Advertisement

ಮೆದುಳಿನ ರಕ್ತನಾಳ ಗಂಟಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

04:04 PM Sep 01, 2022 | Team Udayavani |

ಹುಬ್ಬಳ್ಳಿ: ಮೆದುಳಿನಲ್ಲಿ ರಕ್ತನಾಳದ ಗಂಟು ಸಾಮಾನ್ಯವಾಗಿ ಮಿಲಿಮೀಟರ್‌ನಲ್ಲಿ ಇರುತ್ತದೆ. ಆದರೆ ಮಹಿಳೆಯೊಬ್ಬರ ಮೆದುಳಿನ ರಕ್ತನಾಳಕ್ಕೆ ಬೆಳೆದಿದ್ದ ಸುಮಾರು 10.5 ಸೆಂ.ಮೀ. ಗಾತ್ರದ ಗಂಟಿಗೆ ಮಹಾರಾಷ್ಟ್ರದ ಕೊಲ್ಲಾಪುರ ಕನೇರಿಯ ಸಿದ್ಧಗಿರಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

Advertisement

ಕರ್ನಾಟಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಮಹಿಳೆಯೊಬ್ಬರಿಗೆ ಮೆದುಳಿನ ರಕ್ತನಾಳದಲ್ಲಿ ದೊಡ್ಡ ಗಂಟು ಇರುವುದು ಪತ್ತೆಯಾಗಿತ್ತು. ಸಾಮಾನ್ಯವಾಗಿ ಮೆದುಳಿನ ರಕ್ತನಾಳಕ್ಕೆ 6-7 ಮಿ.ಮೀ.ನಷ್ಟು ಗಂಟು ಇದ್ದರೂ ರೋಗಿ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತದೆ. ಆದರೆ ಮಹಿಳೆಯ ರಕ್ತನಾಳದಲ್ಲಿ ಬೆಳೆದ ಗಂಟಿನ ಗಾತ್ರ 10.5 ಸೆ.ಮೀ. ಆಗಿತ್ತು. ಮಹಿಳೆ ಬೆಂಗಳೂರು ಇನ್ನಿತರೆ ಕಡೆಗಳಲ್ಲಿ ತಪಾಸಣೆ-ಚಿಕಿತ್ಸೆ ಕೈಗೊಂಡಿದ್ದರು.

ಗಂಟಿನ ಗಾತ್ರ ದೊಡ್ಡದಾಗಿದ್ದರಿಂದ ಅದರ ಶಸ್ತ್ರಚಿಕಿತ್ಸೆ ಅತ್ಯಂತ ಕ್ಲಿಷ್ಟಕರ, ಮೆದುಳಿನ ಬೈಪಾಸ್‌ ಕೈಗೊಂಡರೂ ಚಿಕಿತ್ಸೆ ವೇಳೆ ಇಲ್ಲವೆ ಚಿಕಿತ್ಸೆ ನಂತರ ರೋಗಿ ಬದುಕುಳಿಯುವ ಸಾಧ್ಯತೆ ಕಡಿಮೆ ಎಂಬ ಆತಂಕ ಜತೆಗೆ ಅಂತಹ ತಜ್ಞ ವೈದ್ಯರ ಲಭ್ಯತೆ ಇಲ್ಲದ ಕಾರಣಕ್ಕೋ ಒಟ್ಟಿನಲ್ಲಿ ಕಳೆದ ಎಂಟು ವರ್ಷಗಳಿಂದ ಮಹಿಳೆ ನೋವುಂಡಿದ್ದರಾದರೂ ಅವರಿಗೆ ಶಸ್ತ್ರಚಿಕಿತ್ಸೆ ಸಾಧ್ಯವಾಗಿರಲಿಲ್ಲ. ಇದರಿಂದ ಮಹಿಳೆಯ ಎರಡು ಕಣ್ಣುಗಳಲ್ಲಿ ದೃಷ್ಟಿಯೂ ನಷ್ಟವಾಗಿತ್ತು.

ಸಿದ್ಧಗಿರಿ ಆಸ್ಪತ್ರೆಗೆ ಆಗಮಿಸಿದ್ದ ಸುಮಾರು 49 ವರ್ಷ ವಯೋಮಾನದ ಈ ಮಹಿಳೆಯನ್ನು ತಪಾಸಣೆಗೊಳಪಡಿಸಿ ಮೆದುಳಿನ ರಕ್ತನಾಳಕ್ಕೆ ಇರುವುದು ವೈದ್ಯಕೀಯ ಲೋಕಕ್ಕೆ ಸವಾಲು ಎನ್ನುವ ರೂಪದ ಸುಮಾರು 10.5 ಸೆ.ಮೀ.ಗಾತ್ರದ ಗಂಟು ಎಂದು ತಿಳಿದ ನಂತರ ನರರೋಗ ತಜ್ಞ ಡಾ|ಶಿವಶಂಕರ ಮರಜಕ್ಕೆ ಅವರು ಶಸ್ತ್ರಚಿಕಿತ್ಸೆಯ ಧೈರ್ಯಕ್ಕೆ ಮುಂದಾಗಿದ್ದರು.

