ಸುಳ್ಯ : ನಗರದಲ್ಲಿ ಸಬ್ ಜೈಲಿಗೆಂದು ಕಾದಿರಿಸಿದ ಜಮೀನು ಅತಿಕ್ರಮಣಗೊಂಡಿರುವ ಈ ಬಗ್ಗೆ ನ.ಪಂ. ಸದಸ್ಯ ಉಮ್ಮರ್ ಅವರು ತಾಲೂಕು ಕಚೇರಿಯಲ್ಲಿ ಬುಧವಾರ ಮಂಗಳೂರು ಲೋಕಾಯುಕ್ತ ಪೊಲೀಸರು ನಡೆಸಿದ ಸಾರ್ವಜನಿಕರ ಕುಂದುಕೊರತೆ ಸ್ವೀಕಾರದ ಸಂದರ್ಭ ಅಹವಾಲು ಸಲ್ಲಿಸಿದರು. ಈ ಬಗ್ಗೆ ಪರಿಶೀಲಿಸಿದ ಲೋಕಾಯುಕ್ತ ಇನ್‌ಸ್ಪೆಕ್ಟರ್ ವಿಜಯ ಪ್ರಸಾದ್, ತಹಶೀಲ್ದಾರ್ ಅವರಿಗೆ ಮನವಿ ಪ್ರತಿ ಸಲ್ಲಿಸಿ. ಲೋಕಾಯುಕ್ತ ಸಂಸ್ಥೆ ತಹಶೀಲ್ದಾರ್ ಅವರಿಂದ ಮಾಹಿತಿ ಪಡೆಯಲಿದೆ ಎಂದು ನುಡಿದರು.
ಪುತ್ಥಳಿ ನಿರ್ಮಾಣ: ನ.ಪಂ. ವಿರುದ್ಧ ದೂರು
ನಗರದ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಕೆವಿಜಿ ಪುತ್ಥಳಿ ನಿರ್ಮಾಣ ಕುರಿತು ನ.ಪಂ. ಕೈಗೊಂಡಿರುವ ತೀರ್ಮಾನದ ಬಗ್ಗೆ ಮಾಹಿತಿ ಕೇಳಿದ್ದರೂ ಸಮರ್ಪಕವಾಗಿ ನೀಡಿಲ್ಲ ಎಂದು ಆರ್ ಟಿಐ ಕಾರ್ಯಕರ್ತ ಡಿ.ಎಂ. ಶಾರೀಕ್ ದೂರು ನೀಡಿದರು. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿದ್ದರೂ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಪುತ್ಥಳಿ ಸ್ಥಾಪನೆ ಸ್ಥಳದಲ್ಲಿ ರಕ್ಷಣೆ ವ್ಯವಸ್ಥೆ ಇಲ್ಲದ ಕಾರಣ ಕಿಡಿಗೇಡಿಗಳು ಹಾನಿ ಉಂಟು ಮಾಡಿದಲ್ಲಿ ಅದರಿಂದ ಪುತ್ಥಳಿ ಪ್ರತಿನಿಧಿಸುವ ವ್ಯಕ್ತಿಗೂ ಅಗೌರವ ಉಂಟಾಗಲಿದೆ. ಅಲ್ಲಿ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಪುತ್ಥಳಿ ನಿರ್ಮಾಣಕ್ಕೆ ನ.ಪಂ. ಅನುಮತಿ ನೀಡಿದಲ್ಲಿ ಅದರ ಬಗ್ಗೆ ಮಾಹಿತಿ ಪಡೆದು ದೂರು ದಾಖಲಿಸುವಂತೆ ಲೋಕಾಯುಕ್ತ ಪೊಲೀಸರು ಸೂಚನೆ ನೀಡಿದರು.
ಪಂಜ ಹೋಬಳಿಯ ಏನೆಕಲ್ಲು ಗ್ರಾಮದ ದೇವರಹಳ್ಳಿಯ ಅಂಗ ವಿಕಲ ತಿರುಮಲೇಶ್ವರ ಅವರು, 8-09-2017ರಲ್ಲಿ ದೇವರಹಳ್ಳಿ ಬಳಿಯ ವಾಸ ಸ್ಥಳಕ್ಕೆ 94ಸಿ ಅಡಿ ಅರ್ಜಿ ಸಲ್ಲಿಸಿದ್ದರೂ ಮಂಜೂರಾತಿ ನೀಡಿಲ್ಲ ಎಂದು ಅಳಲು ತೋಡಿಕೊಂಡರು. ಈ ಬಗ್ಗೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ವಿಜಯ ಪ್ರಸಾದ್, ಪಂಜ ಕಂದಾಧಿಕಾರಿ ಬಳಿ ದೂರವಾಣಿ ಮೂಲಕ ಮಾಹಿತಿ ಪಡೆದರು. ಅರ್ಜಿ ಸಲ್ಲಿಸಿದ ಸ್ಥಳವು ದೇವರಹಳ್ಳಿ ಶಾಲಾ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಮಾಹಿತಿ ನೀಡಿದ ಕಂದಾಯ ಅಧಿಕಾರಿ, ಕಾನೂನು ಚೌಕಟ್ಟಿನಡಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು. ಅರ್ಜಿದಾರ ಅಂಗವಿಕಲತೆ ಹೊಂದಿರುವ ಕಾರಣ, ಅವರ ಮನೆಗೆ ಖುದ್ದು ಭೇಟಿ ನೀಡಿ ಪರಿಶೀಲಿಸುವಂತೆ ಲೋಕಾಯುಕ್ತ ಪೊಲೀಸರು ಕಂದಾಯ ಅಧಿಕಾರಿಗೆ ಸೂಚನೆ ನೀಡಿದರು.
ಕಲ್ಲುಗುಂಡಿಯ ಬಿ.ಜಿ.ನಾರಾಯಣ, ಈ ಹಿಂದೆ ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿದ್ದರೂ ಜಮೀನು ಮಂಜೂರಾತಿ ಆಗಿಲ್ಲ ಎಂದು ಅಹವಾಲು ತೋಡಿಕೊಂಡರು. ಐವತೊಕ್ಲು ಗ್ರಾಮದ ದೇವಿಪ್ರಸಾದ್, ವಿವಿಧೆಡೆ ಸರಕಾರಿ ಜಮೀನು ಅತಿಕ್ರಮಿಸಿ ಕೃಷಿ ಮತ್ತಿತರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಸಹಾಯಕ ಆಯಕ್ತರಿಗೆ, ತಹಶೀಲ್ದಾರ್ ಗೆ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ ಎಂದರು. ರುದ್ರಭೂಮಿಗೆ ಮೀಸಲಿಟ್ಟ ಜಾಗ ಅತಿಕ್ರಮಣದ ಬಗ್ಗೆ ಡಿ.ಎಂ. ಶಾರೀಕ್ ಅಹವಾಲು ಸಲ್ಲಿಸಿದರು. ಲೋಕಾಯುಕ್ತ ಪೊಲೀಸ್ ವಿಭಾಗದ ಶಶಿಧರ, ದೇವಯ್ಯ ಮೊದಲಾದವರು ಉಪಸ್ಥಿತರಿದ್ದರು.