ಸಂಬರಗಿ: ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಇನ್ನೇನು ಆರಂಭವಾಗಲಿದ್ದು, ಆದರೆ ಎಲ್ಲ ಕಾರ್ಖಾನೆಗಳಿಗೆ ಕಬ್ಬು ಕೊರತೆ ಕಾಡಲಿದೆ. ಅಥಣಿ-ಕಾಗವಾಡ ತಾಲೂಕಿನಲ್ಲಿ 80 ರಿಂದ 90 ಲಕ್ಷ ಟನ್ ಕಬ್ಬು ಬೆಳೆಯುವ ಕ್ಷೇತ್ರ ಇದೆ. ಮಳೆ ಕೊರತೆಯಿಂದ ಕಳೆದ ಮೂರು ವರ್ಷಗಳಿಂದ ಕಬ್ಬು ಉತ್ಪಾದನೆಯಲ್ಲಿ ಕುಂಠಿತವಾಗುತ್ತಿದೆ. ಆದರೂ ಪ್ರತಿ ವರ್ಷ ಸರಾಸರಿ 75-80 ಲಕ್ಷ ಟನ್ ಕಬ್ಬು ಉತ್ಪಾದನೆಯಾಗುತ್ತಿತ್ತು.
ಈ ವರ್ಷ ಮಳೆ ಕೊರತೆಯಿಂದ ಕೇವಲ ಸುಮಾರು 40-50 ಲಕ್ಷ ಟನ್ ಕಬ್ಬು ಇಳುವರಿ ಬರುವ ಸಾಧ್ಯತೆ ಇದೆ. ಅವಳಿ ತಾಲೂಕಲ್ಲಿ ಆರು ಸಕ್ಕರೆ ಕಾರ್ಖಾನೆಗಳು ಹಾಗೂ ತಾಲೂಕಿಗೆ ಹೊಂದಿ ಆರು ಸಕ್ಕರೆ ಕಾರ್ಖಾನೆಗಳಂತೆ ಒಟ್ಟು 12 ಸಕ್ಕರೆ ಕಾರ್ಖಾನೆಗಳು ಇಲ್ಲಿ ಬೆಳೆಯುವ ಕಬ್ಬನ್ನೇ ಅವಲಂಬಿಸಿವೆ. ತಾಲೂಕಿನ ಸಕ್ಕರೆ ಕಾರ್ಖಾನೆಗಳು ತಮ್ಮ ಕಬ್ಬು ನುರಿಸುವ ಗುರಿ ಮುಟ್ಟಲು ಕನಿಷ್ಠ 90-100 ಲಕ್ಷ ಟನ್ ಕಬ್ಬಿನ ಅವಶ್ಯಕತೆ ಬೀಳುತ್ತದೆ. ಅಲ್ಪ ಸ್ವಲ್ಪ ಬೆಳೆದ ಕಬ್ಬು ಬೆಳೆಗೆ ಒಳ್ಳೆಯ ದರ ನೀಡುವ ಕಾರ್ಖಾನೆಗೆ ಕಬ್ಬು ಕಳುಹಿಸಲು ರೈತರು ಸಜ್ಜಾಗಿದ್ದಾರೆ.
ಗಡಿ ಭಾಗದ ಸಂಬರಗಿ, ಮದಭಾವಿ, ಜಂಬಗಿ, ವಿಷ್ಣುವಾಡಿ, ಹಣಮಾಪೂರ, ಕಲ್ಲೂತಿ, ಗುಂಡೇವಾಡಿ ಸೇರಿದಂತೆ ಈ ಭಾಗದ ಹಲವಾರು ಗ್ರಾಮಗಳಿಗೆ ಕೃಷ್ಣಾನದಿಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸಿದರೂ ಬೇಸಿಗೆಯಲ್ಲಿ ಕೃಷ್ಣಾನದಿ ಬತ್ತಿದಾಗ ಈ ಭಾಗದ ಬಹುತೇಕ ರೈತರ ಕಬ್ಬು ಒಣಗಿ ಜಾನುವಾರುಗಳಿಗೆ ಮೇವಾಗಿದೆ. ಈ ಪ್ರದೇಶದಲ್ಲಿ ಪ್ರತಿ ವರ್ಷ ಸುಮಾರು 10-15 ಲಕ್ಷ ಟನ್ ಕಬ್ಬು ಉತ್ಪಾದನೆಯಾಗುತ್ತಿತ್ತು. ಈ ವರ್ಷ ಕೇವಲ 1ಲಕ್ಷ ಟನ್ ದೊರಕುವ ಅಂದಾಜಿದೆ.
