Advertisement

ದಿವಾಳಿಯತ್ತ ಮೈಷುಗರ್‌ ಕಾರ್ಖಾನೆ?

12:48 PM Dec 23, 2021 | Team Udayavani |

ಮಂಡ್ಯ: ಸರ್ಕಾರ ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸಲಾಗುವುದು ಎಂದು ಘೋಷಣೆ ಮಾಡಿದ ನಂತರ ಕಾರ್ಖಾನೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ರೈತರಿಗೆ ತಿಳಿಯುತ್ತಿಲ್ಲ. ಸ್ತಬ್ಧವಾಗಿರುವ ಕಾರ್ಖಾನೆಯ ಒಳಗೆ ಯಂತ್ರಗಳ ಸಮರ್ಪಕ ನಿರ್ವಹಣೆ ನಡೆಯುತ್ತಿಲ್ಲವೇ ಎಂಬ ಅನುಮಾನ ಕಾಡುತ್ತಿದೆ.

Advertisement

ಕಾರ್ಖಾನೆಯಲ್ಲಿನ ಅಧಿ ಕಾರಿಗಳೇ ಖಾಸಗಿ ಕಾರ್ಖಾನೆಗಳೊಂದಿಗೆ ಶಾಮೀಲಾಗಿ ಯಂತ್ರಗಳನ್ನು ಸಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದೆ. ಕಾರ್ಖಾನೆ ಆರಂಭಿಸಲು ಬೇಕಾಗಿರುವ ಯಂತ್ರಗಳ ಗುಣಮಟ್ಟ ಪರಿಶೀಲನೆ ನಡೆಯಬೇಕಿದೆ. ಇದಕ್ಕಾಗಿ ಸರ್ಕಾರದ ಪರಿಣಿತರ ತಂಡ ನವೆಂಬರ್‌ನಲ್ಲಿ ಆಗಮಿಸುವ ಬಗ್ಗೆ ಸರ್ಕಾರ ತಿಳಿಸಿತ್ತು. ಆದರೆ ನವೆಂಬರ್‌ ಕಳೆದರೂ ಇದುವರೆಗೂ ತಜ್ಞರ ತಂಡ ಆಗಮಿಸದಿರುವುದು ಹಲವು ಅನುಮಾನಗಳಿಗೆ ಪುಷ್ಟಿ ನೀಡಿದಂತಾಗಿದೆ.

ಅಧಿಕಾರಿಗಳೇ ಶಾಮೀಲು?: ಕಾರ್ಖಾನೆಯಲ್ಲಿನ ಕೆಲವು ಅಧಿಕಾರಿಗಳು ಖಾಸಗಿ ಕಾರ್ಖಾನೆಗಳೊಂದಿಗೆ ಶಾಮೀಲಾಗಿದ್ದಾರೆ. ಸರಿಯಾಗಿ ಕಾರ್ಯನಿರ್ವಹಿಸದೇ ಯಂತ್ರಗಳನ್ನು ಸಾಗಿಸುವ ಹುನ್ನಾರ ನಡೆಸಲಾಗುತ್ತಿದೆ. 30 ಮಂದಿ ಕಾರ್ಮಿಕರಿದ್ದು, ಭದ್ರತಾ ಲೋಪ ಕಂಡು ಬರುತ್ತಿದೆ. ಉತ್ತಮ ಗುಣಮಟ್ಟದ ಯಂತ್ರಗಳಿದ್ದು, ಅವುಗಳನ್ನು ಬೇರೆ ಕಾರ್ಖಾನೆಗಳಿಗೆ ಸಾಗಿಸುವ ಮೂಲಕ ಕಾರ್ಖಾನೆಯನ್ನು ದಿವಾಳಿ ಮಾಡಲು ಹೊರಟಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಭದ್ರತಾ ಸಿಬ್ಬಂದಿಗಳ ಕೊರತೆ: ವಿಶಾಲವಾದ ಕಾರ್ಖಾನೆಗೆ ಭದ್ರತಾ ಸಿಬ್ಬಂದಿಗಳ ಅಗತ್ಯವಿದ್ದು, ಕೊರತೆ ಕಾಡುತ್ತಿದೆ. ಇರುವ ಕಾರ್ಮಿಕರನ್ನೇ ಭದ್ರತೆಗೆ ನಿಯೋಜಿಸಲಾಗಿದೆ. ಆದರೂ ಸರಿಯಾಗಿ ನಿರ್ವಹಣೆ ನಡೆಯುತ್ತಿಲ್ಲ. ಯಂತ್ರಗಳಿಗೆ ಗ್ರಹಣ: ಕಳೆದ ನಾಲ್ಕು ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿರುವುದರಿಂದ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಕೋಟ್ಯಂತರ ರೂ. ಮೌಲ್ಯದ ಯಂತ್ರಗಳ ದುರಸ್ತಿ ಕಾರ್ಯ ಪ್ರತಿ ವರ್ಷ ನಡೆಯಬೇಕು. ಆದರೆ ಇದುವರೆಗೂ ಯಾವುದೇ ಯಂತ್ರಗಳ ದುರಸ್ತಿ ನಡೆದಿಲ್ಲ. ಸರ್ಕಾರದ ಅನುದಾನ ಬಿಡುಗಡೆಯಾಗದ ಹೊರತು ಕಾರ್ಖಾನೆಯ ಯಂತ್ರಗಳಿಗೆ ಹಿಡಿದಿರುವ ಗ್ರಹಣ ಬಿಡುವಂತೆ ಕಾಣುತ್ತಿಲ್ಲ.

