ಬೆಂಗಳೂರು: ಸುಡಾನ್ ನಲ್ಲಿ ಅನ್ನ ಆಹಾರ ಇಲ್ಲದೆ ಸಂಕಷ್ಟದಲ್ಲಿರುವ ಕನ್ನಡಿಗ ಹಕ್ಕಿಪಿಕ್ಕಿ ಜನಾಂಗದವರ ರಕ್ಷಣೆಗೆ ಧಾವಿಸದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕನ್ನಡಿಗರ ಗೋಳಿಗೆ ಸೂಡಾನ್ ನ ರಾಯಭಾರ ಕಚೇರಿ ನೀಡಿರುವ ಪ್ರತಿಕ್ರಿಯೆ ಕುರಿತು ಪತ್ರಿಕಾ ಹೇಳಿಕೆ ನೀಡಿದ ಸಿದ್ದರಾಮಯ್ಯ “ನಮಗೆ ತಿನ್ನುವುದಕ್ಕೆ ಏನೂ ಇಲ್ಲ, ನಿಮಗೆ ಏನು ಮಾಡಲಿಕ್ಕೆ ಸಾಧ್ಯ? ನೀವು ಇರುವ ಸ್ಥಳದಲ್ಲಿಯೇ ಬಾಗಿಲು ಹಾಕಿಕೊಂಡು ಇರಿ” ಎಂದು ಕಷ್ಟದಲ್ಲಿರುವ ನಮ್ಮ ಕನ್ನಡಿಗರ ಗೋಳಿಗೆ ಸುಡಾನ್‌ನ ರಾಯಭಾರ ಕಚೇರಿಯ ಪ್ರತಿಕ್ರಿಯೆ. ವಿದೇಶಾಂಗ ವ್ಯವಹಾರಗಳ ಸಚಿವರಾದ ಸನ್ಮಾನ್ಯ ಜೈಶಂಕರ್ ಅವರೇ ಇದನ್ನು ಕೇಳಿ ಗಾಬರಿಯಾಗಲಿಲ್ಲವೇ? ಎಂದು ಕಿಡಿಕಾರಿದ್ದಾರೆ.
ಸುಡಾನ್‌ನಲ್ಲಿ ಕಳೆದ 8-10 ದಿನಗಳಿಂದ ನಮ್ಮ ಕನ್ನಡಿಗ ಹಕ್ಕಿಪಿಕ್ಕಿ ಜನಾಂಗದವರು ತಿನ್ನಲು ಅನ್ನ ಇಲ್ಲದೆ, ಕುಡಿಯಲು ನೀರಿಲ್ಲದೆ ನರಳಾಡುತ್ತಿದ್ದಾರೆ. ನಮ್ಮ ‘ವಿಶ್ವಗುರು’ ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ – ಭರವಸೆಗಳಲ್ಲಿ ಕಾಲಕಳೆಯುತ್ತಿದ್ದಾರೆ. ಆದರೆ ಕನ್ನಡಿಗರ ರಕ್ಷಣೆಗೆ ಯಾರಿದ್ದಾರೆ?
ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಚುನಾವಣೆಯ ಬುರುಡೆ ಭಾಷಣಗಳ ಮಧ್ಯೆ ಬಿಡುವಾದರೆ ಸುಡಾನ್‌ನಲ್ಲಿ ಕಷ್ಟದಲ್ಲಿರುವ ಕನ್ನಡಿಗರ ಕಡೆ ಗಮನ ಕೊಡಿ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಶ್ವರಪ್ಪನವರಿಗೆ ಪೋನ್ ಮಾಡಲು ಇರುವಷ್ಟು ಪುರುಸೊತ್ತು ಕನ್ನಡಿಗರ ರಕ್ಷಣೆಗೆ ಇಲ್ಲವೇ? ಎಂದು ಕೇಳಿ ಎಂದು ಪ್ರಶ್ನೆ ಮಾಡಿದ್ದಾರೆ.