ಕೃಷ್ಣಾ ನದಿಗೆ ನೀರು ಬಂದ ನಂತರ ನದಿ ಅಕ್ಕಪಕ್ಕದ ರೈತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಇಲ್ಲಿ ಕಬ್ಬಿನ ಇಳುವರಿ ಎಕರೆಗೆ
20-30 ಟನ್ ಬರುವ ಸಾಧ್ಯತೆ ಇದೆ.
ಈ ಭಾಗದ ಕಬ್ಬನ್ನೇ ಅವಲಂಬಿಸಿದ ಕಾರ್ಖಾನೆಗಳು ಅಥಣಿ ಹಾಗೂ ಕಾಗವಾಡ ತಾಲೂಕಿನ ರೇಣುಕಾ ಶುಗರ್, ಕೃಷ್ಣಾ ಶುಗರ್, ಬಸವೇಶ್ವರ ಶುಗರ್ ಬಳ್ಳಿಗೇರಿ, ಅಥಣಿ ಶುಗರ್, ಉಗಾರ ಶುಗರ್, ಶಿರಗುಪ್ಪಿ ಶುಗರ್ ಹಾಗೂ ತಾಲೂಕಿಗೆ ಹೊಂದಿರುವ ಮಹಾರಾಷ್ಟ್ರದ ಜತ್ತ, ಢಪಳಾಪೂರ, ಆರಗ, ಶಿರೋಳ ಹಾಗೂ ಸಾಯಿಪ್ರಿಯಾ ಶುಗರ್, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಶುಗರ್, ಚಿಕ್ಕೋಡಿಯ ಶಿವಶಕ್ತಿ ಶುಗರ್ ಕಾರ್ಖಾನೆಗಳು ಈ ಭಾಗದ ಕಬ್ಬನ್ನೇ ಅವಲಂಬಿಸಿವೆ.
ಈ ವರ್ಷ ಕಬ್ಬು ನೀರಿಲ್ಲದೆ ಒಣಗಿ ಹೋಗಿದೆ. ಸರಕಾರ ಹಾನಿ ಸರ್ವೇ ಮಾಡಿ ಪ್ರತಿ ಎಕರೆಗೆ 25 ಸಾವಿರ ಸಹಾಯಧನ ನೀಡಿ ರೈತರ ಉಪಜೀವನಕ್ಕೆ ಅನುವು ಮಾಡಿಕೊಡಬೇಕು. ಈ ವರ್ಷ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂಪಾಯಿ ದರ ಘೋಷಣೆ ಮಾಡಬೇಕು.
ಮುರಗೇಶ ಕನಕರಡ್ಡಿ, ರೈತ ಮುಖಂಡ
ಈ ವರ್ಷ 66 ಸಾವಿರ ಹೆಕ್ಟೇರ್ ಕಬ್ಬು ಇದ್ದು, ಸುಮಾರು 50 ಲಕ್ಷ ಟನ್ ಕಬ್ಬು ಇಳುವರಿ ಬರುವ ಸಾಧ್ಯತೆ ಇದೆ. ಈಗಾಗಲೇ
ಹಾನಿ ಸರ್ವೇ ಮಾಡಲಾಗುತ್ತಿದೆ. ಸರ್ವೇ ಪೂರ್ಣಗೊಳಿಸಿದ ಬಳಿಕ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು.
*ನಿಂಗಣ್ಣಾ ಬಿರಾದಾರ
ಕೃಷಿ ಸಹಾಯಕ ನಿರ್ದೇಶಕರು, ಅಥಣಿ
*ಸುಭಾಷ ಕಾಂಬಳೆ