ಹೊಸದಿಲ್ಲಿ: ಟೀಮ್ ಇಂಡಿಯಾದ ಬ್ಯಾಟರ್ ಕೆ.ಎಲ್. ರಾಹುಲ್ ಬಲ ತೊಡೆಯ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಸಾಧ್ಯವಾದಷ್ಟು ಬೇಗ ಟೀಮ್ ಇಂಡಿಯಾಕ್ಕೆ ಮರಳುವ ವಿಶ್ವಾಸ ಅವರದಾಗಿದೆ.
“ಎಲ್ಲರಿಗೂ ಹಾಯ್. ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾದೆ. ಇದನ್ನು ಯಶಸ್ವಿಗೊಳಿಸಿದ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬಂದಿಗೆ ಧನ್ಯವಾದಗಳು. ಸಾಧ್ಯವಾದಷ್ಟು ಬೇಗ ತಂಡವನ್ನು ಕೂಡಿಕೊಳ್ಳುವ ವಿಶ್ವಾಸ ನನ್ನದು’ ಎಂದು ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಆರ್‌ಸಿಬಿ ಎದುರಿನ ಐಪಿಎಲ್ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ನಡೆಸುತ್ತಿದ್ದಾಗ ರಾಹುಲ್ ತೊಡೆಯ ನೋವಿಗೆ ಸಿಲುಕಿದ್ದರು. ಇದು ಗಂಭೀರವಾಗಿ ಪರಿಣಮಿಸಿದ ಕಾರಣ ಕೂಟದಿಂದಲೇ ಬೇರ್ಪಡಬೇಕಾಯಿತು.
31 ವರ್ಷದ ಕೆ.ಎಲ್. ರಾಹುಲ್ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದಲೂ ಹಿಂದೆ ಸರಿದಿದ್ದಾರೆ. ಈ ಸ್ಥಾನಕ್ಕೆ ಇಶಾನ್ ಕಿಶನ್ ಆಯ್ಕೆಯಾಗಿದ್ದಾರೆ. ಏಷ್ಯಾ ಕಪ್ ವೇಳೆ ರಾಹುಲ್ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ.