ನಾಗಮಂಗಲ: ತಾಲೂಕಿನ ದೇವಲಾಪುರ ಮತ್ತು ಬೋಗಾದಿ ಮಾರ್ಗವಾಗಿ ಮಾಗಡಿಯಿಂದ ಮಡಿಕೇರಿಯ ಸೋಮವಾರಪೇಟೆವರೆಗೆ ನಿರ್ಮಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಭರವಸೆ ನೀಡಿದರು.
ತಾಲೂಕಿನ ಕಾಂತಾಪುರ ಗ್ರಾಮಕ್ಕೆ ಪಾಂಡವಪುರ ಉಪ ವಿಭಾಗಾಧಿಕಾರಿ ಶಿವಾನಂದ್ ಮತ್ತು ತಹಶೀಲ್ದಾರ್ ಎಂ.ವಿ.ರೂಪಾ ಮತ್ತು ಹೆದ್ದಾರಿ ಎಂಜಿನಿಯರ್‌ಗಳ ತಂಡದೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೈತರೊಂದಿಗೆ ಸಮಾಲೋಚಿಸಿದರು. ಕೆಶಿಪ್ ಯೋಜನೆಯಿಂದ ಹೆದ್ದಾರಿ ಅಕ್ಕಪಕ್ಕದಲ್ಲಿನ ಜಮೀನಿನ ಬೆಲೆ ಹೆಚ್ಚಾಗುವ ಜೊತೆಗೆ ರಸ್ತೆ ಪಕ್ಕದ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ. ರೈತರು ಆರ್ಥಿಕವಾಗಿ ಸದೃಢರಾಗಬಹುದು. ಕೆಶಿಪ್ ಯೋಜನೆಯಡಿ ಗುರುತಿಸ ಲಾಗಿರುವ ಜಮೀನಿಗೆ ಸರ್ಕಾರ ಸೂಕ್ತ ಬೆಲೆ ನೀಡುತ್ತಿದೆ. ರೈತರಿಗೆ ನಷ್ಟವಾಗುವುದಿಲ್ಲ. ಸರ್ಕಾರ ನೀಡುವ ಹಣದಲ್ಲಿ ಮತ್ತೂಂದೆಡೆ ಜಮೀನು ಖರೀದಿಸಬಹುದು. ರೈತರು ಆತಂಕಕ್ಕೆ ಒಳಗಾಗಬೇಡಿ. ಕೆಶಿಪ್ ಯೋಜನೆಯಡಿ ಕಾಮಗಾರಿ ಪ್ರಾರಂಭಿಸಲು ತೊಂದರೆ ಮಾಡದೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಮೀನು ಕಳೆದುಕೊಳ್ಳುತ್ತಿರುವ ವಿವಿಧ ಗ್ರಾಮಗಳ ರೈತರು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಗೊಂದಲ ಬಗೆಹರಿಸಿಕೊಂಡರು. ಜಿಲ್ಲಾಧಿಕಾರಿಗಳು ರೈತರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ರೈತರಿಗೆ ಧೈರ್ಯ ತುಂಬಿದರು.
ಕಣ್ಣೀರಿಟ್ಟ ಮಹಿಳೆ: ಹೆದ್ದಾರಿ ನಿರ್ಮಾಣದಿಂದ ಕಾಂತಾಪುರ ಗ್ರಾಮದ ಶಾರದಮ್ಮ ತಾನು ಮನೆ ಕಳೆದುಕೊಳ್ಳುತ್ತಿದ್ದೇನೆ. ಇದರಿಂದ ನನಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದು, ಮನೆ ಕಳೆದುಕೊಳ್ಳುವ ವಿಚಾರ ತಿಳಿದರೆ ಅನಾಹುತವಾಗಲಿದೆ ಎಂದು ಜಿಲ್ಲಾಧಿಕಾರಿಗಳ ಮುಂದೆ ಕಣ್ಣೀರಿಟ್ಟು ಗೋಳಾಡಿದರು.
ಮಾನವೀಯತೆ ಮೆರೆದ ಡೀಸಿ: ಶಾರದಮ್ಮನ ಗೋಳಾಟ ಕಂಡು ಮರುಗಿದ ಜಿಲ್ಲಾಧಿಕಾರಿ, ನೀವು ಅಳಬೇಡಿ. ನಿಮಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ನೀವು ವಾಸಿಸುತ್ತಿರುವುದು ಗೋಮಾಳದಲ್ಲಿ. ಆ ಸ್ಥಳಕ್ಕೆ ಹಕ್ಕುಪತ್ರ ನೀಡಲು ಬರುವುದಿಲ್ಲ. ಆದ್ದರಿಂದ ಇದಕ್ಕೆ ಸರ್ಕಾರದ ಪರಿಹಾರವೂ ಸಿಗುವುದಿಲ್ಲ. ನಿಮಗೆ ಗ್ರಾಪಂ ವತಿಯಿಂದ ನಿವೇಶನ ಕಲ್ಪಿಸಲಾಗುವುದು ಎಂದು ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಗ್ರಾಪಂ ನಿವೇಶನ ನೀಡಿ, ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ವ್ಯವಸ್ಥೆ ಮಾಡುವಂತೆ ಆದೇಶಿಸಿದರು.