Advertisement
ಬೆಳಗ್ಗಿನಿಂದಲೇ ಮುಷ್ಕರ ಆರಂಭಗೊಂಡಿದ್ದು, ತಾಲೂಕು ಕೇಂದ್ರದ ಪ್ರಮುಖ ಆಸ್ಪತ್ರೆಗಳಾದ ಕೆವಿಜಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಜ್ಯೋತಿ ಆಸ್ಪತ್ರೆ, ಎಸ್‌ವಿಎಂ ಸಹಿತ ಬಹುತೇಕ ಕ್ಲಿನಿಕ್‌ಗಳ ಸೇವೆ ಸ್ಥಗಿತಗೊಂಡಿದ್ದವು.
ಒಳರೋಗಿಗಳಾಗಿ ದಾಖಲಾತಿಗೊಂಡಿದ್ದ ರೋಗಿಗಳಿಗೆ ಚಿಕಿತ್ಸೆ ಮುಂದುವರಿಸಿದರೆ, ಹೆರಿಗೆ ಸಹಿತ ಅಪಘಾತದಂತಹ ತುರ್ತು ಚಿಕಿತ್ಸೆಗಳಿಗೆ ಮುಷ್ಕರದಲ್ಲಿ ವಿನಾಯಿತಿ ನೀಡಲಾಗಿತ್ತು. ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದರೂ ಕೂಡ ಪ್ರತಿಕೂಲ ಪರಿಣಾಮಗಳೇನೂ ಕಂಡುಬಂದಿಲ್ಲ. ರಜೆಯಲ್ಲಿದ್ದ ಎಲ್ಲ ಸರಕಾರಿ ಚಿಕಿತ್ಸಾ ಕೇಂದ್ರ ಗಳ ವೈದ್ಯರು ಮತ್ತು ಸಿಬಂದಿಯನ್ನು ಕರೆಸಿಕೊಂಡು ವೈದ್ಯಕೀಯ ಸೇವೆಗೆ ಸನ್ನದ್ಧವಾಗಿರಿಸಲಾಗಿತ್ತು. ಮುಷ್ಕರದ ಪರಿಣಾಮವಾಗಿ ಸುಳ್ಯ ತಾ| ಆಸ್ಪತ್ರೆಯಲ್ಲಿ ತುರ್ತುಚಿಕಿತ್ಸೆ ಸಹಿತ, ಹೊರ ರೋಗಿಗಳ ಸಂಖ್ಯೆ ಹೆಚ್ಚೇನೂ ಕಂಡು ಬಂದಿಲ್ಲ. ಹೊರರೋಗಿಗಳ ಸಂಖ್ಯೆ ಸರಾಸರಿ 250ರಷ್ಟಿದ್ದು, ಶುಕ್ರ ವಾರವೂ ಸುಮಾರು 270ರಷ್ಟು ಮಂದಿ ಸಂಖ್ಯೆ ಕಂಡುಬಂದಿದೆ ಎಂದು ಹಿರಿಯ ವೈದ್ಯರೋರ್ವರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ. ನ. 3ರಂದು ಬೆಳಗ್ಗೆ ಆರಂಭಗೊಂಡ ಮುಷ್ಕರ ನ. 4ರಂದು ಬೆಳಗ್ಗೆ 6 ಗಂಟೆಗೆ ಕೊನೆಗೊಳ್ಳಲಿದೆ.
Related Articles
ಸುಳ್ಯ, ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ ತಾಲೂಕು ಐಎಂಎ ಘಟಕದ 78 ಮಂದಿ ವೈದ್ಯ ಸದಸ್ಯರು ಮುಷ್ಕರವನ್ನು ಬೆಂಬಲಿಸಿದ್ದಾರೆ. ಬಂದ್ ಶೇ.100 ಯಶಸ್ವಿಯಾಗಿದೆ. ವೈದ್ಯರಿಗೆ ಮತ್ತು ವೈದ್ಯಕೀಯ ಸೇವೆ ಪಡೆಯಲಿರುವ ರೋಗಿಗಳಿಗೆ ಕೆಪಿಎಂ ತಿದ್ದುಪಡಿ ಕಾಯ್ದೆ ಮರಣಶಾಸನವಾಗಲಿದ್ದು, ಸರಕಾರ ಹಿಂದೆಗೆದುಕೊಳ್ಳಬೇಕು. ಮುಷ್ಕರವನ್ನು ಸರಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಮತ್ತೆ ಮುಷ್ಕರ ಹಮ್ಮಿಕೊಳ್ಳಲಿದ್ದೇವೆ ಎಂದು ಐ.ಎಂ.ಎ. ಅಧ್ಯಕ್ಷೆ ಡಾ| ಸಾಯಿಗೀತಾ ಅವರು ತಿಳಿಸಿದ್ದಾರೆ.
Advertisement