ಯಂತ್ರಗಳ ಲೆಕ್ಕವಿಲ್ಲ: ಕಾರ್ಖಾನೆಯ ಯಂತ್ರಗಳ ಬಗ್ಗೆ ಯಾವುದೇ ನಿರ್ದಿಷ್ಟ ಲೆಕ್ಕವಿಲ್ಲದಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ಸಾಕಷ್ಟು ಲೋಪಗಳಾಗಿವೆ. ಯಂತ್ರಗಳ ಸಾಗಣೆ ಎಷ್ಟು ದಿನಗಳಿಂದ ನಡೆದಿರಬಹುದು, ಎಷ್ಟು ಯಂತ್ರಗಳು ಕಳ್ಳ ಸಾಗಾಣೆಯಾಗಿರಬಹುದು ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇದುವರೆಗೂ ಯಾವ ಯಂತ್ರಗಳಿದ್ದವು, ಈಗ ಎಷ್ಟಿವೆ ಎಂಬುದನ್ನು ಬಹಿರಂಗ ಪಡಿಸಬೇಕು. ಅಲ್ಲದೇ, ಗುಣಮಟ್ಟ ಯಂತ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

Advertisement

ಸ್ವತ್ಛತೆ ಇಲ್ಲ: ಕಾರ್ಖಾನೆ ಆವರಣದಲ್ಲಿ ಯಾವುದೇ ಸ್ವತ್ಛತೆ ಕಾಪಾಡುತ್ತಿಲ್ಲ. ಮಿಲ್‌ ಇರುವ ಜಾಗಗಳಲ್ಲೂ ಯಾವುದೇ ಸ್ವತ್ಛತೆ ಕಾಪಾಡುತ್ತಿಲ್ಲ. ಗಿಡಗಳು ಬೆಳೆದು ನಿಂತಿವೆ. ಪ್ರತಿದಿನ ಅಧಿಕಾರಿಗಳು ಅಲ್ಲಿಯೇ ಇದ್ದರೂ ಸ್ವತ್ಛತೆ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಅಲ್ಲದೆ, ಯಂತ್ರ ಇರುವ ಜಾಗವೂ ಪಾಳು ಬಿದ್ದಂತೆ ಗೋಚರವಾಗುತ್ತದೆ.

ಅಧಿಕಾರಿಗಳದ್ದೇ ದರ್ಬಾರು

ಮೈಷುಗರ್‌ ಕಾರ್ಖಾನೆಯಲ್ಲಿ ಅಧಿಕಾರಿಗಳದ್ದೇ ದರ್ಬಾರ್‌ ಆಗಿದೆ. ಹೇಳುವವರು, ಕೇಳುವವರಿಲ್ಲದಂತಾಗಿದೆ. ಅಧ್ಯಕ್ಷರ ಗಮನಕ್ಕೂ ಬಾರದೆ ಖಾಸಗಿ ಕಾರ್ಖಾನೆಯ ಸಿಬ್ಬಂದಿಗಳನ್ನು ಒಳಪ್ರವೇಶಿಸಲು ಅವಕಾಶ ಮಾಡಿಕೊಡ ಲಾಗಿದೆ. ಅಲ್ಲದೆ, ಕಾರ್ಖಾನೆಯ ಯಂತ್ರಗಳನ್ನು ಪರಿಶೀಲಿಸಿ ಅದರಲ್ಲಿ ಟರ್ಬೈನ್‌ ಯಂತ್ರ ಸಾಗಿಸುವ ಪ್ರಯತ್ನ ನಡೆಸಲಾಗಿದ್ದು, ಇದು ಕಾರ್ಖಾನೆಯ ಅಧಿಕಾರಿಗಳು ಶಾಮೀಲಾಗಿರುವುಕ್ಕೆ ಸಾಕ್ಷಿಯಂತಿದೆ.

