Advertisement

ಡಂಪಿಂಗ್‌ ಯಾರ್ಡ್‌ ಬವಣೆ: ಬೇಕು ಶಾಶ್ವತ ಪರಿಹಾರ

06:07 PM Mar 08, 2017 | Team Udayavani |

ಬನ್ನೂರು: ಇಲ್ಲಿರುವ ಪುತ್ತೂರು ನಗರಸಭೆಯ ಡಂಪಿಂಗ್‌ ಯಾರ್ಡ್‌ನ ತ್ಯಾಜ್ಯಕ್ಕೆ ಬೆಂಕಿ ಬಿದ್ದು ಎಂಟು ದಿನಗಳಾದರೂ ಇದರಿಂದ ಉದ್ಭವಿಸಿದ ಸಮಸ್ಯೆ ಸದ್ಯಕ್ಕೆ ನಿವಾರಣೆಯಾಗುವಂತೆ ಕಾಣುತ್ತಿಲ್ಲ. ಈ ಬೆಂಕಿ ಆಕಸ್ಮಿಕಕ್ಕೆ ಕಾರಣವಾಗಿರುವುದು ಅವ್ಯವಸ್ಥಿತ, ಅವೈಜ್ಞಾನಿಕ ಕಸ – ತಾಜ್ಯ ಸಂಗ್ರಹಣೆ, ವಿಲೇವಾರಿಯೇ ಎಂಬುದು ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಮಾರ್ಗೋಪಾಯಕ್ಕೆ ಆಡಳಿತ ವ್ಯವಸ್ಥೆ ತಲೆ ಕೆಡಿಸಿಕೊಂಡಿದೆ. ಪ್ರಸ್ತುತ ನಗರಸಭಾ ವ್ಯಾಪ್ತಿಯಲ್ಲಿ ದಿನವೊಂದಕ್ಕೆ ಸಂಗ್ರಹಿಸ ಲಾಗುವ ಸುಮಾರು 13 ಟನ್‌ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಉಪಾಯ ಹುಡುಕುವ ಅನಿವಾರ್ಯತೆಗೆ ನಗರಸಭೆ ಸಿಲುಕಿಕೊಂಡಿದೆ.

Advertisement

ಈ ಹಿಂದೆಯೂ ಅಸಮಾಧಾನ
ಈ ಯಾರ್ಡ್‌ 1990ರಲ್ಲಿ ಆರಂಭಗೊಂಡಿತು. ನಂ. 71 ಬನ್ನೂರು ಸರ್ವೆ ನಂಬರ್‌ನಲ್ಲಿರುವ 7.15 ಎಕ್ರೆ ಒಟ್ಟು ವಿಸ್ತೀರ್ಣದಲ್ಲಿ ನಗರಸಭೆ ತ್ಯಾಜ್ಯಗಳನ್ನು ರಾಶಿ ಹಾಕತೊಡಗಿತು. 1998ರಲ್ಲಿಯೂ ಈ ತ್ಯಾಜ್ಯಗಳಿಂದ ಆಗುತ್ತಿರುವ ತೊಂದರೆಗಳ ಕುರಿತು ಸ್ಥಳೀಯರು ಆಕ್ಷೇಪಿಸಿದ್ದರು. ರಾತ್ರಿ-ಹಗಲು ಎನ್ನದೇ ಕಸಗಳನ್ನು ತಂದು ಸುರಿಯಲಾಗುತ್ತದೆ. ಅದಕ್ಕೊಂದು ವ್ಯವಸ್ಥಿತವಾದ ಕ್ರಮವಿಲ್ಲ. ಕೆಲವರು ಯಾರ್ಡ್‌ನ ಹೊರ ಭಾಗದಲ್ಲೂ ಚೆಲ್ಲುತ್ತಾರೆ. ಅದರಲ್ಲಿ ಮಾಂಸ, ಹೆಣಕ್ಕೆ ಹಾಕುವ ಬಟ್ಟೆ ಬರೆ ಎಲ್ಲವೂ ಇರುತ್ತದೆ. ಡಂಪಿಂಗ್‌ ಯಾರ್ಡ್‌ನ ಸುತ್ತಮುತ್ತಲೂ ಅಕೇಶಿಯಾ, ಗಾಳಿ ಮರ ಗಳಿದ್ದು, ಪ್ರಾಣಿ, ಪಕ್ಷಿಗಳು ಈ ಕೊಳೆತ ವಸ್ತುಗಳನ್ನು ಮನೆಗಳ ಎದುರು ತಂದು ಹಾಕುತ್ತವೆ. ಒಟ್ಟಿನಲ್ಲಿ ಇರಲಿಕ್ಕೇ ಆಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಅವೈಜ್ಞಾನಿಕ ವಿಲೇವಾರಿ
ನಗರಸಭೆಯಿಂದ ಕಸ, ತ್ಯಾಜ್ಯಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ಹಸಿ ಕಸ- ಒಣ ಕಸ, ಪ್ಲಾಸ್ಟಿಕ್‌ ವಸ್ತುಗಳನ್ನು ಪ್ರತ್ಯೇಕಿಸಿ ವಿಲೇವಾರಿ ಮಾಡಬೇಕು. ಆದರೆ, ಯಾರ್ಡ್‌ಗೆ ಬರುವ ಕಸ, ತಾಜ್ಯಗಳೆಲ್ಲಾ ಒಂದೇ ಆಗಿರುತ್ತದೆ. ಎಲ್ಲವನ್ನೂ ಒಟ್ಟಿಗೇ ಸುರಿಯುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. 

ಮಾನವ ಹಕು ಆಯೋಗಕ್ಕೆ ದೂರು
ಈ ಮಧ್ಯೆ ಡಂಪಿಂಗ್‌ ಯಾರ್ಡ್‌ ಅವ್ಯ ವಸ್ಥೆಯ ಕುರಿತಂತೆ ಪುತ್ತೂರು ಬಳಕೆದಾರರ ಹಿತರಕ್ಷಣಾ ವೇದಿಕೆಯು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದೆ. ನಗರಸಭೆ ಪೌರಾಯುಕ್ತರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಪ್ರಾದೇಶಿಕ ಅಧಿಕಾರಿ, ಪುತ್ತೂರು ತಾ| ಆರೋಗ್ಯ ಅಧಿಕಾರಿಯನ್ನು ದೂರಿಗೆ ಪ್ರತಿವಾದಿಗಳನ್ನಾಗಿಸಿದೆ. ನಗರಸಭೆಯಲ್ಲಿ ಅವೈಜ್ಞಾನಿಕವಾಗಿ ಘನ ತಾಜ್ಯ ವಿಲೇವಾರಿ ಮಾಡಿದ್ದು, ಜನರ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆಯನ್ನು ಪಾಲಿಸದಿರುವುದು, ದೀರ್ಘ‌ಕಾಲಿಕ ಪರಿಹಾರಕ್ಕೆ ಸೂಚಿಸಬೇಕೆಂದೂ ಕೋರಲಾಗಿದೆ.


ಕಸ ಸಂಗ್ರಹಣೆ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ರಸ್ತೆ ಬದಿ ತೊಟ್ಟಿಯಲ್ಲಿ ತುಂಬಿರುವ ಕಸ.

Advertisement

ಸೂಚನೆ ನೀಡಲು ವಿನಂತಿ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಯವರು ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ತೊಂದರೆಯಾಗಿದೆ. ವಿಲೇವಾರಿ ಮಾಡಬೇಕೆಂದು ಸೂಚಿಸಿದ್ದರೂ ಪಾಲನೆಯಾಗಿಲ್ಲ. ಇದೇ ಜನರ ಅನಾರೋಗ್ಯಕ್ಕೆ ಕಾರಣ. ಈ ಕುರಿತು ವಿಚಾರಣೆ ನಡೆಸಿ ಘನ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಕಾಲ ಕಾಲಕ್ಕೆ ಮಾಡುವಂತೆ 1ನೇ ಪ್ರತಿವಾದಿಗಳಿಗೆ ಆದೇಶಿಸಲು ಹಾಗೂ ತಾಜ್ಯ ವಿಲೇವಾರಿ ಯಾವ ರೀತಿಯಲ್ಲಿ ನಡೆಸಲಾಗುತ್ತಿದೆ ಹಾಗೂ ಹಾಲಿ ಪರಿಸರ ಕಾನೂನಿಗೆ ಅನ್ವಯವಾಗಿ ನಡೆಸಲಾಗುತ್ತಿದೆಯೇ ಎಂದು ಖಾತರಿ ಪಡಿಸಲು 2ನೇ ಎದುರುದಾರರಿಗೆ ಆದೇಶಿಸಲು, ಅನಾರೋಗ್ಯಕ್ಕೆ ಕಾರಣವಾಗಿ ವಿವಿಧ ರೋಗಗಳಿಗೆ ಚಿಕಿತ್ಸೆ ಪಡೆದವರ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಹಾಗೂ ಮುಂದೆ ಈ ರೀತಿಯ ಅನಾಹುತಗಳು ಆಗದಿರಲು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ವರದಿ ಸಲ್ಲಿಸಲು 3ನೇ ಎದುರುದಾರರಿಗೆ ಸೂಚಿಸಲು ಕೋರಲಾಗಿದೆ.

