Advertisement

ಮಂಗಳೂರು: ಎಂಟು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು: ಸುದರ್ಶನ್‌

12:30 AM Feb 28, 2023 | Team Udayavani |

ಮಂಗಳೂರು : ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು ಜಿಲ್ಲೆಯ ಪ್ರತಿ ವಿಧಾನ ಸಭಾ ಕ್ಷೇತ್ರ, ಗ್ರಾಮ, ಬೂತ್‌ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಪ್ರಗತಿ ರಥ ಯಾತ್ರೆಗೆ ಸೋಮವಾರ ಕದ್ರಿ ಮೈದಾನದಲ್ಲಿ ಚಾಲನೆ ನೀಡಲಾಯಿತು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಮತ್ತು ಶಾಸಕ ವೇದವ್ಯಾಸ ಕಾಮತ್‌ ಅವರು ಪ್ರಗತಿ ರಥಕ್ಕೆ ಚಾಲನೆ ನೀಡಿದರು. ಬಳಿಕ ಸುದರ್ಶನ್‌ ಮೂಡುಬಿದಿರೆ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಹಾಗೂ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಜನಪರ ಕೆಲಸಗಳನ್ನು ಜನರ ಮನೆ-ಮನಗಳಿಗೆ ತಲುಪಿಸುವ ಉದ್ದೇಶದಿಂದ ಬಿಜೆಪಿಯೇ ಭರವಸೆ ಪ್ರಗತಿ ರಥ ಯಾತ್ರೆಗೆ ಚಾಲನೆ ನೀಡಲಾಗಿದೆ. ಯುವಮೋರ್ಚಾ ಪದಾಧಿಕಾರಿಗಳು ಯಾತ್ರೆಯೊಂದಿಗೆ ಪ್ರತಿ ಗ್ರಾಮಕ್ಕೂ ಭೇಟಿ ನೀಡಲಿದ್ದಾರೆ. ಈ ಬಾರಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದು, ಜಿಲ್ಲೆಯಲ್ಲೂ ಎಲ್ಲ 8 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಶಾಸಕರು ವಿಧಾನ ಸಭೆ ಪ್ರವೇಶಿಸಲಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ರಥಯಾತ್ರೆ ವೇಳೆ ಬಿಜೆಪಿ ಸಾಧನೆಗಳನ್ನು ಪ್ರಚುರಪಡಿಸುವ ಜತೆಗೆ, ಚುನಾವಣೆ ಪ್ರಣಾಳಿಕೆಗೆ ಸಲಹೆ – ಸೂಚನೆಗಳನ್ನೂ ಸಾರ್ವಜನಿಕರಿಂದ ಸಂಗ್ರಹಿಸಲಾಗುವುದು. ಎಲ್ಲವನ್ನೂ ಕ್ರೋಢೀಕರಿಸಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಾಗುವುದು. ಆ ಮೂಲಕ ಜನಪರ ಪ್ರಣಾಳಿಕೆ ಪಕ್ಷ ಸಿದ್ಧಪಡಿಸಲಿದೆ ಎಂದರು.

ರಥ ಯಾತ್ರೆಯ ರಾಜ್ಯ ಸಹ ಪ್ರಭಾರಿ ಪ್ರೇಮಾನಂದ ಶೆಟ್ಟಿ, ಮೇಯರ್‌ ಜಯಾನಂದ ಅಂಚನ್‌, ಉಪಮೇಯರ್‌ ಪೂರ್ಣಿಮಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್‌ ಶೆಟ್ಟಿ ಕಣ್ಣೂರು, ಕಸ್ತೂರಿ ಪಂಜ, ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್‌ ಶೆಟ್ಟಿ, ಪ್ರಮುಖರಾದ ಪ್ರಸಾದ್‌ ಕುಮಾರ್‌, ಈಶ್ವರ ಕಟೀಲ್‌, ರಾಮದಾಸ್‌ ಬಂಟ್ವಾಳ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್‌ ನಾಯಕ್‌, ಯುವ ಮೋರ್ಚಾ ದಕ್ಷಿಣ ಮಂಡಳ ಅಧ್ಯಕ್ಷ ಸಚಿನ್‌ರಾಜ್‌ ರೈ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲೆಗೆ ಆರು ವಾಹನ
ಜಿಲ್ಲೆಗೆ ಒಟ್ಟು ಆರು ವಾಹನಗಳು ಬಂದಿದ್ದು, ಎಲ್ಲ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇದು ಸಂಚರಿಸಲಿದೆ. ಮಂಗಳೂರು ದಕ್ಷಿಣ ಮತ್ತು ಉತ್ತರದಲ್ಲಿ ಒಂದು, ಮಂಗಳೂರು ಮತ್ತು ಬಂಟ್ವಾಳ ಕ್ಷೇತ್ರದಲ್ಲಿ ಒಂದು ವಾಹನ ಸಂಚರಿಸಲಿದ್ದು, ಉಳಿದಂತೆ ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ ಕ್ಷೇತ್ರದಲ್ಲಿ ತಲಾ ಒಂದೊಂದು ವಾಹನ ಸಂಚರಿಸಲಿದೆ. ಎಲ್‌ಇಡಿ ಸ್ಕ್ರೀನ್‌ ಮೂಲಕ ವೀಡಿಯೋಗಳನ್ನು ಪ್ರದರ್ಶಿಸಿ ಜನರಿಗೆ ಸರಕಾರದ ಸಾಧನೆ ವಿವರಿಸಲಾಗುತ್ತದೆ. ನೇರ ಪ್ರಸಾರಕ್ಕೂ ವಾಹನದಲ್ಲಿ ಅವಕಾಶವಿದ್ದು, ಆಯ್ದ ಕಡೆ ಪ್ರಧಾನಿಯವರ ಭಾಷಣವನ್ನು ನೇರ ಪ್ರಸಾರ ಮಾಡಲಾಗುತ್ತದೆ ಎಂದು ರಥ ಯಾತ್ರೆಯ ರಾಜ್ಯ ಸಹ ಪ್ರಭಾರಿ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next