ಖಾಸಗಿ ಕಾರ್ಖಾನೆಗಳೊಂದಿಗೆ ಶಾಮೀಲು: ಎಂ.ಡಿ.ಜಯರಾಂ

ಯಂತ್ರಗಳ ಸಾಗಣೆ ಮಾಡುತ್ತಿರುವ ಯತ್ನಗಳು ನಡೆಯುತ್ತಿದ್ದು, ಕಾರ್ಖಾನೆಯನ್ನು ದಿವಾಳಿ ಮಾಡಲು ಹೊರಟಿದ್ದಾರೆ. ಇದು ಅಧ್ಯಕ್ಷರ ಗಮನಕ್ಕೆ ಬಾರದೆ ಹೇಗೆ ನಡೆಯಲು ಸಾಧ್ಯ. ಇದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಕಾರ್ಖಾನೆಯಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಾ, ಖಾಸಗಿ ಕಾರ್ಖಾನೆಗಳೊಂದಿಗೆ ಶಾಮೀಲಾಗಿದ್ದಾರೆಂದು ಆರೋಪಿಸಿದ ಮೈಷುಗರ್‌ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಡಿ.ಜಯರಾಂ, ಇದರ ಬಗ್ಗೆ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

ಟರ್ಬೈನ್‌ ಗವರ್ನರ್‌ ಯಂತ್ರದ ಕೆಲಸವೇನು?

ಕಾರ್ಖಾನೆಯ ಇಡೀ ಯಂತ್ರವನ್ನು ನಿಯಂತ್ರಿಸುವುದೇ ಟರ್ಬೈನ್‌ ಗವರ್ನರ್‌ ಯಂತ್ರದ ಕೆಲಸವಾಗಿದೆ. ಯಂತ್ರದ ಬಾಯ್ಲರ್‌ಗೆ ಬೇಕಾದ ವಿದ್ಯುತ್‌, ಶಾಖ, ಸಕ್ಕರೆ ತಯಾರಿಕೆ ಸೇರಿದಂತೆ ಎಲ್ಲದರಲ್ಲೂ ಪ್ರಮುಖ ಪಾತ್ರ ವಹಿಸಲಿದೆ. ನಿರ್ದಿಷ್ಟವಾಗಿ ಯಂತ್ರವನ್ನು ನಿಯಂತ್ರಿಸುವ ಸಾಧನವಾಗಿದೆ. ಇದು ಮಾರುಕಟ್ಟೆಯಲ್ಲಿ 27 ಲಕ್ಷ ರೂ. ಬೆಲೆ ಬಾಳುವ ಯಂತ್ರವಾಗಿದೆ. ಮೈಷುಗರ್‌ ಕಾರ್ಖಾನೆಯಲ್ಲಿರುವ ಟರ್ಬೈನ್‌ ಗವರ್ನರ್‌ ಯಂತ್ರದ ಬೆಲೆ 17 ಲಕ್ಷ ರೂ. ಆಗಿದೆ. ಇದನ್ನು ಸಾಗಾಟ ಮಾಡಲು ಮಂಗಳವಾರ ಯತ್ನ ನಡೆದಿತ್ತು.

“ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿ ದ್ದಾರೆ. ಸರಿಯಾಗಿ ನಿರ್ವಹಣೆ ಮಾಡದೇ ಅಧಿಕಾರಿ ಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪ್ರತೀ ತಿಂಗ ಳು ಸಂಬಳ ಪಡೆಯುವ ಇವರು ಖಾಸಗಿ ಕಾರ್ಖಾನೆಗಳೊಂದಿಗೆ ಶಾಮೀಲಾಗಿ ಕಾರ್ಖಾ ನೆ ಮುಳುಗಿಸುವ ಪ್ರಯತ್ನ ಮಾಡುತ್ತಿ ದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.” – ಚಂದ್ರಶೇಖರ್‌, ರೈತ ಮುಖಂಡ, ಇಂಡುವಾಳು

“ಯಂತ್ರದ ಹೃದಯ ಭಾಗದಂತಿ ರುವ ಟರ್ಬೈನ್‌ ಗವರ್ನರ್‌ ಯಂತ್ರವನ್ನು ಬೇರೆ ಕಾರ್ಖಾನೆಯವರು ಪಡೆಯಬೇಕಾದರೆ ಅದಕ್ಕಾಗಿಯೇ ಕಾನೂನು ನಿಯಮಗಳಿವೆ. ಖಾಸಗಿ ಕಾರ್ಖಾನೆಗಳಿಗೆ ಸಾಗಿಸಲು ಅನುಮತಿ ಇಲ್ಲ. ಅದನ್ನು ಮೀರಿ ಯಂತ್ರ ಸಾಗಿಸಲು ಮುಂದಾಗಿರುವುದು ಸರಿಯಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು.” ಶಂಭೂನಹಳ್ಳಿ ಕೃಷ್ಣ, ಅಧ್ಯಕ್ಷ, ಮೈಷುಗರ್‌ ಕಬ್ಬು ಒಪ್ಪಿಗೆದಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next