Advertisement
ಭಾರತದಲ್ಲಿ ಆರ್ಥಿಕತೆ, ನೀರಿನ ಲಭ್ಯತೆ ಮತ್ತು ರಾಜಕೀಯ ಚದುರಂಗ- ಇವು ಮೂರರ ಮೇಲೆ ಪರಿಣಾಮ ಬೀರುವ ಒಂದೇ ಒಂದು ಬೆಳೆ ಕಬ್ಬು. ಕಬ್ಬಿನ ಕೃಷಿಗೆ ನಮ್ಮ ದೇಶದಲ್ಲಿ 2,000 ವರುಷಗಳ ಇತಿಹಾಸ. ಜಗತ್ತಿನಲ್ಲಿ ಮೊಟ್ಟಮೊದಲಾಗಿ ಕಬ್ಬು ಬೆಳೆದ ಮತ್ತು ಸಕ್ಕರೆ ತಯಾರಿಸಿದ ದೇಶ ನಮ್ಮದು. ಈಗಂತೂ, ಬ್ರೆಜಿಲ್‌ನ ನಂತರ ಅತ್ಯಧಿಕ ಸಕ್ಕರೆ ಉತ್ಪಾದಿಸುವ ದೇಶ ಎಂಬ ಹೆಗ್ಗಳಿಕೆ ನಮ್ಮದು.
Related Articles
Advertisement
ಸಕ್ಕರೆ ಉದ್ಯಮ ಮತ್ತು ಸರಕಾರಗಳ ನಡುವಿನ ಅನಾರೋಗ್ಯಕರ ಸಂಬಂಧದ ಪರಿಣಾಮವಾಗಿ ಅನೇಕ ನೋಟಿಫಿಕೇಷನುಗಳು ಮತ್ತು ಕಾಯಿದೆಗಳು ಜಾರಿಯಾಗಿವೆ. ಸರಕಾರಗಳು ಏನು ಮಾಡುತ್ತವೆ? ಕಬ್ಬಿನ ಮತ್ತು ಸಕ್ಕರೆಯ ಬೆಲೆಯನ್ನು ನಿರ್ಧರಿಸುತ್ತವೆ. ಚುನಾವಣೆಗಳು ಮತ್ತು ಕಬ್ಬಿನ ಕೃಷಿಕರು ಹಾಗೂ ಸಕ್ಕರೆ ಉದ್ಯಮವನ್ನು ಆರ್ಥಿಕವಾಗಿ ಬೆಂಬಲಿಸುವ ಘೋಷಣೆಗಳ ನಡುವಿನ ಸಂಬಂಧ ಎದ್ದು ಕಾಣುತ್ತದೆ.
ಈ ನಿಟ್ಟಿನಲ್ಲಿ, 2019ರ ಲೋಕಸಭಾ ಚುನಾವಣೆಯ ಮುನ್ನ, ಕೆಲವು ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸರಕಾರ ಕೈಗೊಂಡಿತು. ಜನವರಿ 2019ರಲ್ಲಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು 29ರಿಂದ 31ಕ್ಕೆ ಹೆಚ್ಚಿಸಲಾಯಿತು. ಸಕ್ಕರೆ ಉದ್ಯಮ ಇದನ್ನು ಸ್ವಾಗತಿಸಿತು. ಜೊತೆಗೆ, 2019ರ ಫೆಬ್ರವರಿಯಲ್ಲಿ ಕೇಂದ್ರ ಸರಕಾರ 10,540 ಕೋಟಿ ರೂ. ಸುಲಭ ಷರತ್ತಿನ ಸಾಲವನ್ನು ಸಕ್ಕರೆ ಕಾರ್ಖಾನೆಗಳಿಗೆ ಮಂಜೂರು ಮಾಡಿತು – ಕಬ್ಬು ಬೆಳೆಗಾರರಿಗೆ ಬಾಕಿ ಮಾಡಿರುವ ಕಬ್ಬಿನ ಹಣದ ಪಾವತಿಗಾಗಿ.
ಅದಕ್ಕಿಂತ ಮುಂಚೆ, ಜೂನ್ 2018ರಲ್ಲಿ, ದಾಖಲೆ ಸಕ್ಕರೆ ಉತ್ಪಾದನೆಯ ಸನ್ನಿವೇಶದಲ್ಲಿ, ಸಕ್ಕರೆ ಕಾರ್ಖಾನೆಗಳಿಗೆ 8,500 ಕೋಟಿ ರೂ. ಮೌಲ್ಯದ ಆರ್ಥಿಕ ಬೆಂಬಲ ಕಾರ್ಯಕ್ರಮವನ್ನು ಕೇಂದ್ರ ಸರಕಾರ ಘೋಷಿಸಿತು. ಇದರಲ್ಲಿ 4,440 ಕೋಟಿ ರೂ. ಸಕ್ಕರೆ ಕಾರ್ಖಾನೆಗಳಿಗೆ ಸುಲಭ ಷರತ್ತಿನ ಸಾಲ- ಇಥನಾಲ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಿಕ್ಕಾಗಿ. ಅದಲ್ಲದೆ, ಕಬ್ಬು ಖರೀದಿಗಾಗಿ ಟನ್ನಿಗೆ 138.80 ರೂ. ಸಹಾಯವನ್ನೂ ನೀಡಲಾಯಿತು; ಇದಕ್ಕಾಗಿ ಕೇಂದ್ರ ಸರಕಾರ ಮಾಡಿದ ವೆಚ್ಚ 4,100 ಕೋಟಿ ರೂಪಾಯಿ. ಜೊತೆಗೆ, 3 ದಶಲಕ್ಷ ಟನ್ ಸಕ್ಕರೆಯ ಹೆಚ್ಚುವರಿ ದಾಸ್ತಾನು ಇಟ್ಟುಕೊಳ್ಳಲು ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರ ಸರಕಾರ ಅನುಮತಿ ನೀಡಿ, ಅದಕ್ಕಾಗಿ 1,175 ಕೋಟಿ ರೂ. ಒದಗಿಸಿತು.