ಇದಕ್ಕೆ ಅರವಳಿಕೆ ತಜ್ಞ ಡಾ|ಪ್ರಕಾಶ ಭರಮಗೊಂಡರ, ಹೃದ್ರೋಗ ತಜ್ಞ ಡಾ|ಅಮೋಲ್‌ ಬೋಜೆ ಹಾಗೂ ಸಿಬ್ಬಂದಿ ಸಾಥ್‌ ನೀಡಿದ್ದರು. ಸುಮಾರು 11 ತಾಸುಗಳ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ದಾಖಲೆ ಸೃಷ್ಟಿಸಿದೆ.

Advertisement

ಸಂಸ್ಕಾರ ವಿಭಾಗ: ನರರೋಗಕ್ಕೆ ಸಂಬಂಧಿಸಿದಂತೆ ಒಂದೇ ವೇದಿಕೆಯಡಿ ಎಲ್ಲ ರೀತಿ ತಪಾಸಣೆ, ಚಿಕಿತ್ಸೆ, ಶಸ್ತ್ರಚಿಕಿತ್ಸೆ ನಿಟ್ಟಿನಲ್ಲಿ ಈ ಆಸ್ಪತ್ರೆಯಲ್ಲಿ ಸಂಸ್ಕಾರ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಮೆದುಳಿನ ರಕ್ತನಾಳದ ಗಂಟು ಹಾಗೂ ರಕ್ತ ಹೆಪ್ಪುಗಟ್ಟುವಿಕೆಯ ಶಸ್ತ್ರಚಿಕಿತ್ಸೆಗೆ ದೇಶದಲ್ಲಿನ ಪ್ರಮುಖ ಆರೇಳು ಜನ ವೈದ್ಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿರುವ ನರರೋಗ ತಜ್ಞ ಡಾ|ಶಿವಶಂಕರ ಮರಜಕ್ಕೆ ನೇತೃತ್ವದಲ್ಲಿ ನಿತ್ಯನರರೋಗಕ್ಕೆ ಸಂಬಂಧಿಸಿದ ಒಂದೆರಡು ಶಸ್ತ್ರಚಿಕಿತ್ಸೆ ನಡೆಯುತ್ತಿದೆ.

ಬಡವರಿಗೆ ನೆರವಾಗುವ, ಕಡಿಮೆ ದರದಲ್ಲಿಯೇ ಎಲ್ಲರಿಗೂ ಉತ್ತಮ ವೈದ್ಯಕೀಯ ಸೇವೆ ದೊರೆಯಬೇಕು ಎಂಬ ಉದ್ದೇಶದೊಂದಿಗೆ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಆರಂಭಿಸಿದ್ದ ಆಸ್ಪತ್ರೆಯ ಸೇವಾ ಕಾರ್ಯ, ಮಹತ್ವದ ಉದ್ದೇಶ ಅರಿತು ಕಳೆದ ಎಂಟು ವರ್ಷಗಳ ಹಿಂದೆ ಡಾ|ಮರಜಕ್ಕೆ ಅವರು ನರರೋಗ ತಜ್ಞರಾಗಿ ಆಗಮಿಸಿದ್ದು, ಈತನಕ ಸುಮಾರು ಐದು ಸಾವಿರದಷ್ಟು ಶಸ್ತ್ರಚಿಕಿತ್ಸೆ ಕೈಗೊಂಡಿದ್ದಾರೆ.

