ಹಟ್ಟಿಚಿನ್ನಗಣಿ: ಹಟ್ಟಿಚಿನ್ನದಗಣಿ ಕಾರ್ಮಿಕರು ಹಾಗೂ ಕಾರ್ಮಿಕರ ಕುಟುಂಬದವರಿಗೆ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಹಟ್ಟಿಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘ (ಎಐಟಿಯುಸಿ)ದ ಮುಖಂಡರು ಶುಕ್ರವಾರ ಆಸ್ಪತ್ರೆ ಆವರಣದ ಮುಂದೆ ಹಠಾತ್ ಪ್ರತಿಭಟನೆ ನಡೆಸಿದರು.
ಗಣಿ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿಲ್ಲ. ಕಾರ್ಮಿಕರಿಗೆ ಅನಾರೋಗ್ಯ ಉಂಟಾದರೆ ದೂರದ ಊರಿನ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತಿದೆ. ಇದರಿಂದ ಎಷ್ಟೋ ಕಾರ್ಮಿಕರು ರಸ್ತೆ ಮಧ್ಯೆಯೇ ಮರಣ ಹೊಂದಿದ ಘಟನೆಗಳು ಜರುಗಿವೆ.
ಪ್ರಸ್ತುತ ಇರುವ ಆಸ್ಪತ್ರೆಗಳ ಬದಲು ಅಪೊಲೊದಂತಹ ಗುಣಮಟ್ಟದ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ರೆಫರಲ್ ಪದ್ಧತಿ ಜಾರಿಗೆ ತರಬೇಕು. ಆಸ್ಪತ್ರೆಯಲ್ಲಿ ಐಸಿಯು ಘಟಕ ಸ್ಥಾಪಿಸಬೇಕು. ಈಗಿರುವ ಜನೌಷಧಿ ಔಷಧಗಳ ಬದಲು ಗುಣಮಟ್ಟದ ಔಷಧಗಳನ್ನು ಕಂಪನಿ ಆಸ್ಪತ್ರೆಯಲ್ಲಿಯೇ ವಿತರಿಸಬೇಕು. ಕಾರ್ಮಿಕರು ತಮ್ಮ ಜೀವವನ್ನು ಲೆಕ್ಕಿಸದೆ ಗಣಿ ಕಂಪನಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕಾರ್ಮಿಕರು ಬೆವರು ಸುರಿಸಿ ಸಂಪಾದಿಸಿದ ಕೋಟ್ಯಂತರ ರೂ. ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುವ ಬದಲು ಗಣಿ ಕಂಪನಿಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕಾರ್ಮಿಕ ಮುಖಂಡರಾದ ತಿಪ್ಪಣ್ಣ, ಲೋಗನಾಥನ್, ವಿಠಲ ದಾಸ್, ಸಿದ್ದಪ್ಪ ಮುಂಡರಗಿ, ಸೋಮಣ್ಣ ನಾಯಕ, ಕನಕರಾಜಗೌಡ ಗುರಿಕಾರ್, ದುರುಗಪ್ಪ, ರಾಮಣ್ಣ, ಯಲ್ಲಪ್ಪ, ವೆಂಕೋಬ ಮಿಯಾಪೂರು, ವಜ್ರಯ್ಯ, ಕುಟ್ಟಿಮಾ ಸೇರಿದಂತೆ ಕಾರ್ಮಿಕರು ಇದ್ದರು.