Advertisement

ಜೀವಗಳನ್ನು ಉಳಿಸಲು ಮೂಲ ಜೀವನ ಬೆಂಬಲ

03:36 PM Oct 02, 2022 | Team Udayavani |

ಈ ಲೇಖನವು ಹೃದಯ ಸ್ತಂಭನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ. ಹೃದಯ ಸ್ತಂಭನವು ಬಹು ಸಾಮಾನ್ಯ. ಆದರೆ ಮಾರಣಾಂತಿಕ ಆರೋಗ್ಯ ಸಮಸ್ಯೆ ಹಾಗೂ ತುರ್ತುಸ್ಥಿತಿಯಾಗಿದೆ. ಇದು ಸಾಮಾನ್ಯವಾಗಿ ಆಸ್ಪತ್ರೆಯ ಹೊರಗೆ ಸಂಭವಿಸುತ್ತದೆ. ತತ್‌ಕ್ಷಣದ ಗುರುತಿಸುವಿಕೆ ಮತ್ತು ಸನ್ನದ್ಧತೆಯು ಈ ತುರ್ತು ಸಂದರ್ಭಗಳಲ್ಲಿ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ.

Advertisement

ಹೃದಯ ಸ್ತಂಭನ ಎಂದರೆ ಏನು? ಹೃದಯ ಸ್ತಂಭನ ಅಥವಾ ಹಠಾತ್‌ ಕಾರ್ಡಿಯಾಕ್‌ ಅರೆಸ್ಟ್‌ (Sudden Cardiac Arrest) ಎಂದರೆ ಹೃದಯವು ಇದ್ದಕ್ಕಿದ್ದಂತೆ ನಿಲ್ಲುವುದು ಅಥವಾ ಹೃದಯದ ಕಾರ್ಯಚಟುವಟಿಕೆಯನ್ನು ಹಠಾತ್ತನೆ ಕಳೆದುಕೊಳ್ಳುವುದು. ಇದು ಇದ್ದಕ್ಕಿದ್ದಂತೆ ಅಥವಾ ಇತರ ರೋಗಲಕ್ಷಣಗಳ ಹಿನ್ನೆಲೆಯಲ್ಲಿ ಉಂಟಾಗಬಹುದು. ಸರಿಯಾದ ಕ್ರಮಗಳನ್ನು ತತ್‌ ಕ್ಷಣವೇ ತೆಗೆದುಕೊಳ್ಳದಿದ್ದರೆ ಹೃದಯ ಸ್ತಂಭನವು ಸಾಮಾನ್ಯವಾಗಿ ಮಾರಣಾಂತಿಕವಾಗಬಹುದು.