2014ರ ಲೋಕಸಭಾ ಚುನಾವಣೆಯ ಮುಂಚೆಯೂ ಹೀಗೆಯೇ ಆಗಿತ್ತು. ಆಗಿನ ಕೇಂದ್ರ ಸರಕಾರವು ಸಕ್ಕರೆ ಕಾರ್ಖಾನೆಗಳಿಗೆ 2013ರಲ್ಲಿ 7,200 ಕೋಟಿ ರೂ. ಬಡ್ಡಿರಹಿತ ಸಾಲ ನೀಡಿತ್ತು- ಕಬ್ಬು ಬೆಳೆಗಾರರಿಗೆ ಬಾಕಿ ಮಾಡಿದ್ದ ಹಣದ ಪಾವತಿಗಾಗಿ.ಕೇಂದ್ರ ಸರಕಾರ ಈ ಎಲ್ಲ ಕ್ರಮ ಜಾರಿ ಮಾಡಿದರೂ, ಕಬ್ಬು ಬೆಳೆಗಾರರ ಬವಣೆ ತಪ್ಪಿಲ್ಲ. ತಮ್ಮ ಅಧಿಕಾರವನ್ನು ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಹೇಗೆ ದುರುಪಯೋಗ ಪಡಿಸುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ: 2004 – 2005ರಲ್ಲಿ ಆಗಿನ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ತೆಗೆದುಕೊಂಡ ವಿವಾದಾಸ್ಪದ ನಿರ್ಧಾರ. ಅವರು ಸಕ್ಕರೆ ರಫ್ತಿಗೆ ಒಪ್ಪಿಗೆ ನೀಡಿದರು; ಅದೇ ಸಮಯದಲ್ಲಿ ಬ್ರೆಜಿಲ್‌ನಿಂದ ಸಕ್ಕರೆ ಆಮದಿಗೂ ಒಪ್ಪಿಗೆ ನೀಡಿದರು. ಅಂದರೆ ಕಡಿಮೆ ಬೆಲೆಗೆ ಸಕ್ಕರೆ ಮಾರಾಟ ಮತ್ತು ಹೆಚ್ಚಿನ ಬೆಲೆಗೆ ಸಕ್ಕರೆ ಖರೀದಿ! ಇದರಿಂದಾಗಿ ಸರಕಾರಕ್ಕೆ ಭಾರೀ ನಷ್ಟವಾಯಿತು. ಗಮನಿಸಿ: ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘಟನೆಯ ಈಗಿನ ಅಧ್ಯಕ್ಷ ರೋಹಿತ್ ಪವಾರ್, ಎನ್‌ಸಿಪಿಯ ನಾಯಕ ಶರದ್ ಪವಾರ ಅವರ ಹತ್ತಿರದ ಸಂಬಂಧಿ. ಕೇಂದ್ರ ಸರಕಾರ ಕೋಟಿಗಟ್ಟಲೆ ಸಾಲ ನೀಡಿದರೂ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಕಬ್ಬಿನ ಬಾಕಿ ಹಣ ಪಾವತಿಸಿಲ್ಲ. ಬೆಳೆದು ನಿಂತಿರುವ ಕಬ್ಬಿನ ಬೆಳೆಯನ್ನು ಯಾವಾಗ ಕಟಾವು ಮಾಡಬೇಕು ಎಂಬುದೇ ಕಬ್ಬು ಬೆಳೆಗಾರರ ದೊಡ್ಡ ಸಮಸ್ಯೆ. ಯಾಕೆಂದರೆ, ಕಟಾವು ಮಾಡಿ ಒಂದೇ ದಿನದಲ್ಲಿ ಕಬ್ಬು ಕೊಳೆಯಲು ಆರಂಭಿಸುತ್ತದೆ. ಆಗ ಕಬ್ಬು ಬೆಳೆಗಾರರು ಕಬ್ಬನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಬೇಕಾಗುತ್ತದೆ. ಒಟ್ಟಿನಲ್ಲಿ ಸರಕಾರದ ರಾಜಕೀಯದಿಂದಾಗಿ ಕಬ್ಬು ಬೆಳೆಗಾರರ ಸಂಕಟ ಹೆಚ್ಚುತ್ತಿದೆ. – ಅಡ್ಡೂರು ಕೃಷ್ಣ ರಾವ್