈದು, ಈ ಬಾರಿ ಅವಿಭಜಿತ ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ಚಿಣ್ಣರು “ಉದಯವಾಣಿ’ ಏರ್ಪಡಿಸಿದ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಉತ್ತಮ ವಿಚಾರಧಾರೆಗಳಿಗೆ ಮನಸ್ಸನ್ನು ಕಟ್ಟಲು ಚಿತ್ರಕಲೆ ಪೂರಕ ಎಂದರು.
Advertisement
ಪ್ರಸರಣ ವಿಭಾಗದ ಪ್ರಾಡಕ್ಟ್ ಮಾರುಕಟ್ಟೆ ವ್ಯವಸ್ಥಾಪಕ ಅಜಿತ್ ಭಂಡಾರಿ ಸ್ವಾಗತಿಸಿ, ಮಾರುಕಟ್ಟೆ ವಿಭಾಗದ ಹಿರಿಯ ವ್ಯವಸ್ಥಾಪಕ ಸತೀಶ್ ಮಂಜೇಶ್ವರ ವಂದಿಸಿದರು. ವರದಿಗಾರ ಕಿರಣ್ ಪ್ರಸಾದ್ ಕುಂಡಡ್ಕ ನಿರೂಪಿಸಿದರು. ಮಾರುಕಟ್ಟೆ ವಿಭಾಗದ ಸಹಾಯಕ ವ್ಯವಸ್ಥಾಪಕ ಜಯಂತ ಬಾಯಾರ್, ಮಾರುಕಟ್ಟೆ ವಿಭಾಗದ ಹಿರಿಯ ಪ್ರತಿನಿಧಿ ಹರ್ಷ ಎ. ಪುತ್ತೂರು, ಪ್ರಸರಣ ವಿಭಾಗದ ಹಿರಿಯ ಪ್ರತಿನಿಧಿ ಪ್ರಕಾಶ್ ರೈ, ಮಾರುಕಟ್ಟೆ ವಿಭಾಗದ ಗುರು ಮುಂಡಾಜೆ, ಶೈಲೇಶ್, ಹರ್ಷಿತ್ ಸಹಕರಿಸಿದರು.
ಚಿಣ್ಣರಿಂದ ತುಂಬಿ ತುಳುಕಿತು ಸಭಾಂಗಣ
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಂಡ “ಉದಯವಾಣಿ’ ಚಿಣ್ಣರ ಚಿತ್ರಕಲಾ ಸ್ಪರ್ಧೆಗೆ ತಾಲೂಕಿನ ಮೂಲೆ – ಮೂಲೆಗಳಿಂದ 950ಕ್ಕೂ ಅಧಿಕ ಚಿಣ್ಣರು ಆಗಮಿಸಿದ್ದರು. ಇಡೀ ಸಭಾಂಗಣ, ಕ್ಯಾಂಪಸ್ ಚಿಣ್ಣರಿಂದ ತುಂಬಿ ತುಳುಕಿತು. 2 ಗಂಟೆಗಳ ಕಾಲ ಸಬ್‌ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ವಿದ್ಯಾರ್ಥಿಗಳು ಬಣ್ಣ ಬಳಿದರು. ಕ್ಯಾಂಪ್ಕೋ ಸಂಸ್ಥೆ, ಮಾಡರ್ನ್ ಚಿಪ್ಸ್, ಹ್ಯಾಂಗ್ಯೋ ಐಸ್‌ಕ್ರೀಂ ಸಂಸ್ಥೆಗಳು ಕಾರ್ಯಕ್ರಮಕ್ಕೆ ಪ್ರಾಯೋಕತ್ವ ನೀಡಿದ್ದವು. “ಮಕ್ಕಳಲ್ಲಿ ಕ್ರಿಯಾಶೀಲತೆ ವೃದ್ಧಿ’
ಪುತ್ತೂರು : ಜನಮನದ ಜೀವನಾಡಿ “ಉದಯವಾಣಿ’ ಕನ್ನಡ ದಿನ ಪತ್ರಿಕೆ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಮತ್ತು ಆರ್ಟಿಸ್ಟ್ ಫೋರಂ ಉಡುಪಿ ಸಹಯೋಗದಲ್ಲಿ “ಚಿಣ್ಣರ ಬಣ್ಣ – 2019′ ತಾಲೂಕು ಮಟ್ಟದ “ಉದಯವಾಣಿ’ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ರವಿವಾರ ತೆಂಕಿಲ ವಿವೇಕಾನಂದ ಆಂ. ಮಾ. ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿವೇಕಾನಂದ ಆಂ. ಮಾ. ಶಾಲೆಯ ಸಂಚಾಲಕ ಮುರಳೀಧರ ಕೆ., ಆರ್ಟ್ ಎಂಬುದು ಹಾರ್ಟ್ ನಿಂದ ಉದಯಿಸುವ ವಿಷಯವಾಗಿರುವುದರಿಂದ ಈ ವಿಶೇಷ ಚಟುವಟಿಕೆಯಲ್ಲಿನ ಆಸಕ್ತಿ ಮಕ್ಕಳಲ್ಲಿ ಜೀವ ತುಂಬುವ, ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಇತಿಹಾಸ, ವರ್ತಮಾನ, ಭವಿಷ್ಯದ ಚಿಂತನೆಗಳು ಚಿತ್ರ ಕಲಾವಿದನ ಕಲ್ಪನೆಯ ಕುಂಚದಲ್ಲಿ ಅರಳಲು ಸಾಧ್ಯ ಎಂದರು. ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉದಯವಾಣಿಯ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಧನೆಗೆ ಸಹಕಾರ
