Advertisement

ಹೂಳು ತುಂಬಿದ ಎಎಂಆರ್‌, ತುಂಬೆ ಡ್ಯಾಂ

04:23 AM May 05, 2019 | mahesh |

ಬಂಟ್ವಾಳ: ನೇತ್ರಾವತಿ ನದಿ ಶಂಭೂರು ಎಎಂಆರ್‌ ಡ್ಯಾಂನಲ್ಲಿ ಹೂಳು ತುಂಬಿಕೊಂಡಿದೆ. ಡ್ಯಾಂ ನಿರ್ಮಾಣದ ಸಂದರ್ಭ 8.9 ಮೀ. ನೀರು ನಿಲುಗಡೆ ಲೆಕ್ಕಾಚಾರವಿತ್ತು. ಪ್ರಸ್ತುತ ಅದರಲ್ಲಿ ಹೂಳು ತುಂಬಿಕೊಂಡು ಉಪಯೋಗಕ್ಕೆ ಸಿಗುವ ನೀರು ಕೇವಲ 6 ಮೀ. ಎಂಬುದಾಗಿ ಇಲ್ಲಿನ ಹೆಸರು ಹೇಳಲಿಚ್ಛಿಸದ ತಜ್ಞರೇ ಅಭಿಪ್ರಾಯಪಡುತ್ತಾರೆ. ನೀರು ಬರಿದಾಗಿರುವ ಕಾರಣಕ್ಕೆ ಅಪಾರ ಪ್ರಮಾಣ ದಲ್ಲಿ ಹೂಳು ತುಂಬಿರುವುದು ಗಮನಕ್ಕೆ ಬರುತ್ತದೆ.

Advertisement

ಅಂದರೆ 2.9ಮೀ. ಹೂಳು ಈಗಾಗಲೇ ತುಂಬಿ ಕೊಂಡಿದೆ. ನದಿಯ ಎರಡು ದಂಡೆಗಳು ಕೆಸರಿನಿಂದ ಆವೃತ್ತವಾಗಿವೆ. ಇದನ್ನು ತೆರವು ಮಾಡದೇ ಇದ್ದರೆ 2020-21ರ ಸಾಲಿಗೆ ನೀರಿನ ದಾಸ್ತಾನು ಕೇವಲ 5.05 ಮೀಟರ್‌ಗೆ ಬರಲಿದೆ ಎಂಬ ಆತಂಕವಿದೆ. ಈ ಹಿಂದೆ ಡ್ಯಾಂಗಿಂತ ಸುಮಾರು 1 ಕಿ.ಮೀ. ಮೇಲ್ಗಡೆ ನಿರ್ಮಾಣ ಆಗಿರುವ 2 ಮೀ. ಎತ್ತರದ ಸರಪಾಡಿ ಕಿರು ಡ್ಯಾಂನಲ್ಲಿ ಕುತ್ತಿಗೆ ಮಟ್ಟಕ್ಕೆ ಹೂಳು ತುಂಬಿದೆ. ಈಗ ನೀರು ನಿಲುಗಡೆ ಶೂನ್ಯವಾಗಿದೆ.

ತುಂಬೆಗೂ ಇದೇ ಸಮಸ್ಯೆ
ತುಂಬೆ ಡ್ಯಾಂ ಕೂಡಾ ಇದೇ ಸಮಸ್ಯೆ ಎದುರಿ ಸುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯ. ತುಂಬೆ ಹೊಸ ಡ್ಯಾಂನಿಂದ ಸುಮಾರು 100 ಮೀ. ಮೇಲ್ಗಡೆ 4 ಮೀ. ಎತ್ತರದ ಕಿರು ಡ್ಯಾಂ ಇದೆ. ಪ್ರಸ್ತುತ ಅದರ ಸುಮಾರು ಅರ್ಧದಷ್ಟು, ಅಂದರೆ ಎರಡು ಮೀಟರ್‌ ಎತ್ತರಕ್ಕೆ ಹೂಳು ತುಂಬಿದ್ದಾಗಿ ತರ್ಕಿಸುತ್ತಾರೆ. ನೀರು ಬರಿದಾದರೆ ಅದು ಕಾಣು ಸಿಗಲಿದೆ.

