ಧಾರವಾಡ: ಕೋವಿಡ್ ಲಾಕ್‌ಡೌನ್ ನಿಂದ ಸಂಕಷ್ಟ ಅನುಭವಿಸುತ್ತಿರುವ ಅಸಂಘಟಿತ ಶ್ರಮಿಕರಿಗೆ ಪರಿಹಾರ ನೀಡುವುದರ ಜೊತೆಗೆ ರೈತರ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ನೇತೃತ್ವದಲ್ಲಿ ಜೆಡಿಎಸ್ ವತಿಯಿಂದ ಜಿಲ್ಲಾಡಳಿತದ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಕೆಲಸವಿಲ್ಲದೇ ಬದುಕು ಸಾಗಿಸಲು ಕಂಗಾಲಾಗಿರುವ ಅಸಂಘಟಿತ ಕಾರ್ಮಿಕ ವರ್ಗದ ಟೇಲರ್, ಬಡಿಗೇರ, ಕುಂಬಾರ, ಎಲೆಕ್ಟ್ರೀಷಿಯನ್, ಪೇಂಟರ್, ಪ್ಲಂಬರ್, ಹಮಾಲರು, ಹಣ್ಣು ಮಾರುವವರು, ಪ್ರಿಂಟಿಂಗ್ ಪ್ರಸ್ ಕಾರ್ಮಿಕರು, ಬಾರ್ ಬೆಂಡರ್, ಗೌಂಡಿಗಳು, ಕಲಾವಿದರು, ಕಲ್ಲು ಒಡೆಯುವವರು ಚಮ್ಮಾರರು ಸೇರಿದಂತೆ ಸಂಕಷ್ಟದಲ್ಲಿರುವ ಎಲ್ಲ ಕಾರ್ಮಿಕ ವರ್ಗಕ್ಕೂ ಪರಿಹಾರ ಘೋಷಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗೋವಿನಜೋಳ (ಮೆಕ್ಕೇಜೋಳ) ಖರೀದಿಸಲು ಏ.30 ರಂದು ಸರ್ಕಾರ 1760ರೂ. ಬೆಂಬಲ ಬೆಲೆ ಘೋಷಣೆ ಮಾಡಿ 12 ದಿನ ಕಳೆದರೂ ಕೆಎಂಎಫ್ ಖರೀದಿ ಪ್ರಕ್ರಿಯೆ ಪ್ರಾರಂಭಿಸಿಲ್ಲ. ಸರ್ಕಾರ ಕರ್ನಾಟಕ ಹಾಲು ಮಹಾಮಂಡಳಿಯು ರೈತರಿಂದ ನೇರವಾಗಿ 22 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ನಿರ್ಧರಿಸಿದೆ. ಆದರೆ ಇಲ್ಲಿಯ ವರೆಗೆ ಕೆಎಂಎಫ್ ರೈತರಿಂದ ಖರೀದಿಸಿಲ್ಲ. ಈಗಾಗಲೇ ಕಡಲೆ ಖರೀದಿಯಲ್ಲಿ ಆದ ತೊಂದರೆ, ಗೋವಿನಜೋಳಕ್ಕೂ ಅನ್ವಯಿಸುತ್ತಿದೆ. ಇನ್ನು ಎರಡ್ಮೂರು ದಿನದಲ್ಲಿ ಖರೀದಿ ಪ್ರಕ್ರಿಯೇ ಆರಂಭಿಸದಿದ್ದರೆ ಜೆಡಿಎಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.
ಕೋವಿಡ್ ದಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ಹೆಸ್ಕಾನಿಂದ ಕಳೆದ ತಿಂಗಳ ಬಿಲ್‌ಗಿಂತ ದುಪ್ಪಟ್ಟು ಬಿಲ್ಲು ನೀಡಲಾಗಿದೆ. ಕೆಲವರು ಈಗಾಗಲೇ ಈ ಹಣ ಪಾವತಿ ಮಾಡಿದ್ದಾರೆ. ಇನ್ನು ಕೆಲವರು ಪಾವತಿ ಮಾಡಿಲ್ಲ. ತಕ್ಷಣ ಹೆಸ್ಕಾಂ ಸಂಸ್ಥೆ ಇದನ್ನು ಸರಿ ಪಡಿಸಬೇಕು ಎಂದು ಕೋರಲಾಗಿದೆ. ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಗುರುರಾಜ ಹುಣಸೀಮರದ, ಹುಬ್ಬಳ್ಳಿ ತಾಲೂಕಾಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಮುಖಂಡರುಗಳಾದ ರಾಜು ಅಂಬೋರೆ, ಸಿದ್ಧು ತೇಜಿ, ದೇವರಾಜ ಕಂಬಳಿ, ಎಂ.ವಿ. ಹೊಸೂರ, ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶ ದಾಸನೂರ, ಮಲ್ಲಿಕಾರ್ಜುನ ಬೆಳವಟಗಿ, ದೊಡ್ಡೇಶ ಶಿರಗುಪ್ಪಿ ಇದ್ದರು.