Advertisement

ಸುಧಾಕರ ಆಚಾರ್ಯ ಕಲಾರಾಧನೆಯ ತ್ರಿಂಶತಿ

06:25 PM Aug 08, 2019 | mahesh |

ಸ್ವಾತಂತ್ರ್ಯೋತ್ಸವವನ್ನು ವಿಶೇಷ ಕಲಾ ಕಾರ್ಯಕ್ರಮದ ಮೂಲಕ ಆಚರಿಸುವ ಪರಿಕಲ್ಪನೆಯೊಂದಿಗೆ 1990 ಆ. 14ರಂದು ಉಡುಪಿಯ ನಿಟ್ಟೂರು ಪ್ರೌಢಶಾಲೆಯಲ್ಲಿ ಆರಂಭಿಸಿದ ಸ್ವಾತಂತ್ರ್ಯೋತ್ಸವ ತಾಳಮದ್ದಳೆಗೆ ಇದೀಗ ಮೂವತ್ತರ ಸಂಭ್ರಮ.

Advertisement

ಐದನೇ ವರ್ಷದಲ್ಲಿ ಖ್ಯಾತ ಸಾಹಿತಿ, ವಿದ್ವಾಂಸರಾದ ಡಾ| ಅಮೃತ ಸೋಮೇಶ್ವರರ ಹಿರಿತನದಲ್ಲಿ ಮಲ್ಪೆ ರಾಮದಾಸ ಸಾಮಗರಿಗೆ “ವಾಗ್ಮಯ ವಿಶಾರದ’ ಪ್ರಶಸ್ತಿ ಪ್ರದಾನ, ದಶಮಾನೋತ್ಸವ ಸಂದರ್ಭದಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ “ಕುಡಿಯನ ಕೊಂಬಿರೆಲ್‌’ ತುಳು ಯಕ್ಷಗಾನ ಕೃತಿ ಬಿಡುಗಡೆ ಮತ್ತು ಪ್ರದರ್ಶನ, 25ನೇ ವರ್ಷಾಚರಣೆ ಹೊತ್ತಿನಲ್ಲಿ 12 ತಾಸುಗಳ ನಿರಂತರ ಯಕ್ಷಾರಾಧನೆ ಜೊತೆಗೆ ಇನ್ನೊಂದು ಕವಲಾಗಿ ತೆಂಕುತಿಟ್ಟು ವೇದಿಕೆ ಉಡುಪಿ ಕಲಾ ಪ್ರೇಕ್ಷಕರಿಗಾಗಿ ಉದ್ಭವ ಸಮಾನ ಮನಸ್ಕರ ಸಹಕಾರದೊಂದಿಗೆ ಕಲಾ ಪ್ರೇಕ್ಷಕರಿಗಾಗಿ ವರ್ಷಕ್ಕೆ ಒಂದು ತೆಂಕು ಪೌರಾಣಿಕ ಯಕ್ಷಗಾನ ಪ್ರದರ್ಶನ ಹಾಗೂ ಹಿರಿಯ ಯಕ್ಷಗಾನ ಕಲಾವಿದರನ್ನು ಗೌರವನಿಧಿಯೊಂದಿಗೆ ಸಮ್ಮಾನಿಸುವ ವಾರ್ಷಿಕ ಆಯೋಜನೆಯ “ರಾತ್ರಿ ಆಟ’ ಅತ್ಯಲ್ಪ ಅವಧಿಯಲ್ಲಿಯೇ ಅಸಂಖ್ಯಾತ ಕಲಾ ಪ್ರೇಕ್ಷಕರ ಮೆಚ್ಚುಗೆಗೆ ಭಾಜನವಾಗಿದೆ.26ನೇ ವರ್ಷಾಚರಣೆಯಲ್ಲಿ ಯಕ್ಷಗಾನ ಸಂಬಂಧೀ ಸಾಧಕ 26 ಗಣ್ಯರಿಗೆ ಸಮ್ಮಾನವನ್ನು ಏರ್ಪಡಿಸಲಾಗಿತ್ತು.

ಇತಿಹಾಸದ ಮರುಸೃಷ್ಟಿ
1947-ಸ್ವರಾಜ್ಯ ವಿಜಯ-2016, 1948-ಹೈದರಾಬಾದ್‌ ವಿಜಯ-2017 ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಆಚರಣೆಗೆ ಪೂರಕವೋ ಎಂಬಂತೆ 1947ರ ಆಗಸ್ಟ್‌ 14ರ ರಾತ್ರಿ ಪ್ರಥಮ ಸ್ವಾತಂತ್ರ್ಯೋತ್ಸವದಂದು ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲಿನಲ್ಲಿ ಜರಗಿದ್ದ ಹಿರಿಯ ಪತ್ರಕರ್ತ, ಸ್ವಾತಂತ್ರ ಯೋಧ ಎಂ.ವಿ. ಹೆಗ್ಡೆ ಅವರು ರಚಿಸಿ ಪ್ರಕಟಿಸಿದ್ದ “ಸ್ವರಾಜ್ಯ ವಿಜಯ’, 1948ರಂದು ಶ್ರೀ ಕೃಷ್ಣಮಠದ ಭೋಜನಶಾಲೆಯಲ್ಲಿ ನಡೆದಿದ್ದ “ಹೈದರಾಬಾದ್‌ ವಿಜಯ’ ತಾಳಮದ್ದಳೆಗಳಲ್ಲಿ ಉಪಸ್ಥಿತರಿದ್ದು ಹರಸಿದ್ದ ಪೇಜಾವರ ಶ್ರೀಗಳ ಪಂಚಮ ಐತಿಹಾಸಿಕ ಪರ್ಯಾಯದ ಸಂದರ್ಭದಲ್ಲಿ ಶ್ರೀಗಳ ಸಾನಿಧ್ಯದಲ್ಲಿಯೇ 70 ವರ್ಷಗಳ ಅನಂತರ ತಾಳಮದ್ದಳೆ ಕಲಾ ಪ್ರೇಮಿಗಳ ಮನದಾಳ ಮುಟ್ಟಿತು.

