ಬಳ್ಳಾರಿ: ಎನ್‌ಎಸ್‌ಎಲ್ ಶುಗರ್ ಕಾರ್ಖಾನೆಯಲ್ಲಿ ಲಭ್ಯವಿರುವ ಕಬ್ಬು ಕಟಾವು ಮಾಡುವ ಗ್ಯಾಂಗ್‌ಗಳನ್ನು ಕ್ರೋಢಿಕರಿಸಿ ಡಿ.12ರಿಂದ ಅಕ್ಟೋಬರ್-2017 ಮತ್ತು ನವೆಂಬರ್-2017ರಲ್ಲಿ ಬಿತ್ತನೆ ಮಾಡಿದ ರೈತರ ಕಬ್ಬು ಕಟಾವು ಪ್ರಾರಂಭ ಮಾಡತಕ್ಕದ್ದು. ಯಾವುದೇ ಕಾರಣಕ್ಕೂ ನಿರ್ಲಕ್ಷ ತೋರದೇ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ಖಡಕ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಕಬ್ಬು ಬೆಳೆಗಾರರ ಸಂಘದ ಮುಖಂಡರು ಹಾಗೂ ವಿವಿಧ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಡಿ.15ರಿಂದ ಮೈಲಾರ್ ಶುಗರ್ನವರು 5 ಕಬ್ಬು ಕಟಾವು ಮಾಡುವ ಗ್ಯಾಂಗ್, ವಿಜಯನಗರ ಶುಗರ್ 5, ಶಾಮನೂರು ಶುಗರ್ 10, ಕೋರ್ ಗ್ರೀನ್ ಶುಗರ್ 10 ಹಾಗೂ ದಾವಣಗೆರೆ ಶುಗರ್ 10 ಕಬ್ಬು ಕಟಾವು ಮಾಡುವ ಗ್ಯಾಂಗ್‌ಗಳನ್ನು ಎನ್‌ಎಸ್‌ಎಲ್ ಶುಗರ್ ಕಾರ್ಖಾನೆಯ ನೋಂದಾಯಿತ ರೈತರ ಕಬ್ಬು ಕಟಾವು ಮಾಡಲು ಎನ್‌ಎಸ್‌ಎಲ್ ಶುಗರ್ರವರು ತಯಾರಿಸಿದ ರೈತರ ಪಟ್ಟಿ ಪ್ರಕಾರ ನಿಯೋಜಿಸತಕ್ಕದ್ದು ಎಂದು ಅವರು ಸೂಚಿಸಿದರು.
ಈ ವಿವಿಧ ಸಕ್ಕರೆ ಕಾರ್ಖಾನೆಗಳಿಗೆ ಕಟಾವು ಮಾಡಿದ ಕಬ್ಬು ಪೂರೈಸುವ ಸಾಗಾಣಿಕೆ ವೆಚ್ಚ ಹಾಗೂ ಟೋಲ್‌ಗೇಟ್ ಶುಲ್ಕ ಮತ್ತು ಇತರೆ ಖರ್ಚುಗಳನ್ನು ದೇಶನೂರು ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಭರಿಸುವುದಕ್ಕೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಇದಕ್ಕೆ ಎನ್‌ಎಸ್‌ಎಲ್ ಕಾರ್ಖಾನೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು. ಹಿಂದಿನ ವರ್ಷದ ರೈತರಿಗೆ ನೀಡಬೇಕಾದ ಬಾಕಿ ಹಣವನ್ನು ಈ ವರ್ಷದ ಕಬ್ಬು ಸಾಗಾಣಿಕೆ ಮಾಡುವಲ್ಲಿ ಬರುವ ವ್ಯತ್ಯಾಸದ ಮೊತ್ತವನ್ನು ರೈತರೊಗೆ ಭರಿಸಿದ ನಂತರ ನೀಡತಕ್ಕದ್ದು ಎಂದು ತಿಳಿಸಿದ ಅವರು ರೈತರಿಗೆ ಸಾಗಾಣಿಕೆ ವ್ಯತ್ಯಾಸದ ಮೊತ್ತ ಹಾಗೂ ಇತರೆ ಬಾಕಿ ಸಂಪೂರ್ಣವಾಗಿ ಭರಿಸಿದ ನಂತರ ಎನ್ ಎಸ್‌ಎಲ್ ಶುಗರ್ ಕಾರ್ಖಾನೆಯವರು ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಎನ್‌ಎಸ್‌ಎಲ್ ಶುಗರ್ ಕಾರ್ಖಾನೆಯವರು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳು ರೈತರೊಂದಿಗೆ ಸಹಕರಿಸಿ ನಿಗದಿತ ಸಮಯದಲ್ಲಿ ರೈತರ ಕಬ್ಬಿನ ಕಟಾವು ಮತ್ತು ಸಾಗಾಣಿಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಿ ಎಲ್ಲ ರೈತರ ಕಬ್ಬು ಕಟಾವು ಮುಕ್ತಾಯಗೊಳ್ಳುವವರೆಗೆ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯವರು ಸಿಬ್ಬಂದಿಯವರ ಸಮಕ್ಷಮ ಹಾಗೂ ಜವಾಬ್ದಾರಿಯಲ್ಲಿ ಕಬ್ಬು ಕಟಾವು ಹಾಗೂ ಸಾಗಣಿಕೆಗೆ ಕ್ರಮ ಕೈಗೊಳ್ಳತಕ್ಕದ್ದು ಎಂದರು.
