ಕುಳಗೇರಿ ಕ್ರಾಸ್(ಬಾಗಲಕೋಟೆ) : ಇಲ್ಲಿಯ ಕಲ್ಲಾಪೂರ ಎಸ್‌ಕೆ ಗ್ರಾಮದ ಎಮ್‌ಆರ್‌ಎನ್ ಸಕ್ಕರೆ ಕಾರ್ಖಾನೆಗೆ ಕುಳಗೇರಿ ಹೋಬಳಿ ಸುತ್ತಲಿನ ರೈತರು ದಿಢೀರ್ ಮುತ್ತಿಗೆ ಹಾಕುವ ಮೂಲಕ ಕಾರ್ಖಾನೆ ಬಂದ್ ಮಾಡಿಸಿ ಘೋಷಣೆ ಕೂಗುತ್ತ ಪ್ರತಿಭಟನೆ ಪ್ರಾರಂಭಿಸಿದರು.
ಕಬ್ಬು ಬೆಳೆದ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು 144 ಕಲಂ ಜಾರಿ ಇದೆ ಇಲ್ಲಿ ಯಾರು ನಿಲ್ಲುವಂತಿಲ್ಲ ಎಂದು ಗದರಿಸಲು ಪ್ರಾರಂಭಿಸಿದರು. ಪೊಲೀಸರ ಗೊಡ್ಡು ಬೆದರಿಕೆಗೆ ಹೆದರದ ರೈತರು ನಾವು ಸಮಾಧಾನವಾಗಿ ನಮ್ಮ ಪ್ರತಿಭಟನೆ ಪ್ರಾರಂಭಿಸಿದ್ದೆವೆ ನೀವು ಏನುಬೇಕಾದರು ಮಾಡಿಕೊಳ್ಳಿ ಎಂದು ರೈತರು ತಿರುಗಿದ ತಕ್ಷಣ ದಾರಿ ಬದಲಿಸಿದ ಪೊಲೀಸರು ನಂತರ ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಟ್ಟರು.
ಕೆಲವರು ನಮ್ಮ ರೈತರನ್ನ ಇಬ್ಬಾಗ ಮಾಡಿ ನಮ್ಮ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲೇ ಜಗಳ ಹಚ್ಚಿ ಮೋಜು ನೋಡುತ್ತಿದ್ದಾರೆ ಇದಕ್ಕೆಲ್ಲ ಬಗ್ಗುವುದಿಲ್ಲ ಎಂದು ರೈತರು ಗುಡುಗಿದರು.
ಕಾರ್ಖಾನೆಯವರು 2900 ರೂ. ನಿಗದಿ ಮಾಡಿ ಲೇಖಿ ಮೂಲಕ ನಮಗೆ ಬರೆದು ಕೊಡಬೇಕು. ನಮ್ಮ ಬೇಡಿಕೆ ಇಡೇರುವ ತನಕ ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಬಂದ್ ಮಾಡಬೇಕು ಎಂದು ಪಟ್ಟು ಹಿಡಿದರು.
Related Articles
ರೈತರನ್ನ ಸಮಾಧಾನ ಮಾಡಿದ ಕಾರ್ಖಾನೆ ಆಡಳಿತ ಮಂಡಳಿಯವರು ಸುಮಾರು ಹೊತ್ತು ಕಾಯಿಸಿ ನಂತರ ಲೇಖಿ ಮೂಲಕ ನಾವು ಏನನ್ನೂ ಕೊಡೋಕೆ ಆಗಲ್ಲ ಎಂದು ಜಾರಿಕೊಂಡಿದ್ದರಿಂದ ರೈತರನ್ನ ಮತ್ತಷ್ಟು ರೊಚ್ಚಿಗೆಳುವಂತೆ ಮಾಡಿದರು ರೈತರು ಮತ್ತೆ ಪ್ರತಿಭಟನೆಗೆ ಮುಂದಾದರು. ಮದ್ಯೆ ಪ್ರವೇಶಿಸಿದ ಪೊಲೀಸ್ ಅಧಿಕಾರಿಗಳು ಕಟಾವಾದ ಕಬ್ಬು ನಿಮ್ಮ ರೈತರದ್ದೇ ಅದು ಹಾಳಾಗುವುದು ಬೇಡ ತಂದ ಕಬ್ಬು ನುರಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.
ಗಡುವು: ಇಲ್ಲಿಯ ವರೆಗೆ ಕಟಾವಾದ ಕಬ್ಬು ನುರಿಸಿ ನಂತರ ನಾವು ನಮ್ಮ ಬೇಡಿಕೆ ಇಡೇರುವ ತನಕ ಕಬ್ಬು ನುರಿಸಲು ಅವಕಾಶ ಕೊಡುವುದಿಲ್ಲ ಎಂದು ರೈತರು ರವಿವಾರದ ವರೆಗೆ ಕಾರ್ಖಾನೆಯವರಿಗೆ ಗಡುವು ಕೊಟ್ಟರು.
ಆರೋಪ
ನಮ್ಮ ಕಬ್ಬನ್ನು ಬೇರೆಕಡೆ ತೂಕ ಮಾಡಿಸಿ ಕಾರ್ಖಾನೆಗೆ ತಂದು ತೂಕ ಮಾಡಿಸಿದರೆ ತೂಕದಲ್ಲೂ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಕೆಲ ರೈತರು ರಸಿದಿ ಸಮೇತ ತಂದು ಎಮ್‌ಆರ್‌ಎನ್ ಕಾರ್ಖಾನೆ ಮಾಲಿಕನ ವಿರುದ್ಧ ಆರೋಪಿಸಿದರು. ರೈತರಿಗೆ ಎಲ್ಲ ಕಡೆ ಮೋಸವಾದರೆ ನಾವು ಬದುಕುವುದಾದರು ಹೇಗೆ ಎಂದು ಪತ್ರಿಕೆ ಮುಂದೆ ತಮ್ಮ ಅಳಲು ತೋಡಿಕೊಂಡರು.
ನೀಲಗುಂದ, ಹನಮಸಾಗರ, ನರಸಾಪೂರ, ಕುಳಗೇರಿ, ಖಾನಾಪೂರ, ಸೋಮನಕೊಪ್ಪ, ಚಿರ್ಲಕೊಪ್ಪ, ಬೆಳಕೊಪ್ಪ, ಬಂಕನೇರಿ, ವಡವಟ್ಟಿ, ಬೀರನೂರ, ಗೋವನಕೊಪ್ಪ ತಳಕವಾಡ, ಹಾಗನೂರು ಆಲೂರು ಎಸ್‌ಕೆ, ಕರ್ಲಕೊಪ್ಪ, ಕಾಕನೂರು, ಚಿಮ್ಮನಟ್ಟಿ ಹಿಗೆ 15ಕ್ಕೂ ಹೆಚ್ಚು ಗ್ರಾಮದ ರೈತರು ಭಾಗವಹಿಸಿದ್ದರು. ಕಾರ್ಖಾನೆಯವರ ಪರ ಬ್ಯಾಟಿಂಗ್ ಮಾಡಿ ಮಾಡತನಾಡುತ್ತಿದ್ದ ಕೆಲ ರೈತರನ್ನ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.