ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಮಾಜ ಸೇವೆಗಾಗಿ ಲೇಖಕಿ, ಇನ್ಫೋಸಿಸ್ ನ ಸುಧಾ ಮೂರ್ತಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತ, ನನಗೆ ಲಭಿಸಿರುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ದೇಶದ ಮಹಾನ್ ಜನತೆಗೆ ಅರ್ಪಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:World Cup ಕನಸು ಕಿತ್ತ ಗಾಯ! ವಿಶ್ವಕಪ್ ನಿಂದಲೂ ಹೊರಬಿದ್ದ ಕಿವೀಸ್ ನಾಯಕ
“ ಈ ಪ್ರಶಸ್ತಿಗೆ ನನ್ನ ಗುರುತಿಸಿರುವುದರಿಂದ ದೇಶದ ಯುವ ಸಮುದಾಯವು ಸಾಮಾಜಿಕ ಕಾರ್ಯ ಮತ್ತು ಸೇವೆಗಳಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ನೈಜ ಸ್ಫೂರ್ತಿ ನೀಡುತ್ತದೆ. ನಮ್ಮ ಮಹಾನ್ ಮತ್ತು ಬೃಹತ್ ದೇಶದ ನಿರಂತರ ಅಭಿವೃದ್ಧಿಗೆ ಇದು ಇಂದಿನ ಅಗತ್ಯವೂ ಆಗಿದೆ. ಕೆಲವು ವ್ಯಕ್ತಿಗಳ ಉದಾರ ಮನೋಭಾವವು ಲಕ್ಷಾಂತರ ಜನರ ಪಾಲಿಗೆ ಅಪಾರ ಭರವಸೆ ಮತ್ತು ಆಶಾವಾದ ಮೂಡಿಸುತ್ತದೆ ಎಂದು ನಾನು ಸದಾ ಭಾವಿಸುತ್ತೇನೆ” ಎಂದು ಸುಧಾಮೂರ್ತಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಬುಧವಾರ ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸುಧಾ ಮೂರ್ತಿ ಪುತ್ರಿ, ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಪತ್ನಿ ಅಕ್ಷತಾ ಮೂರ್ತಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಚಿವ ಎಸ್.ಜೈಶಂಕರ್, ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ರಾಷ್ಟ್ರಪತಿ ಭವನದ ಮೆಜೆಸ್ಟಿಕ್ ದರ್ಬಾರ್ ಹಾಲ್ ನಲ್ಲಿ ನಡೆದ ಪದ್ಮಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಗೀತೆ ನುಡಿಸಿದ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪಕ್ಕದಲ್ಲೇ ಅಕ್ಷತಾ ಮೂರ್ತಿ ನಿಂತಿರುವ ಫೋಟೋ ಅಂತರ್ಜಾಲ ತಾಣ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ವರದಿ ತಿಳಿಸಿದೆ.