ಉಚಿತ ಚಿಕಿತ್ಸೆ: ನರರೋಗಕ್ಕೆ ಸಂಬಂಧಿಸಿದಂತೆ ಆಯುಷ್ಮಾನ್‌ ಕಾರ್ಡ್‌ ಇದ್ದವರು ಸಿದ್ಧಗಿರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ-ಶಸ್ತ್ರಚಿಕಿತ್ಸೆ ಪಡೆಯಲು ರಾಜ್ಯ ಸರಕಾರ ಅವಕಾಶ ನೀಡಿದೆ. ನಿಪ್ಪಾಣಿಯ ಮಹಿಳೆಗೆ ಮೆದುಳಿನ ರಕ್ತನಾಳ ಗಂಟು ಶಸ್ತ್ರಚಿಕಿತ್ಸೆಯನ್ನು ಬೇರೆ ಆಸ್ಪತ್ರೆಯಲ್ಲಿ ಮಾಡಿಸಿದ್ದರೆ 10-11 ಲಕ್ಷ ರೂ. ವೆಚ್ಚವಾಗುತ್ತಿತ್ತು. ಆದರೆ ಆಯುಷ್ಮಾನ್‌ ಕಾರ್ಡ್‌ ಹೊಂದಿದ್ದ ಕಾರಣ ಶಸ್ತ್ರಚಿಕಿತ್ಸೆಗೆ ಕರೆಸಿದ್ದ ಹೃದ್ರೋಗ ತಜ್ಞರ ಶುಲ್ಕ ಹೊರತುಪಡಿಸಿದರೆ ಉಳಿದದ್ದು ಉಚಿತವಾಗಿದೆ.

ಆಯುಷ್ಮಾನ್‌ ಕಾರ್ಡ್‌ ಹೊಂದಿದವರು ನರರೋಗಕ್ಕೆ ಸಂಬಂಧಿಸಿದಂತೆ ಶ್ರೀಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕರ್ನಾಟಕ ಸರಕಾರ ಅನುಮತಿ ನೀಡಿದೆ. ಕರ್ನಾಟಕದ ಜನತೆ ಇದರ ಪ್ರಯೋಜನ ಪಡೆಯಬಹುದಾಗಿದೆ.ಕಾರ್ಡ್‌ ಹೊಂದಿದವರಿಗೆ ಉಚಿತ ಚಿಕಿತ್ಸೆ ದೊರೆಯುತ್ತದೆ. ರೋಗಿಗೆ ಆಸ್ಪತ್ರೆಯಲ್ಲಿಯೇ ಊಟ ನೀಡಲಾಗುತ್ತದೆ. ರೋಗಿ ಜತೆಯಲ್ಲಿ ಬಂದವರಿಗೆ ಶ್ರೀಮಠದಲ್ಲಿ ಪ್ರಸಾದ ವ್ಯವಸ್ಥೆ ಇರುತ್ತದೆ. ಬಡ ರೋಗಿಗಳಿದ್ದವರು ಕೇವಲ ಬಸ್‌ ಚಾರ್ಚ್‌ ವ್ಯಯ ಮಾಡಿಕೊಂಡು ಬಂದರೆ ಸಾಕು. ಬಡವರು ಸೇರಿದಂತೆ ಎಲ್ಲ ವರ್ಗದವರಿಗೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕೆಂಬುದೇ ಶ್ರೀಮಠದ ಆಶಯವಾಗಿದೆ.
ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ಆಸ್ಪತ್ರೆಗೆ ಆಗಮಿಸಿದ್ದ ಮಹಿಳೆಯೊಬ್ಬರ ಮೆದುಳಿನ ರಕ್ತನಾಳದಲ್ಲಿ ಬೆಳೆದ 10.5 ಸೆ.ಮೀ. ಗಂಟು ಹೊರತೆಗೆಯುವ ಶಸ್ತ್ರಚಿಕಿತ್ಸೆ ಸವಾಲಿನ ಕೆಲಸವಾಗಿತ್ತು. ಸಾಮಾನ್ಯವಾಗಿ ಮಿ.ಮೀಟರ್‌ ಗಳಲ್ಲಿರುವ ಗಂಟು ಸೆಂ.ಮೀ.ಗಾತ್ರದಲ್ಲಿ ಇತ್ತು. ಇದೊಂದು ಐತಿಹಾಸಿಕ ಶಸ್ತ್ರಚಿಕಿತ್ಸೆ ಎಂದರೂ ತಪ್ಪಾಗಲಾರದು. ರೋಗಿ ಚೇತರಿಸಿಕೊಂಡಿದ್ದು, ಸಾಮಾನ್ಯ ಸ್ಥಿತಿಗೆ ಮರಳಿದ್ದಾರೆ. ಇದೀಗ ಸ್ವಲ್ಪ ಪ್ರಮಾಣದಲ್ಲಿ ಎಡಗಣ್ಣಿನ ದೃಷ್ಟಿಯೂ ಕಾಣತೊಡಗಿದೆ.
ಡಾ|ಶಿವಶಂಕರ ಮರಜಕ್ಕೆ, ನರರೋಗ ತಜ್ಞ

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next