Advertisement

Chikballapur Lok Sabha constituency; ಸುಧಾಕರ್‌ ಸೋಲಿಸಿಯೇ ಸಿದ್ಧ: ಪ್ರದೀಪ್‌ ಈಶ್ವರ್‌

12:25 AM Mar 26, 2024 | Team Udayavani |

ಬೆಂಗಳೂರು: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ| ಕೆ. ಸುಧಾಕರ್‌ ವಿರುದ್ದ ಕಣಕ್ಕಿಳಿದು ಅವರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿ ಅವರನ್ನು ಮಣಿಸಿದ್ದ ಶಾಸಕ ಪ್ರದೀಪ್‌ ಈಶ್ವರ್‌, ಈಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸುಧಾಕರ್‌ ಬಿಜೆಪಿ ಟಿಕೆಟ್‌ನಲ್ಲಿ ಆಖಾಡಕ್ಕಿಳಿಯುತ್ತಿರುವಂತೆ ಮತ್ತೆ ದಾಳಿ ಆರಂಭಿಸಿದ್ದಾರೆ. ಇನ್ನು ಮುಂದೆ ಒಂದು ತಿಂಗಳು ಚಿಕ್ಕಬಳ್ಳಾಪುರದಲ್ಲಿ ನಿತ್ಯ ನಿರಂತರ ಯುದ್ಧ ನಡೆಯಲಿದ್ದು, ಸುಧಾಕರ್‌ ಅವರನ್ನು ಮತ್ತೆ ಸೋಲಿಸಿಯೆ ಸಿದ್ಧ ಎಂದು ಘೋಷಿಸಿದ್ದಾರೆ.

Advertisement

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರದೀಪ್‌ ಈಶ್ವರ್‌, ಬಿಜೆಪಿಯಲ್ಲಿ ಈ ಬಾರಿ ಎಂತೆಂತಹ ನಾಯಕರಿಗೆ ಟಿಕೆಟ್‌ ತಪ್ಪಿದೆ. ಆದರೆ ಒಬ್ಬ ಸಾಮಾನ್ಯ ಟ್ಯೂಷನ್‌ ಟೀಚರ್‌ ವಿರುದ್ಧ ಸೋತ ವ್ಯಕ್ತಿಗೆ ಯಾಕೆ ಟಿಕೆಟ್‌ ನೀಡಿದರು ಎನ್ನುವುದೇ ಆಶ್ವರ್ಯ. ರಾಜ್ಯದ ಕೆಲವು ಬಿಜೆಪಿ ನಾಯಕರಿಗೆ ಸೂರ್ಯ ನಮಸ್ಕಾರ, ಶವಾಸನ, ಕಪಾಲಿಪಾತಿ, ದೀರ್ಘ‌ ದಂಡ ನಮಸ್ಕಾರ ಈ ರೀತಿಯ ಸೇವೆಯನ್ನು ಮಾಡಿರುವ ಕಾರಣ ಟಿಕೆಟ್‌ ಸಿಕ್ಕಿರಬಹುದು ಎಂದು ಒಗಟಿನಂತೆ ಟೀಕಿಸಿದರು.

ಸುಧಾಕರ್‌ ವಿರುದ್ಧ ಕೊರೊನಾ ಸಮಯದಲ್ಲಿ 2,200 ಕೋಟಿ ರೂ. ಹಗರಣ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು. 40 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪ ಮಾಡಿದ್ದಾರೆ. ಆದರೂ ಬಿಜೆಪಿ ಅಂಥ ವ್ಯಕ್ತಿಗೆ ಅವರಿಗೆ ಟಿಕೆಟ್‌ ನೀಡಿದೆ. ನಾನು ನನ್ನ ಹತ್ತು ತಿಂಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ರೂಪಾಯಿ ಅಕ್ರಮ ಮಾಡಿಲ್ಲ ಎಂದು ನಾಳೆಯೇ ಭೋಗ ನಂದೀಶ್ವರರ ದೇವರ ಮುಂದೆ ಪ್ರತಿಜ್ಞೆ ಮಾಡಲು ಸಿದ್ಧ. ಸುಧಾಕರ್‌ ಕೂಡ ಪ್ರತಿಜ್ಞೆ ಮಾಡಿದರೆ ನಾನು ಅವರ ವಿರುದ್ಧ ಮಾತನಾಡುವುದನ್ನು ನಿಲ್ಲಿಸು ತ್ತೇನೆ. ಅವರು ತಮ್ಮ ಆದಾಯದ ಮೂಲವನ್ನು ಬಹಿರಂಗಪಡಿಸಲಿ ಎಂದು ಪ್ರದೀಪ್‌ ಸವಾಲೆಸೆದಿದ್ದಾರೆ.

ಪ್ರದೀಪ್‌ ಈಶ್ವರ್‌ಗೆ ಈಗ ಉತ್ತರ ಕೊಡಲಾರೆ: ಡಾ| ಸುಧಾಕರ್‌
ಬೆಂಗಳೂರು/ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್‌ ಸಿಕ್ಕಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರಾದ ಬಿಎಸ್‌ವೈ, ಬೊಮ್ಮಾಯಿ ಸಹಿತ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿರುವ ಮಾಜಿ ಸಚಿವ ಡಾ| ಕೆ.ಸುಧಾಕರ್‌ ಅವರು ಚುನಾವಣ ತಂತ್ರಗಾರಿಕೆ ಕುರಿತು ಚರ್ಚೆ ನಡೆಸಿದ್ದಾರೆ.

ಈ ನಡುವೆ ತನ್ನ ವಿರುದ್ಧ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಮಾಡಿರುವ ಆರೋಪ ಕುರಿತಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಇಂದು ನಾನು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಬಂದಿದ್ದೇನೆ. ಅಂಥವರ ಪ್ರಶ್ನೆಗೆ ಉತ್ತರ ಕೊಡುವುದಿಲ್ಲ ಎಂದು ಹೇಳಿದ್ದಾರೆ.

Advertisement

ರವಿವಾರ ರಾತ್ರಿ ತಮಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ ಘೋಷಣೆ ಆದ ಬೆನ್ನಲ್ಲೇ ಸೋಮವಾರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯನ್ನು ಬೇಟಿ ಮಾಡಿ ಅಶೀರ್ವಾದ ಪಡೆದರು. ಇದಕ್ಕೂ ಮೊದಲು ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್‌, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್‌ ಮತ್ತಿತರ ಹಿರಿಯ ನಾಯಕರನ್ನು ಭೇಟಿ ಮಾಡಿದರು.

15 ವರ್ಷಗಳಿಂದ ನಾನು ಚಿಕ್ಕಬಳ್ಳಾಪುರದ ಜನತೆಯ ಮನೆ ಮಗನಾಗಿ, ಸೇವಕನಾಗಿ ಅವರ ಸೇವೆ ಮಾಡುತ್ತಾ ಬಂದಿದ್ದೇನೆ. 10 ವರ್ಷಗಳ ಕಾಲ ಜನಪ್ರತಿನಿಧಿಯಾಗಿ ಚಿಕ್ಕಬಳ್ಳಾಪುರದ ಜನತೆಯ ಅಪೇಕ್ಷೆ, ಆಕಾಂಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next