Advertisement

ಭಾರತ ಬಂದ್ ಬೆಂಬಲಿಸಿದ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷ

11:28 AM Sep 25, 2021 | Team Udayavani |

ವಾಡಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ ಯುಸಿಐ) ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಹಾಗೂ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್ ಕೆಎಸ್) ಪದಾಧಿಕಾರಿಗಳು ಶನಿವಾರ ಭಾರತ್ ಬಂದ್ ಹೋರಾಟದ ಪ್ರಚಾರ ಕೈಗೊಂಡರು. ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಜೀಪ್ ಜಾಥಾ ಉದ್ಘಾಟಿಸಿ ಮಾತನಾಡಿದ ಎಸ್ ಯುಸಿಐ ಕಾರ್ಯದರ್ಶಿ ಕಾಮ್ರೇಡ್ ಆರ್.ಕೆ.ವೀರಭದ್ರಪ್ಪ, ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಬಿಜೆಪಿ ಸರಕಾರ ದೇಶದ ರೈತರನ್ನು ಬೀದಿಪಾಲು ಮಾಡಲು ಸಿದ್ದತೆ ಮಾಡಿಕೊಂಡಿದೆ. ಉಳುವ ನೇಗಿಲ ಯೋಗಿಗಳನ್ನು ಕೃಷಿ ಭೂಮಿಯಿಂದ ಒಕ್ಕಲೆಬ್ಬಿಸಿ ಕಾರ್ಪೋರೇಟ್ ಕಂಪನಿಗಳ ಗುಲಾಮರನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿ ಯವರು ಹೊಸ ಕುಣಿಕೆ ಹೆಣೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಿಜೆಪಿ ಆಡಳಿತ ಶುರುವಾದಂದಿನಿಂದ ದೇಶದ ಬಡಜನರ ಬದುಕು ಬೆಲೆ ಏರಿಕೆಯ ಬಿಸಿಯಲ್ಲಿ ಕುದಿಯುತ್ತಿದೆ. ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಏರಿಕೆ, ಅನಿಲ ಬೆಲೆ ಹಾಗೂ ಇತರ ಅಗತ್ಯ ವಸ್ತುಗಳ ದರ ಗಗನಕ್ಕೇರಿ ಜನಸಾಮಾನ್ಯರ ಜೀವನ ಕಂಗೆಟ್ಟಿದೆ. ಬಡವ ಬದುಕು ಅಸಹನೀಯವಾಗಿದೆ. ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು, ಕಾರ್ಮಿಕರು ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕಳೆದ 11 ತಿಂಗಳಿಂದ ರೈತರು ದೇಹಲಿಯಲ್ಲಿ ಹೋರಾಟ ನಡೆದಿದೆ ಸುತ್ತಿದ್ದರೂ ಕಿವುಡ ಮೋದಿ ಸರಕಾರಕ್ಕೆ ಅನ್ನದಾತರ ಅಳಲು ಕೇಳುತ್ತಿಲ್ಲ. ಮಾಧ್ಯಮಗಳೂ ಕೂಡ ಕಣ್ಣು ಮುಚ್ಚಿಕೊಂಡಿವೆ. ರೈತರು ಉಳಿದರೆ ಮಾತ್ರ ಅನ್ನ ಉಳಿಯುತ್ತದೆ ಎಂಬುದನ್ನು ಬಂಡವಾಳಶಾಹಿ ಶೋಷಕ ಸರಕಾರ ಬಿಜೆಪಿಗೆ ಅರ್ಥವಾಗುತ್ತಿಲ್ಲ. ರೈತರ ಪರವಾಗಿ ನಿಲ್ಲಬೇಕಾದ ಬಿಜೆಪಿ ಸರಕಾರ ಪೊಲೀಸರ ಮೂಲಕ ಹೋರಾಟ ನಿರತ ರೈತರ ಮೇಲೆ ಗುಂಡಿನ ದಾಳಿ ನಡೆಸಿದೆ. ಲಾಠಿ ಏಟಿನಿಂದ ರೈತರ ಬೆನ್ನಿಗೆ ಗಾಯ ಮಾಡಿದೆ. ಇದು ರೈತಪರ ಸರಕಾರವಲ್ಲ ಎಂದು ವಾಗ್ದಾಳಿ ನಡೆಸಿದ ವೀರಭದ್ರಪ್ಪ, ಸೆಪ್ಟೆಂಬರ್ 27 ರಂದು ಕರೆ ನೀಡಲಾಗಿರುವ ಭಾರತ ಬಂದ್ ಹೋರಾಟವನ್ನು ಬೆಂಬಲಿಸುವ ಮೂಲಕ ಜನರು ನಾವು ರೈತಪರ ಎಂಬುದನ್ನುಸಾಬೀತು ಪಡಿಸಬೇಕು. ಆ ಮೂಲಕ ಮೋದಿ ಅಹಂಕಾರಕ್ಕೆ ಸೂಕ್ತ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.

ಆರ್ ಕೆ ಎಸ್ ರೈತ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ.ಕೆ, ಮುಖಂಡರಾದ ಶರಣು ಹೇರೂರ, ಗೌತಮ ಪರತೂರಕರ, ವೆಂಕಟೇಶ್ ದೇವದುರ್ಗ, ವಿಠ್ಠಲ ರಾಠೋಡ, ಗೋವಿಂದ ಯಾಳವಾರ, ರಾಜು ಒಡೆಯರ, ಯೆಸಪ್ಪಾ ಕೇದಾರ, ಶ್ರೀಶೈಲ ಕೆಂಚಗುಂಡಿ, ಅರೂಣ ಹಿರೆಬಾನರ, ಅವಿನಾಶ್ ಒಡೆಯರ್ ಜೀಪ್ ಜಾಥಾದಲ್ಲಿ ಪಾಲ್ಗೊಂಡಿದ್ದರು. ರಾವೂರ, ಇಂಗಳಗಿ, ವಾಡಿ, ಕುಂದನೂರ, ಹಳಕರ್ಟಿ, ಬಳವಡಗಿ, ಕೊಂಚೂರ, ನಾಲವಾರ, ಕೊಲ್ಲೂರ, ಲಾಡ್ಲಾಪುರ, ಅಣ್ಣಿಕೇರಾ ಗ್ರಾಮಗಳು ಸೇರಿದಂತೆ ಚಿತ್ತಾಪುರ ತಾಲೂಕಿನಾಧ್ಯಂತ ಭಾರತ ಬಂದ್ ಪ್ರಚಾರ ಯಶಶ್ವಿಯಾಗಿ ನಡೆಯಿತು. ಈ ನಡುವೆ ಗ್ರಾಮದ ರೈತರು ಹೋರಾಟಗಾರರಿಗೆ ಧನ ಸಹಾಯ ನೀಡಿ ಚಳಿವಳಿಯನ್ನು ಬೆಂಬಲಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next