ನೀರಿನ ಮಟ್ಟ 4.54 ಮೀ.
ನೇತ್ರಾವತಿ ನದಿ ತುಂಬೆ ಡ್ಯಾಂನಲ್ಲಿ ಮೇ 4ರಂದು ಬೆಳಗ್ಗೆ ನೀರಿನ ಮಟ್ಟ 4.54 ಮೀ.ಗೆ ಕುಸಿದಿದೆ. ಮನಪಾ ಸೂಚನೆಯಂತೆ ಮೇ 1ರಂದು ಬೆಳಗ್ಗೆ 6ಕ್ಕೆ ಇಲ್ಲಿ ನೀರೆತ್ತುವುದನ್ನು ನಿಲ್ಲಿಸಲಾಗಿದೆ. ಬುಧವಾರ ಬೆಳಗ್ಗೆ ಸರಬರಾಜು ನಿಲುಗಡೆ ಆಗಿದ್ದರೂ ನೀರಿನ ಮಟ್ಟ ಏರಿಕೆ ಆಗದೆ ಯಥಾಸ್ಥಿತಿಯಲ್ಲಿತ್ತು. ನದಿ ಮೇಲ್ಗಡೆಯಿಂದ ನೀರಿನ ಹರಿವು ಸಂಪೂರ್ಣ ನಿಲುಗಡೆ ಆಗಿದೆ.

ತುಂಬಿದೆ ಹೂಳು
ಸ್ಥಳೀಯರ ಪ್ರಕಾರ ತುಂಬೆ ಡ್ಯಾಂನಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಮುಂದಿನ ದಿನಗಳಲ್ಲಿ ನೀರಿನ ಸಂಗ್ರಹದ ಸುಮಾರು 2.66 ಮೀಟರ್‌ ಸಿಗಬಹುದು ಎಂದು ತಜ್ಞ ಎಂಜಿನಿಯರ್‌ ತಿಳಿಸಿದ್ದಾರೆ. ತುಂಬೆ ಡ್ಯಾಂ ಹೂಳನ್ನು ತೆಗೆಸದಿದ್ದರೆ ಮುಂದಿನ 2 ವರ್ಷಗಳಲ್ಲಿ 6 ಮೀ. ಲೆಕ್ಕದಲ್ಲಿ ಕಾಣುವ ನೀರಿನ ಮಟ್ಟದಲ್ಲಿ 4 ಮೀಟರ್‌ ಮಟ್ಟಕ್ಕೆ ಹೂಳೇ ತುಂಬುವ ಮೂಲಕ ನೀರಿನ ಸಂಗ್ರಹ ಕುಸಿಯುವುದು ಎಂದಿದ್ದಾರೆ.

ಹೂಳೆತ್ತುವ ಪ್ರಕ್ರಿಯೆ

ತುಂಬೆ ಡ್ಯಾಂ ಒಳ ವ್ಯಾಪ್ತಿಯಲ್ಲಿ ಹೂಳೆತ್ತುವುದಕ್ಕೆ ಜಿಲ್ಲಾಧಿಕಾರಿ ಸೂಚನೆಯಂತೆ ಯೋಜನೆಯನ್ನು ರೂಪಿಸಿದ್ದು, ಟೆಂಡರ್‌ ಕರೆಯುವ ಪ್ರಕ್ರಿಯೆ ನಡೆದಿದೆ. ಸಹಾಯಕ -ನರೇಂದ್ರ ಶೆಣೈ, ಕಾರ್ಯಪಾಲಕ ಇಂಜಿನಿಯರ್‌ ಮನಪಾ, ಮಂಗಳೂರು
ಅಂತರ್ಜಲದ ಒರತೆ
ರೈತಾಪಿ ವರ್ಗದವರು ನದಿಯಿಂದ ಈಗಲೂ ನೀರೆತ್ತುತ್ತಿದ್ದು, ನೀರು ಪುನರಪಿ ಅಂತರ್ಜಲದ ಒರತೆಯಾಗಿ ನದಿ ಸೇರುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
-ಎಂ. ಸುಬ್ರಹ್ಮಣ್ಯ ಭಟ್, ಅಧ್ಯಕ್ಷರು, ತುಂಬೆ ಡ್ಯಾಂ ಹೋರಾಟ ಸಮಿತಿ
Advertisement

•ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next