Advertisement

Forest Department ಯಶಸ್ವಿ ಕಾರ್ಯಾಚರಣೆ : ಮಡಿಕೇರಿ: ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ

01:05 AM Aug 16, 2023 | Team Udayavani |

ಮಡಿಕೇರಿ: ಅರೆಕಾಡು ಗ್ರಾಮದಲ್ಲಿ ನಿರಂತರ ಉಪಟಳ ನೀಡುತ್ತ ವ್ಯಕ್ತಿಯೊಬ್ಬರ ಜೀವಹಾನಿಗೆ ಕಾರಣವಾಗಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

Advertisement

ಗ್ರಾಮದ ಮದರ ಕುಪ್ಪೆಯಲ್ಲಿ ಪತ್ತೆಯಾದ ಸುಮಾರು 16 ವರ್ಷದ ಒಂಟಿ ಸಲಗವನ್ನು ಅರಿವಳಿಕೆ ನೀಡಿ ಸೆರೆ ಹಿಡಿದು ಲಾರಿ ಮೂಲಕ ದುಬಾರೆ ಸಾಕಾನೆ ಶಿಬಿರಕ್ಕೆ ಸಾಗಿಸಲಾಯಿತು. ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ಭೀಮ, ದುಬಾರೆ ಸಾಕಾನೆ ಶಿಬಿರದ ಸುಗ್ರೀವ ಹಾಗೂ ಹರ್ಷನನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.

ಅರಣ್ಯ ಅಧಿಕಾರಿಗಳಾದ ಕೂಡಕಂಡಿ ಸುಬ್ರಾಯ, ಗೋಪಾಲ, ಪೂವಯ್ಯ, ಬಾಷ, ಹನುಮಂತರಾಜು ಹಾಗೂ ಸಿಬಂದಿ ಪಾಲ್ಗೊಂಡಿದ್ದರು.

ಕೆಲವು ದಿನಗಳ ಹಿಂದೆ ಅರೆಕಾಡು ಪರಿಸರದಲ್ಲಿ ಟ್ರ್ಯಾಕ್ಟರ್‌ ಓಡಿಸುತ್ತಿದ್ದ ದೇವಪ್ಪ ಅವರು ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು. ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಕಳೆೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಿದ ಇಲಾಖೆಯು ಆನೆಯೊಂದನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಆ ಆನೆ ಇದಲ್ಲ!
ಸೆರೆ ಸಿಕ್ಕ ಆನೆಯು ದೇವಪ್ಪ ಅವರನ್ನು ಬಲಿ ಪಡೆದ ಆನೆ ಅಲ್ಲವೆಂದು ಗ್ರಾಮದ ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸುತ್ತಿದ್ದ ಕಾಡಾನೆಯ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಅದಕ್ಕೆ ದೊಡ್ಡ ದಂತಗಳಿದ್ದವು, ಸೆರೆ ಸಿಕ್ಕ ಆನೆಯದ್ದು ಸಣ್ಣ ದಂತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next