ಸಮಸ್ಯೆಯ ಪ್ರಮಾಣ ಇಂದಿನ ಯುಗದಲ್ಲಿ ಯುವ ಜನರಲ್ಲಿ ಹೃದ್ರೋಗಗಳು ಹೆಚ್ಚುತ್ತಿರುವುದನ್ನು ನೋಡಿದರೆ ಆಶ್ಚರ್ಯವೇನಿಲ್ಲ. ಇತ್ತೀಚಿನ ಸಂಶೋಧನೆಯ ಪ್ರಕಾರ 30ರಿಂದ 40ರ ಮಧ್ಯದ ವಯಸ್ಸಿನವರಲ್ಲಿ ಹಠಾತ್‌ ಹೃದಯ ಸ್ತಂಭನದಲ್ಲಿ ಶೇ. 13 ಹೆಚ್ಚಳವಾಗಿದೆ ಎಂದು ಗಮನಿಸಲಾಗಿದೆ. ಇದಲ್ಲದೆ ಇಂಡಿಯನ್‌ ಹಾರ್ಟ್‌ ಅಸೋಸಿಯೇಶನ್‌ನ ಪ್ರಕಾರ, ಹೃದ್ರೋಗವು ಭಾರತೀಯರಲ್ಲಿ ಎಚ್ಚರಿಕೆಯಿಲ್ಲದೆಯೇ ಇತರ ಪ್ರದೇಶಗಳಿಗಿಂತ ಮುಂಚೆಯೇ ಸಂಭವಿಸುತ್ತದೆ. ಪಾಶ್ಚಾತ್ಯ ಜನರಿಗಿಂತ ಕನಿಷ್ಟ 10 ವರ್ಷಗಳ ಮೊದಲು ಭಾರತೀಯರು ಹೃದ್ರೋಗದಿಂದ ಬಳಲುತ್ತಿದ್ದಾರೆ ಎಂದು ಕೆಲವು ಅಧ್ಯಯನಗಳು ಕಂಡುಕೊಂಡಿವೆ. ಜಡ ಜೀವನ ಶೈಲಿ, ಮಧುಮೇಹ, ಹೆಚ್ಚುತ್ತಿರುವ ಮದ್ಯಪಾನ, ಧೂಮಪಾನ ಮತ್ತು ಅಧಿಕ ರಕ್ತದೊತ್ತಡದಿಂದಾಗಿ ಯುವಕರಲ್ಲಿ ಹಠಾತ್‌ ಕಾರ್ಡಿಯಾಕ್‌ ಅರೆಸ್ಟ್‌ (Sudden Cardiac Arrest) ಸಂಭವವು ಹೆಚ್ಚುತ್ತಿದೆ. ಆದಾಗ್ಯೂ ಕೆಲವು ರೋಗಿಗಳು ಯಾವುದೇ ಅಪಾಯಕಾರಿ ಅಂಶವನ್ನು ಹೊಂದಿಲ್ಲದಿರಬಹುದು. ಆದ್ದರಿಂದ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವ ಮೂಲಕ ಯುವ ಜನರಲ್ಲಿ ಹೃದಯ ಸ್ತಂಭನದ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ.

ಹೃದಯಾಘಾತವು ಹೃದಯ ಸ್ತಂಭನಕ್ಕೆ ಸಮಾನವೇ? ಇಲ್ಲ, “ಹೃದಯಾಘಾತ’ ಎಂಬ ಪದವನ್ನು ಸಾಮಾನ್ಯವಾಗಿ ಹೃದಯ ಸ್ತಂಭನವನ್ನು ವಿವರಿಸಲು ತಪ್ಪಾಗಿ ಬಳಸಲಾಗುತ್ತದೆ. ಹೃದಯಾಘಾತವು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು. ಆದರೆ ಇವೆರಡೂ ಒಂದೇ ಆಗಿರುವುದಿಲ್ಲ.

ಹೃದಯಾಘಾತ ಮತ್ತು ಹೃದಯ ಸ್ತಂಭನದ ನಡುವಿನ ವ್ಯತ್ಯಾಸ ಏನು? ಹೃದಯಾಘಾತವು ಹೃದಯಕ್ಕೆ ರಕ್ತದ ಹರಿವನ್ನು ನಿಲ್ಲಿಸುವ ಅಡಚಣೆಯಿಂದ ಉಂಟಾಗುತ್ತದೆ. ಹೃದಯಾಘಾತವು ರಕ್ತ ಪೂರೈಕೆಯ ನಷ್ಟದಿಂದಾಗಿ ಹೃದಯ ಸ್ನಾಯುವಿನ ಅಂಗಾಂಶದ ಸಾವನ್ನು ಸೂಚಿಸುತ್ತದೆ. ಇದು “ಪರಿಚಲನೆ’ ಸಮಸ್ಯೆಯಾಗಿದೆ. ಹೃದಯಾಘಾತವು ಕೆಲವೊಮ್ಮೆ ಗಂಬೀರವಾಗಿದ್ದರೆ ಮಾರಣಾಂತಿಕವಾಗಬಹುದು.