ಸಭೆಯಲ್ಲಿ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ, ಮೈಲಾರ ಶುಗರ್, ವಿಜಯನಗರ ಶುಗರ್, ದಾವಣಗೆರೆ ಶುಗರ್, ಶಾಮನೂರು ಶುಗರ್,ಕೋರಗ್ರೀನ್ ಶುಗರ್ ಪ್ರತಿನಿಧಿಗಳು, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು ಮತ್ತು ಮುಖಂಡರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.
ಕಬ್ಬು ಕಟಾವಿಗೆ ಮೊದಲು ನಾಟಿ ಮಾಡಿದವರಿಗೆ ಆದ್ಯತೆ
ಕಬ್ಬು ನಾಟಿ ಮಾಡಿದ ಪ್ರಕಾರ ಕಬ್ಬು ಕಟಾವಿನ ಪರ್ಮಿಟ್‌ನ್ನು ಕಾರ್ಖಾನೆಯಿಂದ ಪರಿಶೀಲಿಸಿ ಮೊದಲು ನಾಟಿ ಮಾಡಿದವರಿಗೆ ಮೊದಲ ಆದ್ಯತೆ ಪ್ರಕಾರ ಕೊಡತಕ್ಕದ್ದು ಎಂದು ತಿಳಿಸಿದರು. ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ನೋಂದಾಯಿತ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ
ಸಾಗಿಸುವಾಗ ಸಂಬಂಧಿಸಿದ ರೈತರು ಕಬ್ಬನ್ನು ಸ್ವೀಕರಿಸುವ ಕಾರ್ಖಾನೆಯವರೆಗೆ ಸಂಬಂಧಿಸಿದ ವಾಹನದಲ್ಲಿ ಖುದ್ದಾಗಿ ಇದ್ದು, ಕಬ್ಬಿನ ತೂಕವನ್ನು ಸ್ವೀಕರಿಸುವ ಕಾರ್ಖಾನೆಯಲ್ಲಿಯೇ ತೂಕ ಮಾಡಿಸಿ ರೈತರು ದೃಢೀಕರಿಸಿಕೊಂಡು ರಸೀದಿಯನ್ನು ಕಾರ್ಖಾನೆ ವತಿಯಿಂದ ಪಡೆಯತಕ್ಕದ್ದು.
ಸಾಮಾನ್ಯವಾಗಿ ರೈತರ ಜಮೀನಿನಲ್ಲಿ ವಾಹನಕ್ಕೆ ಕಬ್ಬು ಲೋಡ್ ಆದ ನಂತರ 08-12 ಗಂಟೆಗಳೊಳಗಾಗಿ ಕಬ್ಬು ಸ್ವೀಕರಿಸುವ ಕಾರ್ಖಾನೆಗಳು ತೂಕ ಮಾಡಿ ರೈತರಿಗೆ ರಸೀದಿ ನೀಡತಕ್ಕದ್ದು. ಒಂದು ವೇಳೆ ಸ್ವೀಕರಿಸುವ ಕಾರ್ಖಾನೆಯವರು ಟೋಕನ್ ಪದ್ಧತಿ ವ್ಯವಸ್ಥೆ ಅನುಸರಿಸುತ್ತಿದ್ದಲ್ಲಿ ಅದೇ ಪದ್ಧತಿ ಅನುಸರಿಸಿ ತೂಕ ಮಾಡತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.