29ನೇ ಸ್ವಾತಂತ್ರ್ಯೋತ್ಸವದ ವರ್ಷಾಚರಣೆಯಲ್ಲಿ “ಪಂಚರತ್ನ ದೀಪಮಾಲಾ’ ಹಾಗೂ ತುಳು ಯಕ್ಷಗಾನ ವೈಭವ ಆರಂಭ. ಈ ಕಲಾರಾಧನೆಗೆ ಸ್ಫೂರ್ತಿದಾತರಾಗಿರುವ ಕೀರ್ತಿಶೇಷರಾದ ಶೇಣಿ ಗೋಪಾಲಕೃಷ್ಣ ಭಟ್‌, ಮಲ್ಪೆ ರಾಮದಾಸ ಸಾಮಗ, ಪೊಲ್ಯ ದೇಜಪ್ಪ ಶೆಟ್ಟಿ, ಕಪ್ಪೆಟ್ಟು ಬೋಳ ಪೂಜಾರಿ, ಸುಧೀರ್‌ ಎಸ್‌.ಎಲ್‌. ಭಟ್‌ ಅವರ ಸಂಸ್ಮರಣೆಯ ದ್ಯೋತಕವಾಗಿ “ಪಂಚರತ್ನ ದೀಪಮಾಲಾ’ ಪ್ರಜ್ವಲನೆ ಮಾಡಿ ತಾಳಮದ್ದಳೆಯೊಂದಿಗೆ ಎಳೆಯ ಪೀಳಿಗೆಗೆ ತುಳುನಾಡಿನ ಪುರಾಣ, ಇತಿಹಾಸ ಮತ್ತು ಸಂಸ್ಕೃತಿ ಸಂಪನ್ನತೆಗಳನ್ನು ಪರಿಚಯಿಸುವ ಪ್ರಯತ್ನದ ಅಂಗವಾಗಿ ತುಳು ಯಕ್ಷಗಾನ ಪ್ರದರ್ಶನವನ್ನು ಪ್ರಾರಂಭಿಸಲಾಯಿತು.

ತ್ರಿಂಶತಿ ಆಚರಣೆ
ಈ ಬಾರಿ ಸುಧಾಕರ ಆಚಾರ್ಯರ ಕಲಾರಾಧನೆಯ ಸ್ವಾತಂತ್ರ್ಯೋತ್ಸವದ ಮೂವತ್ತರ ವರ್ಷಾಚರಣೆಯನ್ನು ಉಡುಪಿಯ ಪಿಪಿಸಿ ಅಡಿಟೋರಿಯಂನಲ್ಲಿ ಮಧ್ಯಾಹ್ನ 1.30ರಿಂದ ಹೆಸರಾಂತ ಕಲಾವಿದರ ಸಮ್ಮಿಲದೊಂದಿಗೆ “ಅಂಬೆ’ ತಾಳಮದ್ದಳೆ ಹಾಗೂ ತುಳು ಯಕ್ಷಗಾನ-“ತುಳುನಾಡ ಬಲಿಯೇಂದ್ರ’ ಪ್ರದರ್ಶನಗೊಳ್ಳಲಿದೆ.

Advertisement

ತ್ರಿಂಶತಿ ಆಚರಣೆ ಪ್ರಯುಕ್ತ ಕಟೀಲು, ಸಾಲಿಗ್ರಾಮ ಮತ್ತು ಕೆರೆಮನೆ ಇಡಗುಂಜಿ ಮೇಳಗಳ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಪಳ್ಳಿ ಕಿಶನ್‌ ಹೆಗ್ಡೆ, ಕೆರೆಮನೆ ಶಿವಾನಂದ ಹೆಗಡೆ ಅವರನ್ನು ಸಮ್ಮಾನಿಸಲಾಗುವುದು.

ಪ್ರಾರಂಭದ ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿ ಭಾಗವಹಿಸಿದ್ದ ಕೀರ್ತಿಶೇಷ ಪೊಲ್ಯ ದೇಜಪ್ಪ ಶೆಟ್ಟಿ ಅವರ ಪುತ್ರ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮುಂಬಯಿ ಅವರು ತ್ರಿಂಶತಿ ಆಚರಣೆಯ ತುಳು ಯಕ್ಷಗಾನದಲ್ಲಿ ಭಾಗವತರಾಗಿ ಭಾಗವಹಿಸಲಿದ್ದು, ಅವರನ್ನು ಕಲಾ ಗೌರವ ನೀಡಿ ಅಭಿನಂದಿಸಲಾಗುವುದು.

ಎಸ್‌.ಜಿ.ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next