Advertisement

ಇದಕ್ಕೆ ವಿರುದ್ಧವಾಗಿ ಹೃದಯದ ವಿದ್ಯುತ್‌ ವ್ಯವಸ್ಥೆಯು ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದಾಗ ಹೃದಯ ಸ್ತಂಭನ ಉಂಟಾಗುತ್ತದೆ. ಹೃದಯದ ಬಡಿತ ನಿಲ್ಲುತ್ತದೆ. ಹೃದಯದ ಪಂಪ್‌ ಮಾಡುವ ಕಾರ್ಯವು ಸ್ಥಗಿತಗೊಳ್ಳುತ್ತದೆ.

ಹೃದಯ ಸ್ತಂಭನವಾದಲ್ಲಿ ಸರಿಯಾದ ಕ್ರಮಗಳನ್ನು ತತ್‌ಕ್ಷಣವೇ ತೆಗೆದುಕೊಳ್ಳದಿದ್ದರೆ ಸಾವು ತ್ವರಿತವಾಗಿ ಉಂಟಾಗುತ್ತದೆ. ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್‌ (ಸಿಪಿಆರ್‌)ನಡೆಸಿದರೆ ಮತ್ತು ಡಿಫಿಬ್ರಿಲೇಟರ್‌ ಬಳಸಿ ಕೆಲವು ನಿಮಿಷಗಳಲ್ಲಿ ಸಾಮಾನ್ಯ ಹೃದಯದ ಲಯವನ್ನು ಮರುಸ್ಥಾಪಿಸಿದರೆ ಹೃದಯ ಸ್ತಂಭನವನ್ನು ತಡೆಯಬಹುದು.

ಹೃದಯ ಸ್ತಂಭನಕ್ಕೆ ಏನು ಕಾರಣಗಳು? ಹೃದಯ ಸ್ತಂಭನವು ಯಾವುದೇ ಹೃದಯ ಸಂಬಂಧಿ ಕಾಯಿಲೆ ಅಥವಾ ಆಘಾತ, ಪಾರ್ಶ್ವ ವಾಯು (ಸ್ಟ್ರೋಕ್‌), ಮುಳುಗುವಿಕೆ, ವಿಷ ಸೇವನೆಯಂತಹ ಹಲವಾರು ಕಾರಣಗಳಿಂದ ಸಂಭವಿಸಬಹುದು. ಅರ್ಹೆತ್ಮಿಯಾಸ್ (Arrythmias) ಎಂದು ಕರೆಯಲ್ಪಡುವ ಅನಿಯಮಿತ ಹೃದಯ ಬಡಿತದಿಂದ ಹೃದಯ ಸ್ತಂಭನ ಉಂಟಾಗಬಹುದು. ಹೃದಯ ಸ್ತಂಭನಕ್ಕೆ ಸಂಬಂಧಿಸಿದ ಸಾಮಾನ್ಯ ಅರ್ಹೆತ್ಮಿಯಾವೆಂದರೆ ಕುಹರದ ಕಂಪನ (Ventricular fi brillation).

-ಮುಂದಿನ ವಾರಕ್ಕೆ

-ಡಾ| ಸುಷ್ಮಾ ಪ್ರಭಾತ್‌, ಅಸಿಸ್ಟೆಂಟ್‌ ಪ್ರೊಫೆಸರ್‌

ಡಾ| ಆ್ಯನ್‌ ಡಿ’ಸೋಜಾ, ಅಸೋಸಿಯೇಟ್‌ ಪ್ರೊಫೆಸರ್‌, ಅಂಗರಚನಾಶಾಸ್ತ್ರ ವಿಭಾಗ

-ಡಾ| ಪೃಥ್ವಿಶ್ರೀ ರವೀಂದ್ರ, ಅಸೋಸಿಯೇಟ್‌ ಪ್ರೊಫೆಸರ್‌, ತುರ್ತು ವೈದ್ಯಕೀಯ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಡಿಪಾರ್ಟ್‌ಮೆಂಟ್‌ ಆಫ್ ಎಮರ್ಜೆನ್ಸಿ ಮೆಡಿಸಿನ್‌, ಕೆಎಂಸಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next