ಹೊಸದಿಲ್ಲಿ : ರವಿವಾರದಿಂದ ಫಿನ್ಲಂಡ್‌ನಲ್ಲಿ ಆರಂಭವಾಗಲಿರುವ ಸುದೀರ್ಮನ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿ ಭಾರತದ ಎಳೆಯರಿಗೆ ಸವಾಲಿನ ಜತೆಗೆ ನೂತನ ಅನುಭವವನ್ನು ನೀಡಲಿದೆ.
“ಎ’ ವಿಭಾಗದಲ್ಲಿರುವ ಭಾರತ, ಹಾಲಿ ಚಾಂಪಿಯನ್ ಚೀನ, 3 ಬಾರಿಯ ಸೆಮಿಫೈನಲಿಸ್ಟ್ ಥಾಯ್ಲೆಂಡ್, ಆತಿಥೇಯ ಫಿನ್ಲಂಡ್ ವಿರುದ್ಧ ಸ್ಪರ್ಧೆ ನಡೆಸಬೇಕಿದೆ. ಥಾಯ್ಲೆಂಡ್ ತಂಡ ಭಾರತದ ಮೊದಲ ಎದುರಾಳಿಯಾಗಿದೆ. ಸೆ. 27ರಂದು ಚೀನ ವಿರುದ್ಧ, ಸೆ. 29ರಂದು ಫಿನ್ಲಂಡ್ ವಿರುದ್ಧ ಸೆಣಸಲಿದೆ.
ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು, ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಈ ಸ್ಪರ್ಧೆಯಿಂದ ದೂರ ಸರಿದಿದ್ದಾರೆ. ಹೀಗಾಗಿ ವನಿತಾ ಸಿಂಗಲ್ಸ್‌ನಲ್ಲಿ ಹೊಸಬರಾದ ಮಾಳವಿಕಾ ಬಾನ್ಸೋಡ್ ಮತ್ತು ಅದಿತಿ ಭಟ್ ಕಣಕ್ಕಿಳಿಯಬೇಕಿದೆ. ಪುರುಷರ ಡಬಲ್ಸ್ ವಿಭಾಗದಿಂದ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಕೂಡ ಹಿಂದೆ ಸರಿದಿದ್ದಾರೆ. ಇವರ ಬದಲು ಯುವ ಶಟ್ಲರ್‌ಗಳಾದ ಧ್ರುವ ಕಪಿಲ ಮತ್ತು ಎಂ.ಆರ್. ಅರ್ಜುನ್ ಅದೃಷ್ಟಪರೀಕ್ಷೆಗೆ ಒಳಗಾಗಬೇಕಿದೆ.
ಇದನ್ನೂ ಓದಿ :ಚಾರ್ಮಾಡಿ ಘಾಟ್ ನಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ:ಪೆಟ್ರೋಲ್ ಸೋರಿಕೆ
ಪುರುಷರ ಹಾಗೂ ವನಿತೆಯರ ಡಬಲ್ಸ್‌ನಲ್ಲಿ ಭಾರತ ಅನು ಭವಿ ಆಟಗಾರರನ್ನೇ ಹೊಂದಿದೆ. ಇಲ್ಲಿ ಬಿ. ಸಾಯಿ ಪ್ರಣೀತ್-ಕೆ. ಶ್ರೀಕಾಂತ್, ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಇದ್ದಾರೆ. 2009ರಲ್ಲಿ ಮೊದಲ ಸಲ ಸುದೀರ್ಮನ್ ಕಪ್ ಟೂರ್ನಿಯಲ್ಲಿ ಆಡಿದ ಭಾರತ, ಈ ವರೆಗೆ ಚಾಂಪಿಯನ್ ಆಗಿಲ್ಲ. 2011ರಲ್ಲಿ ಕ್ವಾ. ಫೈನಲ್ ತಲುಪಿದ್ದೇ ಉತ್ತಮ ಸಾಧನೆ.