ಇದು ನಗರಸಭೆಯ ಕಥೆ
ನಗರಸಭೆಯಲ್ಲಿ ಪರಿಸರ ಎಂಜಿನಿಯರ್‌ ಹುದ್ದೆ ಹಲವು ವರ್ಷಗಳಿಂದ ಖಾಲಿ ಇದೆ. ಹಿಂದೆ ಹಲವು ಮಂದಿ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಈ ಜವಾಬ್ದಾರಿಯೂ ನಗರಸಭಾ ಆರೋಗ್ಯ ವಿಭಾಗಕ್ಕೆ ಸೇರಿದೆ. ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು ಕಸ ಸಂಗ್ರಹಣೆ ವಿಲೇವಾರಿ ಕುರಿತಂತೆ ಅನುಭವಿ ಎಂಜಿನಿಯರ್‌ಗಳ ಮೂಲಕ 1.75 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿದೆ. ಪ್ರಸ್ತುತ ಕಸ ವಿಲೇವಾರಿಗೆ ಕಾರ್ಮಿಕರು ಸಿಗುತ್ತಿಲ್ಲ. ಹೊರ ಊರುಗಳ ಕಾರ್ಮಿಕರು ಸಿಕ್ಕರೂ ಹಬ್ಬಕ್ಕೆಂದು ಊರಿಗೆ ತೆರಳಿದರೆ ಹಲವು ತಿಂಗಳವರೆಗೆ ಹಿಂದಿರುಗುವುದಿಲ್ಲ. ಹೊಸದಾಗಿ ಸಿದ್ಧಪಡಿಸಿರುವ ಯೋಜನೆ ಕೌನ್ಸಿಲ್‌ ಸಭೆಯಲ್ಲಿ ಅಂಗೀಕಾರವಾದರೆ ಮನೆಗಳಿಂದ ಕಸ ಸಂಗ್ರಹ, ಪ್ರತ್ಯೇಕಿಸುವ ಕಾರ್ಯ, ವಿಲೇವಾರಿ ಸಮರ್ಪಕವಾಗಲಿದೆ ಎನ್ನುವುದು ನಗರಸಭೆಯ ಅಭಿಪ್ರಾಯ.

ಸಹಜ ಸ್ಥಿತಿಗೆ
ಡಂಪಿಂಗ್‌ ಯಾರ್ಡ್‌ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ. ಪ್ರಸ್ತುತ ಕಸವನ್ನು ಮತ್ತೆ ಸುರಿಯುತ್ತಿದ್ದು, ಯಾರ್ಡ್‌ಗೆ ಹಾಕಿದ ಕೂಡಲೇ ಅದರ ಮೇಲೆ ಮಣ್ಣು ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ 1 ಲಾರಿ ಹಾಗೂ ಜೆಸಿಬಿ ಯಂತ್ರ ಕಾರ್ಯ ನಿರ್ವಹಿಸುತ್ತಿದೆ. ಸಂಜೆ 5 ಗಂಟೆಯ ಮೊದಲು ಕಸವನ್ನು ಹಾಕಲು ಸೂಚಿಸಲಾಗಿದೆ. ಅನಾರೋಗ್ಯಪೀಡಿತರಿಗೆ ಆರೋಗ್ಯ ಇಲಾಖೆಯವರ ಮೂಲಕ ತಪಾಸಣೆ ನಡೆಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
– ರಾಮಚಂದ್ರ, ಹಿರಿಯ ಆರೋಗ್ಯ ನಿರೀಕ್ಷಕರು, ಪುತ್ತೂರು ನಗರಸಭೆ

ಶಾಶ್ವತ ಪರಿಹಾರ ಬೇಕು
ಡಂಪಿಂಗ್‌ ಯಾರ್ಡ್‌ನಿಂದ ಮಾಂಸ, ತ್ಯಾಜ್ಯಗಳು ಹೊರಭಾಗಕ್ಕೂ ಬರುತ್ತಿವೆ. ಯಾರ್ಡ್‌ನ ಹೊರ ಪ್ರದೇಶಗಳಲ್ಲೂ ಎಲ್ಲೆಂದರಲ್ಲಿ ಇವುಗಳನ್ನು ಎಸೆಯಲಾಗುತ್ತಿದೆ. ಸ್ಥಳೀಯಾಡಳಿತ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಇಲ್ಲಿ ಬದುಕಲೂ ಸಾಧ್ಯವಿಲ್ಲ.
– ರಾಧಾ, ಗೃಹಿಣಿ, ಸ್ಥಳೀಯ ನಿವಾಸಿ

ಹೊಸ ಯೋಜನೆ
ನಗರಸಭಾ ವ್ಯಾಪ್ತಿಯಲ್ಲಿ  ಕಸ, ತಾಜ್ಯ ಸಂಗ್ರಹಣೆ ಕುರಿತಂತೆ ಹೊಸ ಯೋಜನೆ ಸಿದ್ಧಪಡಿಸಲಾಗಿದೆ. ವೈಜ್ಞಾನಿಕ ರೀತಿಯಲ್ಲಿ ಕಸ ಸಂಗ್ರಹ, ವಿಲೇವಾರಿಗೆ ಗಮನಹರಿಸಲಾಗಿದೆ. ಕೌನ್ಸಿಲ್‌ ಸಭೆ ನಡೆದ ಬಳಿಕ ಟೆಂಡರ್‌ ಕರೆದು, ಮುಂದಿನ ತಿಂಗಳಿನಿಂದ ಸಮರ್ಪಕ ರೀತಿಯ ಕಸ ವಿಲೇವಾರಿ ನಡೆಸಲಾಗುವುದು.
– ರೂಪಾ ಶೆಟ್ಟಿ, ಪೌರಾಯುಕ್ತರು, ಪುತ್ತೂರು ನಗರಸಭೆ

– ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next