ಮುಖ್ಯ ಅತಿಥಿಯಾಗಿದ್ದ ನ್ಯೂ ಆರ್.ಎಚ್. ಸೆಂಟರ್‌ನ ಆಡಳಿತ ಪಾಲುದಾರೆ ಸೌಮ್ಯಾ ಎಂ.ಯು. ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಸಾಧನೆಯಾಗಿ ಪರಿವರ್ತಿಸಲು ಹೆತ್ತವರು, ಶಾಲೆಗಳ ಜತೆಗೆ ಸಮಾಜದ, ಸಂಸ್ಥೆಗಳ ಪಾಲುದಾರಿಕೆ ಬೇಕು. ಈ ಹಿನ್ನೆಲೆಯಲ್ಲಿ “ಉದಯವಾಣಿ’ ಕೈಜೋಡಿಸಿರುವುದು ಶ್ಲಾಘನೀಯ ಎಂದರು. ಅವಕಾಶ ವಿಸ್ತರಣೆ
ಉದಯವಾಣಿ ಮ್ಯಾಗಜಿನ್ ಆ್ಯಂಡ್ ಸ್ಪೆಷಲ್ ಇನಿಶಿಯೇಟಿವ್ಸ್ ರಾಷ್ಟ್ರೀಯ ಮುಖ್ಯಸ್ಥ ಆನಂದ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾಮಟ್ಟದಲ್ಲಿ ಉದಯವಾಣಿ ಆಯೋಜಿಸುತ್ತಿದ್ದ “ಚಿಣ್ಣರ ಬಣ್ಣ’ವನ್ನು 4 ವರ್ಷಗಳಿಂದ ತಾಲೂಕು ಮಟ್ಟಗಳಿಗೆ ವಿಸ್ತರಿಸಿ ಮಕ್ಕಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ತಾ| ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಜಿಲ್ಲಾ ಮಟ್ಟದಲ್ಲಿ ನ. 3ರಂದು ಮಂಗಳೂರಿನಲ್ಲಿ ಸ್ಪರ್ಧೆ ನಡೆಯಲಿದೆ ಎಂದರು. ತೆಂಕಿಲ ವಿವೇಕಾನಂದ ಆಂ.ಮಾ. ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ ಶುಭ ಹಾರೈಸಿದರು. ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್ ಸ್ಪರ್ಧೆ ಆಯೋಜನೆಯ ಉದ್ದೇಶ ವಿವರಿಸಿದರು. ಸೀನಿಯರ್ ವಿಭಾಗದ ಸ್ಪರ್ಧೆಗೆ ವಿಷಯದ ಆಯ್ಕೆಯನ್ನು ಚೀಟಿ ಎತ್ತುವ ಮೂಲಕ ಮಾಡಲಾಯಿತು. ವರದಿಗಾರ ರಾಜೇಶ್ ಪಟ್ಟೆ ಸ್ವಾಗತಿಸಿ, ಬಂಟ್ವಾಳ ಜಾಹೀರಾತು ವಿಭಾಗದ ಶ್ರೀವತ್ಸ ಸುದೆಂಬಳ ವಂದಿಸಿದರು. ವರದಿಗಾರ ಎನ್. ಕೆ. ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ಮಾರುಕಟ್ಟೆ ವಿಭಾಗದ ಸೀನಿಯರ್ ಮ್ಯಾನೇಜರ್ ಸತೀಶ್ ಮಂಜೇಶ್ವರ, ಡೆಪ್ಯೂಟಿ ಮ್ಯಾನೇಜರ್ ರವೀಶ್ ಕೊಕ್ಕಡ, ಪ್ರೊಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ್ ಅಜಿತ್ ಭಂಡಾರಿ, ಡೆಪ್ಯುಟಿ ಮ್ಯಾನೇಜರ್ ಯೋಗೀಶ್ ಡಿ., ಮಾರುಕಟ್ಟೆ ಮತ್ತು ಪ್ರಸರಣ ವಿಭಾಗದ ಜಯಂತ್ ಬಾಯಾರ್, ಉಮೇಶ್ ಶೆಟ್ಟಿ, ಹರ್ಷಿತ್ ಕುಮಾರ್, ಹರ್ಷ ಎ., ವಿಷು ಕುಮಾರ್, ಜಯಾನಂದ ಸಿ.ಎಚ್., ಶೈಲೇಶ್, ಶ್ರೀವತ್ಸ ಸುದೆಂಬಳ, ಶಿವಕುಮಾರ್, ಗುರು ಮುಂಡಾಜೆ, ಅನಂತ ನಾರಾಯಣ ಭಟ್ ಸಹಕರಿಸಿದರು. ಉತ್ತಮ ಸ್ಪಂದನೆ
ಸ್ಪರ್ಧೆಯ ಸ್ಥಳೀಯ ಪ್ರಾಯೋಜಕರಾಗಿ ಸೆಲ್ ಝೋನ್ ಮೊಬೈಲ್ ಮಳಿಗೆ, ರಾಧಾ’ಸ್, ಮುಖ್ಯ ಪ್ರಾಯೋಜಕರಾಗಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್, ಕ್ಯಾಂಪ್ಕೋ ಲಿ., ಹ್ಯಾಂಗ್ಯೋ ಐಸ್‌ಕ್ರೀಂ, ಮಾಡರ್ನ್ ಕಿಚನ್ಸ್ ಸಹಕರಿಸಿದರು. ವಿವೇಕಾನಂದ ಆಂ.ಮಾ. ಶಾಲೆಯಿಂದ ಕಾರ್ಯಕ್ರಮಕ್ಕೆ ಉಚಿತ ಸಭಾಭವನದ ವ್ಯವಸ್ಥೆ ಕಲ್ಪಿಸಲಾಗಿತ್ತು. 600ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.